Advertisement

Ullal;ಜನಪ್ರತಿನಿಧಿಗಳು ಸೇರಿ ಹಲವರಿಂದ ಅರ್ಜುನ್ ಅಂತಿಮ ದರ್ಶನ

08:32 PM Sep 28, 2024 | Team Udayavani |

ಉಳ್ಳಾಲ:ಶಿರೂರು ದುರಂತದಲ್ಲಿ ಸಾವನ್ನಪ್ಪಿದ ಕೇರಳ ಕಲ್ಲಿಕೋಟೆ ಮೂಲದ ಅರ್ಜುನ್ (35) ಮೃತದೇಹ 71 ದಿನಗಳ ನಂತರ ಪತ್ತೆಯಾಗಿ ಡಿಎನ್‍ಎ ವರದಿ ಸಾಬೀತಾಗಿ ಇಂದು ಕೇರಳದ ಮನೆಗೆ ಕೊಂಡೊಯ್ಯುವ ಸಂದರ್ಭ ಗಡಿಭಾಗ ತಲಪಾಡಿಯಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿ ಅಂತಿಮ ದರ್ಶನ ಪಡೆದುಕೊಂಡರು.

Advertisement

ಸಂಜೆ ವೇಳೆ ಅಂಕೋಲಾದಿಂದ ಫ್ರೀಝರ್ ಆಂಬ್ಯುಲೆನ್ಸ್ ಮೂಲಕ ಲಾರಿ ಚಾಲಕರಾಗಿದ್ದ ಅರ್ಜುನ್ ಅಂತಿಮ ಯಾತ್ರೆಯನ್ನು ಕೈಗೊಳ್ಳಲಾಗಿತ್ತು. ಶುಕ್ರವಾರ ರಾತ್ರಿ 9 ಗಂಟೆಯಿಂದಲೇ ಮಂಜೇಶ್ವರ ಮತ್ತು ಕಾಸರಗೋಡು ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರನ್ನು ಒಳಗೊಂಡಂತೆ ಹೆಚ್ಚಿನ ಸಂಖ್ಯೆಯಲ್ಲಿ ಕೇರಳ ನಿವಾಸಿಗಳು ಜಮಾಯಿಸಿದ್ದರು.

ಮೃತದೇಹ ಕರ್ನಾಟಕ-ಕೇರಳ ಗಡಿಭಾಗ ತಲುಪುವಾಗ ತಡರಾತ್ರಿ 2 ಗಂಟೆಯಾಗಿತ್ತು. ಈ ವೇಳೆ ಆಂಬ್ಯುಲೆನ್ಸ್ ಟೋಲ್ ಬೂತ್ ದಾಟಿ ನಂತರ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು. ಹೂಗುಚ್ಛಗಳನ್ನು ಮೃತದೇಹದ ಮೇಲೆ ಇಡುವ ಮೂಲಕ ಅಂತಿಮ ದರ್ಶನ ಪಡೆದುಕೊಂಡು ಗೌರವ ಸಲ್ಲಿಸಿದರು. ಇದೇ ವೇಳೆ ಆಂಬ್ಯುಲೆನ್ಸ್‍ನಲ್ಲಿದ್ದ ಸಮಾಜಸೇವಕ, ಅರ್ಜುನನಿಗಾಗಿ ಜೀವದ ಹಂಗು ತೊರೆದು ನೆರೆ ನೀರಿನ ನಡುವೆ ನದಿಯಾಳಕ್ಕೆ ಮುಳುಗಿ ಹುಡುಕಾಡಿದ ಆಪದ್ಬಾಂಧವ ಈಶ್ವರ್ ಮಲ್ಪೆ ಅವರಿಗೂ ಗಡಿಭಾಗದ ಜನತೆ ಕೃತಜ್ಞತೆಗಳನ್ನು ಸಲ್ಲಿಸಿದರು.

Advertisement

ಲೀಗ್ ಸಮಿತಿ ಹಾಗೂ ಜನಪ್ರತಿನಿಧಿಗಳಿಂದ ಅಂತಿಮ ನಮನ 

ಪೈವಳಿಕೆ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಕೈಯ್ಯಾರ್ ಮಾತನಾಡಿ, ಕಾಸರಗೋಡು, ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಹುತೇಕ ಜನಪ್ರತಿನಿಗಳು ಅರ್ಜುನನ ಅಂತಿಮ ಸಂಸ್ಕಾರಕ್ಕಾಗಿ ಸೇರಿದ್ದೇವೆ. ಕರ್ನಾಟಕ ಸರಕಾರ ರೂ.5 ಲಕ್ಷ ಪರಿಹಾರ ಘೋಷಿಸಿದೆ. ಅದರಂತೆ ಕೇರಳ ಸರಕಾರವೂ ಪರಿಹಾರವನ್ನು ನೀಡುವ ವಿಶ್ವಾಸವನ್ನು ಮುಂದಿಟ್ಟಿದೆ. ಮೃತರಿಗಾಗಿ ಅಂತಿಮ ನಮನವನ್ನು ಎಲ್ಲಾ ಬ್ಲಾಕ್ ಸದಸ್ಯರುಗಳು ಸಲ್ಲಿಸುತ್ತಿದ್ದೇವೆ. ಮೃತರ ಮನೆಮಂದಿಗೆ ದು:ಖ ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದರು. ಈ ಸಂದರ್ಭ ಕಾರವಾರ ಶಾಸಕ ಸತೀಶ್ ಸೈಲ್,  ಮಂಜೇಶ್ವರ ಶಾಸಕ ಎ.ಕೆ. ಎಂ. ಅಶ್ರಫ್ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next