Advertisement

ಧರ್ಮಗುರುಗಳ ವಿರುದ್ಧದ ಸಿಎಂ ಹೇಳಿಕೆಗೆ ಖಂಡನೆ

01:01 PM May 26, 2018 | |

ಭದ್ರಾವತಿ: ಧರ್ಮಗುರುಗಳು ಸಮಾಜ ಸರಿ ದಾರಿಯಲ್ಲಿ ಸಾಗಲು ಮಾರ್ಗದರ್ಶಕತೆಯಿಂದ ಮಾತನಾಡುತ್ತಾರೆ. ಅದನ್ನು ಆಡಳಿತ ನಡೆಸುವವರು ತಾಳ್ಮೆಯಿಂದ ಕೇಳಿ ಅರ್ಥೈಸಿಕೊಳ್ಳುವ ಮನಸ್ಥಿತಿ ರೂಢಿಸಿ ಕೊಳ್ಳಬೇಕೆ ಹೊರತು ಮಠ-ಮಾನ್ಯಗಳ, ಗುರುಗಳ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಬಸಪ್ಪ ಹೇಳಿದರು.

Advertisement

 ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಾಣೇಹಳ್ಳಿ ಶ್ರೀಗಳ ಕುರಿತು ನೀಡಿದ ಲಘು ಹೇಳಿಕೆಯನ್ನು ಖಂಡಿಸಿ ಶುಕ್ರವಾರ ತಾಲೂಕು ವೀರಶೈವ ಸಮಾಜದ ವಿವಿಧ ಪಂಗಡಗಳು ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

 ಸಾಣೇಹಳ್ಳಿ ಶ್ರೀಗಳು ಇಂದಿನ ಸ್ಥಿತಿಗತಿಯನ್ನು ಅವಲೋಕಿಸಿ ರಾಜಕಾರಣ ಮತ್ತು ಸಮಾಜದಲ್ಲಿ ಮರೆಯಾಗುತ್ತಿರುವ ಸಿದ್ಧಾಂತ, ನೈತಿಕತೆ ಮತ್ತು ಅವಕಾಶವಾದಿ ರಾಜಕೀಯತನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಸ್ವಾಭಾವಿಕವಾಗಿ ನೇರ ಸ್ಪಷ್ಟವಾದ ಮಾತುಗಳಿಂದ ವ್ಯಕ್ತಪಡಿಸಿದ್ದಾರೆಯೇ ಹೊರತು ಯಾವುದೇ ರಾಜಕಾರಣಿ ಅಥವಾ ಪಕ್ಷವನ್ನು ಓಲೈಸುವ ನಿಟ್ಟಿನಲ್ಲಿ ಮಾತನಾಡಿಲ್ಲ. ಆದರೆ ಜವಾಬ್ದಾರಿ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ತಾಳ್ಮೆಯಿಂದ ಅದನ್ನು ಅರ್ಥೈಸಿಕೊಳ್ಳದೆ ಗುರುನಿಂದನೆ ಮಾಡಿರುವುದು ಅವರ ಭಕ್ತರಿಗೆ ನೋವುಂಟು ಮಾಡಿದೆ.
 
ಇನ್ನಾದರೂ ಮುಖ್ಯಮಂತ್ರಿಗಳು ಸಾಧು- ಸಂತರ, ಗುರುಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ವರ್ತಿಸುವುದು ಅಗತ್ಯ. ಒಂದೊಮ್ಮೆ ಇದೇ ವರ್ತನೆಯನ್ನು ಮುಖ್ಯಮಂತ್ರಿಗಳು ಮುಂದುವರಿಸಿದರೆ ವೀರಶೈವ ಸಮಾಜ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.

ಧರ್ಮಪ್ರಸಾದ್‌ ಮಾತನಾಡಿ, ಒಂದೆಡೆ ದೇವಾಲಯ, ಮಠಮಾನ್ಯಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯುವ
ಮುಖ್ಯಮಂತ್ರಿಗಳು ಮತ್ತೂಂದೆಡೆ ಈ ರೀತಿ ಗುರುನಿಂದನೆ ಮಾಡುವುದು ಅವರ ಢೋಂಗಿತನಕ್ಕೆ ನಿದರ್ಶನವಾಗಿದೆ. ಹರ ಮುನಿದರೆ ಗುರು ಕಾಯುವನು ಎಂಬುದನ್ನು ಮರೆತು ಗುರುನಿಂದನೆ ಮಾಡಿರುವ ಕುಮಾರಸ್ವಾಮಿಯವರಿಗೆ ಗುರು ಶಾಪ ತಟ್ಟದೆ ಬಿಡುವುದಿಲ್ಲ ಎಂದರು. ವೀರಶೈವ ಸಮಾಜದ ಮುಖಂಡರಾದ ವೀರಭದ್ರೇ ಗೌಡ, ಡಾ| ನಟರಾಜ್‌, ನಿವೃತ್ತ ಪ್ರಾಧ್ಯಾಪಕ ಭುವನೇಶ್ವರ್‌, ಅಡವೀಶಯ್ಯ, ಬಸಂತಪ್ಪ ಮುಂತಾದವರು ಮಾತನಾಡಿ, ಸಾಣೇಹಳ್ಳಿ ಶ್ರೀಗಳ ಮಾತನ್ನು ಅರ್ಥ ಮಾಡಿಕೊಳ್ಳದೆ ದುಡುಕಿನಿಂದ ಗುರುಗಳ ಬಗ್ಗೆ ಹಗುರವಾಗಿ ಮಾತನಾಡಿರುವ ಮುಖ್ಯಮಂತ್ರಿಗಳು ಬೇಷರತ್ತಾಗಿ ಕ್ಷಮೆ ಯಾಚಿಸಬೇಕು ಎಂದರು.

ರಂಗಪ್ಪ ವೃತ್ತದಲ್ಲಿ ಅರ್ಧ ಗಂಟೆಗಿಂತಲೂ ಹೆಚ್ಚು ಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದ ಪ್ರತಿಭಟನಾಕಾರರು ನಂತರ ಮುಖ್ಯಮಂತ್ರಿಗಳ ವಿರುದ್ಧಧಿಕ್ಕಾರ ಕೂಗುತ್ತಾ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

Advertisement

ಪತಿಭಟನೆಯಲ್ಲಿ ಸಾಧು ವೀರಶೈವ ಸಮಾಜ, ಜಂಗಮ ಸಮಾಜ, ಶರಣ ಸಾಹಿತ್ಯ ಪರಿಷತ್‌ ಸೇರಿದಂತೆ ಸಮಾಜದ ಮುಖಂಡರಾದ ಹೆಬ್ಬಂಡಿ ಲೋಕೇಶ್‌, ಮಲ್ಲಿಕಾರ್ಜುನ, ಹಾಲೇಶ್‌ ಮಂಜುನಾಥ್‌, ಆರ್‌.ಎಸ್‌. ಶೋಭ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next