Advertisement

ಶೃತಿ ವಿರುದ್ಧ ಮಾನನಷ್ಟ ಮೊಕದ್ದಮೆ: 29ಕ್ಕೆ ವಿಚಾರಣೆ ಮುಂದೂಡಿಕೆ

06:00 AM Oct 27, 2018 | Team Udayavani |

ಬೆಂಗಳೂರು: “ಮೀ ಟೂ’ ವೇದಿಕೆ ಮೂಲಕ ಕಿರುಕುಳ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್‌ ವಿರುದ್ಧ ನಟ ಅರ್ಜುನ್‌ ಸರ್ಜಾ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಹಾಗೂ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸುವ ಕುರಿತ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ಮೆಯೋಹಾಲ್‌ನ ಎಸಿಸಿಎಂಎಂ ನ್ಯಾಯಾ ಲಯ ಶೃತಿಗೆ ನೋಟಿಸ್‌ ಜಾರಿ ಮಾಡಿ ಅ.29ಕ್ಕೆ ವಿಚಾರಣೆ ಮುಂದೂಡಿದೆ.

Advertisement

ಅರ್ಜಿ ವಿಚಾರಣೆ ನಡೆಸಿದ 22ನೇ ಸಿಸಿಎಚ್‌ ನ್ಯಾಯಾಲಯದ ನ್ಯಾಯಾಧೀಶರರಾದ ಜೆ.ಆರ್‌. ಮೆಂಡೋನ್ಸಾ ಈ ಆದೇಶ ನೀಡಿದ್ದಾರೆ. ಇದಕ್ಕೂ ಮೊದಲು ವಕೀಲೆ ಜೈನಾ ಕೊಥಾರಿ ಅವರು ನಟಿ ಶೃತಿ ಹರಿಹರನ್‌ ಪರ ವಾದ ಮಂಡಿಸಲು ಅವಕಾಶ ನೀಡಬೇಕೆಂದು ಕೋರ್ಟ್‌ಗೆ ಮನವಿ ಮಾಡಿದರು. ಈ ಮನವಿ ಪುರಸ್ಕರಿಸಿದ ನ್ಯಾಯಾಧೀಶರು ಪ್ರಕರಣದಲ್ಲಿ ಏಕಮುಖವಾಗಿ ತೀರ್ಪು ನೀಡಲು ಸಾಧ್ಯವಿಲ್ಲ. ನಟಿ ಶೃತಿ ಹರಿಹರನ್‌ ಪರ ವಕೀಲರು ಕೋರ್ಟ್‌ಗೆ ಕೇವಿಯಟ್‌ ಸಲ್ಲಿಸಿದ್ದಾರೆ. ಈ ಸಂಬಂಧ ಎರಡೂ ಕಡೆಯ ವಾದ-ಪ್ರತಿ ವಾದ ಆಲಿಸಿದ ಬಳಿಕ ತೀರ್ಪು ಪ್ರಕಟಿಸಲಾಗುವುದು ಎಂದು ಸೂಚಿಸಿದರು. ಇದೇ ವೇಳೆ ಅ.29ರಂದು ಲಿಖೀತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿ ಶೃತಿ ಹರಿಹರನ್‌ಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆ ಮುಂದೂಡಿದರು.

ಜತೆಗೆ ಈ ಮಧ್ಯಂತರ ಆದೇಶ ಪ್ರತಿಯನ್ನು ಪ್ರತಿವಾದಿ ವಕೀಲರಿಗೂ ನೀಡುವಂತೆ ಅರ್ಜುನ್‌ ಸರ್ಜಾ ಪರ ವಕೀಲರಿಗೆ
ಸೂಚಿಸಿದರು. ತಮ್ಮ ಕಕ್ಷಿದಾರರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಅವಮಾನ ಮಾಡಿದ್ದಾರೆಂದು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದ ಅರ್ಜುನ್‌ ಸರ್ಜಾ ಪರ ವಕೀಲ ಶ್ಯಾಮ್‌ಸುಂದರ್‌, ಯಾವುದೇ ಮಾನಹಾನಿ ಹೇಳಿಕೆ ನೀಡದಂತೆ ಶೃತಿ ಅವರಿಗೆ ನಿರ್ಬಂಧ ವಿಧಿಸಬೇಕೆಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಶುಕ್ರವಾರ ಬೆಳಗ್ಗೆ ಅರ್ಜಿ ವಿಚಾರಣೆಗೂ ಮೊದಲು
ಶೃತಿ ಹರಿಹರನ್‌ ಪರ ವಾದ ಮಂಡಿಸಲು ಜೈನಾ ಕೊಥಾರಿ ಮನವಿ ಸಲ್ಲಿಸಿದ್ದರು.

ಇದಕ್ಕೆ ಆಕ್ಷೇಪಿಸಿದ ಅರ್ಜುನ್‌ ಸರ್ಜಾ ಪರ ವಕೀಲರು, ನಟಿ ಶೃತಿ ಕೋರ್ಟ್‌ನಲ್ಲಿ ಕೇವಿಯಟ್‌ ಸಲ್ಲಿಸಿಲ್ಲ. ಅಲ್ಲದೆ, ನಾವು
ಸಲ್ಲಿಸಿರುವ ಮಧ್ಯಂತರ ಅರ್ಜಿ ಕುರಿತು ನ್ಯಾಯಾಲಯದಿಂದ ನೋಟಿಸ್‌ ಕೂಡ ಜಾರಿ ಮಾಡಿಲ್ಲ. ಹೀಗಾಗಿ ಯಾವ
ಆಧಾರದ ಮೇಲೆ ವಾದ ಮಂಡಿಸಲು ಸಾಧ್ಯ? ನ್ಯಾಯಾಲಯ ಅವಕಾಶ ನೀಡಬಾರದೆಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ವಕೀಲೆ ಜೈನಾ ಕೊಥಾರಿ, ಶೃತಿ ಒಪ್ಪಿಗೆ ನೀಡಿರು ವುದರಿಂದಲೇ ಕೋರ್ಟ್‌ಗೆ ಹಾಜರಾಗಿದ್ದೇನೆ. ಸ್ವಯಂ ಪ್ರೇರಿತವಾಗಿ ಬಂದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಬಳಿಕ ಕೋರ್ಟ್‌ ಮಧ್ಯಾಹ್ನ 3 ಗಂಟೆಗೆ ವಿಚಾರಣೆ ಮುಂದೂಡಿತು. ಅ.29ಕ್ಕೆ ವಿಚಾರಣೆ ಮುಂದೂಡಲಾಯಿತು.

ಕೋರ್ಟ್‌ ಸೂಚನೆ ಹೊರತಾಗಿಯೂ ನಮ್ಮಕಕ್ಷಿದಾರ ಅರ್ಜುನ್‌ ಸರ್ಜಾ ವಿರುದ್ಧ ಮಾಧ್ಯಮಗಳ ಮೂಲಕವಾಗಲಿ, ಸಾಮಾಜಿಕ ಜಾಲತಾಣಗಳ ಮೂಲಕವಾಗಲಿ ನಟಿ ಶೃತಿ ಹರಿಹರನ್‌ ಅವಹೇಳನಕಾರಿ ಹೇಳಿಕೆ ನೀಡಿದರೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಶ್ಯಾಮ್ ಸುಂದರ್ ಅರ್ಜುನ್‌ ಸರ್ಜಾ ಪರ ವಕೀಲರು.

Advertisement
Advertisement

Udayavani is now on Telegram. Click here to join our channel and stay updated with the latest news.

Next