ಬೆಂಗಳೂರು: ದೀಪಾವಳಿಯನ್ನು ಕೇವಲ ಧಾರ್ಮಿಕ ಹಬ್ಬವಾಗಿ ನೋಡದೇ ವಿಜ್ಞಾನ, ಭೌಗೋಳಿಕ ಮತ್ತು ಹವಾ ಗುಣದ ಹಿನ್ನಲೆಯಲ್ಲಿ ನೋಡ ಬೇಕಾಗಿದೆ ಎಂದು ಈಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ಅಭಿಪ್ರಾಯ ಪಟ್ಟಿದ್ದಾರೆ.
ಕಾರ್ತಿಕ ಮಾಸದ 13ನೇ ದಿನವಾದ ತ್ರಯೋದಶಿಯಂದು ದೀಪಾವಳಿ ಆಚರಿಸಲಾಗುತ್ತದೆ. ಈ ದಿನ ಧನ್ವಂತರಿ ಪೂಜೆ ಮಾಡಲಾಗುತ್ತದೆ. ಕಾರ್ತಿಕ ಮಾಸದ 13ನೇ ದಿನದಿಂದ ಹವಾಗುಣ ದಲ್ಲಿ ಬದಲಾವಣೆ ಆರಂಭವಾಗುತ್ತದೆ. ಈ ದಿನ ದಿಂದ ಬದುಕಿನ ಕೆಲ ವೊಂದು ಸಂಗತಿಗಳಲ್ಲಿ ನಿಧಾನಗತಿ ಆರಂಭವಾಗುತ್ತದೆ. ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಸಂಗತಿಗಳಲ್ಲಿ ಜೀವಂತಿಕೆ ಕಾಯ್ದುಕೊಳ್ಳಬೇಕಾಗುತ್ತದೆ. ಪಟಾಕಿ ಸಿಡಿಸಿ, ದೀಪ ಹಚ್ಚಿ ಬಾಳಲ್ಲಿ ಬೆಳಕು ಮತ್ತು ಜೀವಂತಿಕೆ ಉಳಿಸಿ ಕೊಳ್ಳುವ ಪ್ರಯತ್ನದ ಭಾಗವಾಗಿ ದೀಪಾವಳಿ ಆಚರಿಸಲಾಗುತ್ತದೆ.
ಅದೇ ರೀತಿ ದೀಪಾವಳಿಯಂದು ಧನ್ವಂತರಿ ಪೂಜೆ ಮಾಡಲಾಗುತ್ತದೆ. ಧನ್ವಂತರಿ ಎಂದರೆ ಆಯುರ್ವೇದ. ಆರೋಗ್ಯ ಮತ್ತು ಸುಭೀಕ್ಷೆಯ ಸಂಕೇತ ಧನ್ವಂತರಿ. ಹೀಗಾಗಿ ದೀಪಾವಳಿ ಆಚರ ಣೆಯ ಹಿಂದೆ ವಿಜ್ಞಾನವೂ ಇದೆ. ಇತ್ತಿಚಿನ ದಿನಗಳಲ್ಲಿ ದೀಪಾವಳಿ ಹಬ್ಬದ ಮಹತ್ವ ಕಳೆದು ಹೋಗುತ್ತಿದೆ. ಆ ಮಹತ್ವವನ್ನು ಮರಳಿ ತರಬೇಕಾಗಿದೆ ಎಂದು ಸದ್ಗುರು ತಮ್ಮ ದೀಪಾವಳಿ ಸಂದೇಶದಲ್ಲಿ ತಿಳಿಸಿದ್ದಾರೆ.
ಪಟಾಕಿ ನಿಷೇಧ ಬೇಡ: ದೀಪಾವಳಿ ದಿನದಂದು ಪಟಾಕಿಯನ್ನು ನಿಷೇಧಿಸಬೇಡಿ ಎಂದು ಪ್ರಾರ್ಥಿಸಿಕೊಂಡಿರುವ ಈಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು, ಅದಕ್ಕೊಂದು ಸರಳವಾದ ಪರ್ಯಾಯ ಸೂಚಿಸಿದ್ದಾರೆ. ದೇಶದಲ್ಲಿ ಪಟಾಕಿ ನಿಷೇಧದ ಕುರಿತು ಚರ್ಚೆ ನಡೆಯುತ್ತಿರುವಂತೆಯೇ, ಸಂಪೂರ್ಣ ಪಟಾಕಿ ನಿಷೇಧವನ್ನು ವಿರೋಧಿಸಿದ ಸದ್ಗುರು, ವಾಯು ಮಾಲಿನ್ಯದ ಬಗೆಗಿನ ಕಾಳಜಿ, ಮಕ್ಕಳನ್ನು ಪಟಾಕಿ ಹಚ್ಚಿ ಆನಂದಪಡುವುದರಿಂದ ತಡೆಯುವುದಕ್ಕೆ ಕಾರಣವಲ್ಲ. ಅವರಿಗಾಗಿ ನಿಮ್ಮ ಬಲಿದಾನವಾಗಿ, 3 ದಿನ ನಿಮ್ಮ ಕಚೇರಿಗೆ ನಡೆದು ಹೋಗಿ, ಅವರು ಪಟಾಕಿ ಹಚ್ಚಿ ಮಜಾ ಮಾಡಲಿ. ಎಂದು ಸದ್ಗುರುಗಳು ತಮ್ಮ ಟ್ವಿಟರ್ ಸಂದೇಶದಲ್ಲಿ ಹೇಳಿದ್ದಾರೆ.
ಕಳೆದ ಸೋಮವಾರದಂದು, ಸುಪ್ರೀಂ ಕೋರ್ಟ್‌ನ ವಿಶೇಷ ಪೀಠವು ಪಟಾಕಿಗಳ ಮೇಲಿನ ಸಂಪೂರ್ಣ ನಿಷೇಧ ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಸಂಪೂರ್ಣ ನಿಷೇಧಕ್ಕಾಗಿ ಕಲ್ಕತ್ತಾ ಹೈಕೋರ್ಟ್‌ನ ಆದೇಶವನ್ನು ಅತ್ಯಂತ ಕಟುವಾದ ನಿರ್ಧಾರ ಎಂದ ಪೀಠವು, ಪಟಾಕಿಗಳಲ್ಲಿ ವಿಷಕಾರಿ ರಾಸಾಯನಿಕಗಳ ಬಳಕೆ ಯನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿತು ಎಂದು ಸದ್ಗುರು ತಮ್ಮ ಟ್ವಿಟರ್ ಸಂದೇಶ ದಲ್ಲಿ ಉಲ್ಲೇಖೀಸಿದ್ದಾರೆ.
ಇದೇ ವೇಳೆ ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತಾ, ಸದ್ಗುರುಗಳು, ನಿಮ್ಮನ್ನು ಕತ್ತಲಿಗೆ ನೂಕಬಲ್ಲ ಬಿಕ್ಕಟ್ಟಿನ ಸಮಯದಲ್ಲಿ, ಸಂತೋಷ, ಪ್ರೀತಿ ಮತ್ತು ಪ್ರಜ್ಞೆಯಿಂದ ಬೆಳಗುವುದು ಅತ್ಯವಶ್ಯ. ಈ ದೀಪಾವಳಿಯಂದು, ನಿಮ್ಮ ಮಾನವತೆಯನ್ನು ಭವ್ಯವಾಗಿ ಬೆಳಗಿಸಿ ಎಂದಿದ್ದಾರೆ.