ವಾಷಿಂಗ್ಟನ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿ ಭಾರತವನ್ನು ಆಯ್ಕೆ ಮಾಡಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ತಿಳಿಸಿದ್ದಾರೆ. ಬುಧವಾರ 193 ಜನರಲ್ ಅಸೆಂಬ್ಲಿ ಸದಸ್ಯ ಬಲದ ಚುನಾವಣೆಯಲ್ಲಿ ಭಾರತದ ಪರವಾಗಿ 184 ಮತಗಳು ಚಲಾವಣೆಯಾಗಿರುವುದಾಗಿ ವರದಿಯಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಎರಡು ವರ್ಷಗಳ ಅವಧಿಗೆ ಭಾರತ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಲು ಜಾಗತಿಕ ಸಮುದಾಯ ನೀಡಿದ ಅಭೂತಪೂರ್ವ ಬೆಂಬಲಕ್ಕೆ ಸದಾ ಋಣಿ ಎಂದು ಮೋದಿ ಪ್ರತಿಕ್ರಿಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಗತಿಕ ಶಾಂತಿ, ಭದ್ರತೆ, ನೀತಿ, ನ್ಯಾಯಕ್ಕಾಗಿ ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳ ಜತೆ ಭಾರತ ಕೈಗೂಡಿಸಲಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಜತೆ ಮೆಕ್ಸಿಕೋ, ಐರ್ಲ್ಯಾಂಡ್ ಮತ್ತು ನಾರ್ವೆ ಕೂಡಾ ಸ್ಥಾನ ಪಡೆದಿದೆ. ವಿಶ್ವಸಂಸ್ಥೆಯಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಚೀನಾ ಮತ್ತು ರಷ್ಯಾ ಶಾಶ್ವತ ಸದಸ್ಯ ರಾಷ್ಟ್ರವಾಗಿದ್ದು ವಿಟೋ ಅಧಿಕಾರ ಹೊಂದಿವೆ. ಇದರ ಜತೆಗೆ ಹತ್ತು ದೇಶಗಳು ಖಾಯಂರಹಿತ ಸದಸ್ಯ ಸ್ಥಾನ ಪಡೆದಿರುವುದಾಗಿ ವರದಿ ವಿವರಿಸಿದೆ.
ಏಷ್ಯಾ ಫೆಸಿಫಿಕ್ ಪ್ರದೇಶದಿಂದ ಭಾರತ ಮಾತ್ರ ಸ್ಪರ್ಧಿಸಿದ್ದು, ಭಾರತದ ಸ್ಪರ್ಧೆಯನ್ನು ಈ ಭಾಗದ 55 ಸದಸ್ಯ ರಾಷ್ಟ್ರಗಳು ಅವಿರೋಧವಾಗಿ ಅನುಮೋದಿಸಿದ್ದವು. ವಿಶೇಷವೆಂದರೆ ಚೀನಾ, ಪಾಕಿಸ್ತಾನ ಕೂಡಾ ಭಾರತದ ಆಯ್ಕೆಗೆ ಬೆಂಬಲ ಸೂಚಿಸಿದ್ದವು ಎಂದು ವರದಿ ತಿಳಿಸಿದೆ.
ಈ ಹಿಂದೆಯೂ ಭಾರತ ಹಲವು ಬಾರಿ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿತ್ತು. 1950-51, 1967-68, 1972-73, 1977-1978, 1984-85, 1991-92ರಲ್ಲಿ ಹಾಗೂ 2011-12ರಲ್ಲಿ ಖಾಯಂರಹಿತ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿತ್ತು.