ಕೊಪ್ಪಳ: ಜಿಲ್ಲೆಯಲ್ಲಿ ಜಿಂಕೆಗಳ ಸಾವಿನ ಸರಣಿ ಮುಂದುವರಿದಿದ್ದು, ಶನಿವಾರ ಮತ್ತೆ ಎರಡು ಜಿಂಕೆಗಳ ಮೃತದೇಹವು ತಾಲೂಕಿನ ಬೆಟಗೇರಿ ವ್ಯಾಪ್ತಿಯ ರೈತರ ಜಮೀನಿನಲ್ಲಿ ಪತ್ತೆಯಾಗಿವೆ.
ಕಳೆದ ವಾರ 5 ಜಿಂಕೆಗಳು ಮೃತಪಟ್ಟಿದ್ದರೆ, ಶನಿವಾರ ಮತ್ತೆ 2 ಜಿಂಕೆಗಳು ಅಸುನೀಗಿವೆ. ಸತ್ತ ಜಿಂಕೆಗಳ ದೇಹದ ಅಂಗಾಂಗವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಶುಕ್ರವಾರ ತಡರಾತ್ರಿವರೆಗೂ ಅಳವಂಡಿ,ಬೆಟಗೇರಿ ವ್ಯಾಪ್ತಿಯಲ್ಲಿ ಸುತ್ತಾಡಿದ್ದಾರೆ. ಸತ್ತ ಜಿಂಕೆಗಳ ಅಂಗಾಂಗಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಿದ್ದೇವೆ. ಬೆಳೆಯ ಔಷಧಿ ತಿಂದು ಸತ್ತಿವೆಯೇ ಎನ್ನುವ ಪ್ರಶ್ನೆಯೂ ನಮ್ಮಲ್ಲಿ ಮೂಡಿದೆ. ವರದಿ ಬಂದ ಬಳಿಕ ಎಲ್ಲವೂ ಗೊತ್ತಾಗಲಿದೆ. ಜಿಂಕೆ ಸಾವಿನ ಬಗ್ಗೆ ಎಸ್ಪಿ ಗಮನಕ್ಕೂ ತಂದಿದ್ದೇನೆ. ಕೃಷಿ ಇಲಾಖೆ ಅಧಿಕಾರಿಗಳ ಜೊತೆಯೂ ಚರ್ಚಿಸಲಿದ್ದೇನೆ ಎಂದು ಕೊಪ್ಪಳ ಡಿಎಫ್ಒ ಯಶಪಾಲ್
ಕ್ಷೀರಸಾಗರ ತಿಳಿಸಿದ್ದಾರೆ.