Advertisement

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

01:26 AM Apr 21, 2024 | Team Udayavani |

ಮೈಸೂರು: ನಾನು ಹಾಲಿ ಸಂಸದೆಯಾಗಿದ್ದು, ಎನ್‌ಡಿಎ ಅಭ್ಯರ್ಥಿಗೆ ನನ್ನ ಸ್ಥಾನ ಬಿಟ್ಟುಕೊಟ್ಟು ಬಿಜೆಪಿ ಸೇರಿದ್ದೇನೆ. ಇದರ ಅರ್ಥ ಮೈತ್ರಿ ಅಭ್ಯರ್ಥಿ ( ಕುಮಾರಸ್ವಾಮಿ)ಗೆ ನನ್ನ ಸಂಪೂರ್ಣ ಸಹಕಾರ ಇದ್ದಂತೆ ಎಂದು ಸಂಸದೆ ಸುಮಲತಾ ಅಂಬರೀಶ್‌ ಸ್ಪಷ್ಟಪಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುವ ಸಂಬಂಧ ಪ್ರತಿಕ್ರಿಯಿಸಿ, ವಾರದ ಹಿಂದೆಯಷ್ಟೇ ಬಿಜೆಪಿ ಸೇರಿದ್ದೇನೆ. ಪಕ್ಷ ನನಗೆ ಎಲ್ಲಿ ಪ್ರಚಾರ ಮಾಡಲು ಹೇಳುತ್ತದೆಯೋ ಅಲ್ಲಿ ಕೆಲಸ ಮಾಡುತ್ತೇನೆ ಎಂದರು.

Advertisement

ತಾವು ಗೆದ್ದಿರುವ ಕ್ಷೇತ್ರವನ್ನು ಯಾರೂ ಬಿಟ್ಟುಕೊಡಲ್ಲ. ಆದರೆ, ನಾನು ಬಿಟ್ಟು ಕೊಟ್ಟಿದ್ದೇನೆ. ನಾನು ಯಾವಾಗ ಬಿಜೆಪಿ ಸೇರ್ಪಡೆಯಾ ದೆನೋ ಆಗಲೇ ಎನ್‌ಡಿಎ ಅಭ್ಯರ್ಥಿ ಪರ ಇದ್ದೇನೆ ಎಂದರ್ಥ ಎಂದು ಹೇಳಿದರು. ಮಂಡ್ಯ ಭಾಗದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಸ್ಟಾರ್‌ ಚಂದ್ರು ಪರ ನಟ ದರ್ಶನ್‌ ಪ್ರಚಾರ ನಡೆಸುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ದರ್ಶನ್‌ ಯಾರಿಗೆ ಬೆಂಬಲ ನೀಡಬೇಕು ಎಂಬುದು ಅವರಿಗೆ ಬಿಟ್ಟ ವಿಚಾರ. ಅವರಿಗೆ ಸಹಕಾರ ನೀಡಿದವರ ಪರವಾಗಿ ನಿಲ್ಲುತ್ತಾರೆ. ದರ್ಶನ್‌ಗೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವಂತೆ ಹೇಳಲ್ಲ. 2019ರ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗಿದ್ದಾಗಲೂ ದರ್ಶನ್‌ಗೆ ಬಾ ಎಂದಿರಲಿಲ್ಲ. ಅವರೇ ಬಂದು ನನ್ನ ಪರವಾಗಿ ಪ್ರಚಾರ ಮಾಡಿದ್ದರು ಎಂದರು.

ಸುಮಮ್ಮ ಏನೇ ಕೆಲಸ ಹೇಳಿದರೂ ಮಾಡುತ್ತೇನೆ ಎಂದು ದರ್ಶನ್‌ ಹೇಳಿದ್ದರು. ಅದು ನನ್ನ ವಿಚಾರದಲ್ಲಿ ಮಾತ್ರವೇ ಹೊರತು ಬೇರೆಯವರ ವಿಚಾರದಲ್ಲಿ ಅಲ್ಲ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ದರ್ಶನ್‌ ಅವರು ಮಂಡ್ಯದಲ್ಲಿ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಅವರು ಯಾವ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುತ್ತಾರೆ ಎಂಬುದು ಅವರಿಗೆ ಬಿಟ್ಟ ವಿಚಾರ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next