ಮಂಡ್ಯ: ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಎರಡು ದಿನ ಮುಂಚೆ ದುಡ್ಡು ಕೊಟ್ಟಿದ್ದರಿಂದ ನಮಗೆ ಸೋಲಾಯಿತು ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.
ಬಿಜೆಪಿ ಸೋಲಿನ ಬಗ್ಗೆ ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪರಾಮರ್ಶೆ ನಡೆಸುತ್ತಿದ್ದ ಬಗ್ಗೆ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡುವಾಗ, ಬಿಜೆಪಿ ಅಭ್ಯರ್ಥಿ ಎರಡು ದಿನ ಮುಂಚೆ ದುಡ್ಡುಕೊಟ್ಟರು. ಇದರಿಂದ ನಮಗೆ ಸೋಲಾಯಿತು ಎಂದು ವಿಶ್ಲೇಷಿಸಿದರು. ತಕ್ಷಣ ಪಕ್ಕದಲ್ಲಿದ್ದ ಸಚಿವ ಕೆ.ಗೋಪಾಲಯ್ಯ ಸೇರಿದಂತೆ ಬಿಜೆಪಿ ಮುಖಂಡರು ಮೀಡಿಯಾದವರು ಇದ್ದಾರೆ ಎಂದು ಎಚ್ಚರಿಸಿದ ಮೇಲೆ ಸಚಿವರು ತಮ್ಮ ವಿಶ್ಲೇಷಣೆಯನ್ನು ಮೊಟಕುಗೊಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮೊದಲ ಬಾರಿಗೆ ಬಿಜೆಪಿ ಕಚೇರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ವಿಧಾನ ಪರಿಷತ್ ಚುನಾವಣೆ ಸೋಲಿನ ಬಗ್ಗೆ ವಿಶ್ಲೇಷಣೆ ನಡೆಯುವಾಗ ಹಣ ಹಂಚುವ ವಿಚಾರವನ್ನು ನಾರಾಯಣಗೌಡ ಚರ್ಚೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಎಚ್ಚೆತ್ತ ಸಚಿವ ಗೋಪಾಲಯ್ಯ, ನಾರಾಯಣಗೌಡರ ಶರ್ಟ್ ಎಳೆದು ಮೀಡಿಯಾ ಇದೆ ಎಂದ ಮೇಲೆ ಸಚಿವ ನಾರಾಯಣಗೌಡ ತಕ್ಷಣ ಸಾರಿ ಎಂದು ಬೇರೆ ವಿಚಾರ ತೆಗೆದು ಭಾಷಣ ಮುಂದುವರೆಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದಕ್ಕೆ ನನಗೆ ನೋವಿದೆ. ಜನ ನನ್ನ ಬಗ್ಗೆ ಏನೋ ಮಾತನಾಡಿದ್ದಾರೆ. ಅದು ಸತ್ಯಕ್ಕೆ ದೂರ. ಈ ವಿಚಾರದಲ್ಲಿ ನಾನು ಯಾವ ದೇವಸ್ಥಾನದಲ್ಲಿ ಬೇಕಾದರೂ ಪ್ರಮಾಣ ಮಾಡುತ್ತೇನೆ. ಏಕೆಂದರೆ ನಾನು ಬಿಜೆಪಿ ಗೆಲ್ಲಿಸಬೇಕು ಎಂಬುದನ್ನು ಬಿಟ್ಟರೆ ಕಾಂಗ್ರೆಸ್ ಅಥವಾ ಜೆಡಿಎಸ್ ಜತೆಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳಬೇಕೆಂಬ ಉದ್ದೇಶ ನನಗಿರಲಿಲ್ಲ.ನಮ್ಮ ವ್ಯಕ್ತಿ ಎರಡು ದಿನ ಮುಂಚೆಯೇ ದುಡ್ಡು ಕೊಟ್ಟರು. ಬೇರೆ ಪಕ್ಷದವರು ತಡವಾಗಿ ನೀಡಿದರು ಎಂದು ಸೋಲಿನ ಬಗ್ಗೆ ವಿಮರ್ಶಿಸಿದರು.
ಜೆಡಿಎಸ್ ೨೪೦೦ ಮತ ಇದೆ ಎಂದಿದ್ದರು. ಆದರೆ ಕೊನೆಗೆ ಪಡೆದಿದ್ದು ಕೇವಲ ೧೭೦೦ ಮಾತ್ರ. ಇದು ನಮ್ಮ ತಪ್ಪಾ? ನಾವು ಮತ ಪಡೆಯುವಲ್ಲಿ ವಿಫಲರಾದೆವು. ನಮ್ಮ ಅಭ್ಯರ್ಥಿಯೇ ಅವಿತುಕೊಂಡಾಗ ನಾವು ಏನು ಮಾಡಲು ಸಾಧ್ಯ? ನಾವು ಎಲ್ಲ ರೀತಿಯ ಸ್ವಾತಂತ್ರ್ಯ ನೀಡಿದರೂ ಚುನಾವಣೆಯ ಕಡೆಯ ಕ್ಷಣದಲ್ಲಿ ನಮ್ಮ ಅಭ್ಯರ್ಥಿ ಹೊರ ಬರದಿರುವುದು ನಮಗೆ ಹಿನ್ನೆಡೆಯಾಯಿತು ಎಂದರು.
ಈ ಚುನಾವಣೆಯಲ್ಲಿ ನನ್ನ ತಪ್ಪಿದ್ದರೂ ನಾನು ಒಪ್ಪಿಕೊಳ್ಳಲು ತಯಾರಿದ್ದೇನೆ. ಈ ಚುನಾವಣೆಯ ಸೋಲಿನಿಂದ ನಾವು ನೊಂದುಕೊಳ್ಳುವ ಅವಶ್ಯಕತೆ ಇಲ್ಲ. ಮುಂದೆ ನಾನು ಗೋಪಾಲಯ್ಯ ಜತೆ ಸೇರಿ ಜಿಲ್ಲೆಯಲ್ಲಿ ಪಕ್ಷ ಕಟ್ಟಲಿದ್ದೇವೆ. ಈ ಸೋಲಿನಿಂದ ಕುಗ್ಗುವುದು ಬೇಡ. ನಾವು ಅಭ್ಯರ್ಥಿಯ ಬಗ್ಗೆ ಪರಿಶೀಲಿಸದೇ ಟಿಕೆಟ್ ನೀಡಿದ್ದು ತಪ್ಪು ಎಂದಾಗ ಮಧ್ಯ ಪ್ರವೇಶಿಸಿದ ಮುಖಂಡರೊಬ್ಬರು ಮತ್ತೆ ಈ ಬಗ್ಗೆ ಮಾತನಾಡಬೇಡಿ. ಭಾಷಣ ಮುಗಿಸಿ ಎಂದಾಗ ನಾರಾಯಣಗೌಡ ತಮ್ಮ ಭಾಷಣ ಮೊಟಕುಗೊಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್, ಪಕ್ಷದ ಕಾರ್ಯಕಾರಿಣಿ ಸದಸ್ಯ ಸಿದ್ದರಾಮಯ್ಯ ಸೇರಿದಂತೆ ಮತ್ತಿತರರಿದ್ದರು.