ಕಲ್ಲಿಕೋಟೆ (ಕೇರಳ): ಜುಲೈ 16 ರಂದು ಅಂಕೋಲಾದದಲ್ಲಿ ಲಾರಿ ಸಮೇತ ಕೊಚ್ಚಿ ಹೋಗಿದ್ದ ಚಾಲಕ ಅರ್ಜುನ್ ಅಂತ್ಯ ಸಂಸ್ಕಾರ ಶನಿವಾರ(ಸೆ28) ಬೆಳಗ್ಗೆ ಅವರ ಹುಟ್ಟೂರು ಕನ್ನಡಿಕಲ್ ನಲ್ಲಿ ನಡೆಸಲಾಯಿತು. ಪಾರ್ಥಿವ ಶರೀರವನ್ನು ಕೊಡೊಯ್ಯುವ ವೇಳೆ ಸಾವಿರಾರು ಜನರು ಜಮಾಯಿಸಿದ್ದರು. ಅಂತಿಮ ದರ್ಶನ ಪಡೆಯಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದು ವಿಶೇಷವಾಗಿತ್ತು.
ಪಾರ್ಥಿವ ಶರೀರ ಹೊತ್ತ ಆಂಬ್ಯುಲೆನ್ಸ್ ಕನ್ನಡಿಕಲ್ ಗ್ರಾಮಕ್ಕೆ ಪ್ರವೇಶಿಸಿದಾಗ ಸ್ನೇಹಿತರು, ನೆರೆಹೊರೆಯವರು, ಚಾಲಕರು ಗೋಳಿಟ್ಟು ಅತ್ತ ಭಾವುಕ ದೃಶ್ಯಗಳು ಕಂಡು ಬಂದವು. ಪತ್ನಿ, ಪುತ್ರ, ಕುಟುಂಬ ಸದಸ್ಯರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಕೇರಳ ಅರಣ್ಯ ಸಚಿವ ಎ.ಕೆ. ಶಸೀಂದ್ರನ್, ಸಂಸದ ಎಂ.ಕೆ. ರಾಘವನ್, ಶಾಸಕಿಕೆ.ಕೆ. ರೆಮಾ ಸೇರಿದಂತೆ ಇತರ ಅಧಿಕಾರಿಗಳು ಅರ್ಜುನ್ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
71 ದಿನಗಳ ನಂತರ ಮೃತದೇಹ ಪತ್ತೆಯಾಗಿ ಡಿಎನ್‍ಎ ವರದಿ ಸಾಬೀತಾಗಿ ಕೇರಳದ ಮನೆಗೆ ಕೊಂಡೊಯ್ಯುವ ಸಂದರ್ಭ ಕರ್ನಾಟಕದ ಗಡಿಭಾಗ ತಲಪಾಡಿಯಲ್ಲಿಯೂ ಜನಪ್ರತಿನಿಧಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿ ಅಂತಿಮ ದರ್ಶನ ಪಡೆದುಕೊಂಡರು.