Advertisement

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

02:06 PM Nov 02, 2024 | Team Udayavani |

ಬಾಲ್ಯದ ದೀಪಾವಳಿಯ ಸವಿನೆನಪನ್ನು ಒಮ್ಮೆ ಮೆಲುಕು ಹಾಕಿದರೆ ಮುಖದಲ್ಲಿ ನಗುವೊಂದು ಹಾದುಹೋಗುತ್ತದೆ. ಬೆಳಗುವ ಹಣತೆಗಳ ಸಾಲು, ಹೊಸ ಬಟ್ಟೆ ಖರೀದಿ, ಜೊತೆಗೆ ಪಟಾಕಿಯ ಸದ್ದು. ಹೌದು, ಊರಲ್ಲಿ ಪಟಾಕಿಯ ಸದ್ದು ಕೇಳುವುದೆಂದರೆ  ಖುಷಿ.

Advertisement

ಅದರಲ್ಲೂ ಪಟಾಕಿಯ ಹಿಂದೆ ಹಲವು ನೆನಪುಗಳು ಅಡಗಿವೆ. ನಮಗೆ ಅಪ್ಪ ತಂದ ಪಟಾಕಿ ಹೊಡೆಯುವುದೆಂದರೆ ಅದೊಂದು ದೊಡ್ಡ ಸಾಧನೆ. ನಮ್ಮ ತರಲೆ ಬುದ್ಧಿಯನ್ನು ಅರಿತಿದ್ದ ಅಪ್ಪ ತಂದ ಪಟಾಕಿಯನ್ನು ನಮಗೆ ಕಾಣದಂತೆ ಅಡಗಿಸಿಡುತ್ತಿದ್ದರು. ಆದರೆ ನಾವು ರಂಗೋಲಿ ಕೆಳಗಿನಿಂದ ನುಸುಳುವವರು! ಮನೆಯವರ ಸಹಾಯದಿಂದಲೇ ಅಪ್ಪ ಪಟಾಕಿ ಅಡಗಿಸಿಟ್ಟ ಜಾಗವನ್ನು ಪತ್ತೆ ಮಾಡುತ್ತಿದ್ದೆವು!

ಹಾಗೇ ಒಮ್ಮೆ ದೀಪಾವಳಿಯ ಸಂಜೆ ಊರಾಚೆಗೆಲ್ಲಾ ಪಟಾಕಿಯ ಸದ್ದು ಜೋರಾಗಿಯೇ ಕೇಳುತ್ತಿತ್ತು. ನಮಗಂತೂ ಪಟಾಕಿ ಹೊಡೆಯಬೇಕೆಂಬ ಆಸೆ ತಡೆಯಲಾಗಲಿಲ್ಲ. ಅಮ್ಮ ಹಣತೆಯನ್ನು ಸ್ವಚ್ಛಗೊಳಿಸುವುದರಲ್ಲಿ ತಲ್ಲೀನರಾಗಿದ್ದರು. ಅಕ್ಕ ಹೊಸ ಬಟ್ಟೆ ತೊಡುವ ಸಂಭ್ರಮದಲ್ಲಿದ್ದಳು. ನನಗೆ ಅಂತಾದ್ದೇನೂ ಕೆಲಸವಿರಲಿಲ್ಲ. ಊದು ಕಡ್ಡಿ ಹಚ್ಚಿಕೊಂಡು ಪಟಾಕಿಗಾಗಿ ಅತ್ತಿಂದಿತ್ತ ಅಲೆಯುತ್ತಿದ್ದೆ. ನನ್ನ ಅಲೆದಾಟ ಕಂಡೋ ಏನೋ ದೊಡ್ಡಮ್ಮ ಪಟಾಕಿಯಿರುವ ರಹಸ್ಯ ಸ್ಥಳವನ್ನು ಹೇಳಿಯೇ ಬಿಟ್ಟರು!

ನಾನು ಇದಕ್ಕಾಗಿಯೇ ಕಾಯುತ್ತಿದ್ದೆ! ಹೋಗಿ ನೋಡಿದರೆ ಒಂದು ಡಬ್ಬದ ತುಂಬಾ ಪಟಾಕಿ. ಕಂಡದ್ದೇ ತಡ ಆಸೆ ಹೆಚ್ಚಿತು. ಅಲ್ಲಿಂದ ಒಂದು ಸಣ್ಣ ಬಾಂಬನ್ನು, 4-5 ಬೀಡಿ ಪಟಾಕಿಯನ್ನು ಅಂಗಳದಲ್ಲಿ ಹೊಡೆಯಲೆಂದು  ತಂದೇಬಿಟ್ಟೆ. ಕೈಯಲ್ಲಿದ್ದ ಪಟಾಕಿಯನ್ನು ಹೇಗೋ ಹೊಡೆದಾಯಿತು. ಈಗ ಬಾಂಬ್ ಹೊಡೆಯೋ ಸರದಿ. ಇದ್ದ ಧೈರ್ಯವನ್ನೆಲ್ಲಾ  ಒಟ್ಟಾಗಿಸಿ ಬಾಂಬಿನ ಬತ್ತಿಗೆ ಬೆಂಕಿ ಕೊಟ್ಟು ಓಡಿದೆ. ಡಬ್ ಎನ್ನುವ ಶಬ್ದ ಜೋರಾಗಿ ಕೇಳಿತು. ಆಗಲೇ ಗೇಟ್ ಕಡೆಯಿಂದ ಯಾರೋ ಧಾವಂತದಿಂದ ಬರುವ ಹೆಜ್ಜೆಯ ಸದ್ದು ಕಿವಿಗೆ ಬಿತ್ತು. ನೋಡುವಾಗ ಅಪ್ಪ….. ನಾನು ಆ ಕ್ಷಣ ದಿಗಿಲಾದೆ.

ಅವರ ಮನದೊಳಗೆ ಓಡುತ್ತಿದ್ದ ಪ್ರಶ್ನೆಗೆ ನನ್ನ ಕೈಯಲ್ಲಿದ್ದ ಬೆಂಕಿಪೊಟ್ಟಣ, ಊದು ಕಡ್ಡಿ ಉತ್ತರ ನೀಡಿತ್ತು. ಹಬ್ಬದ ದಿನವೆಂದೂ ನೋಡದೆ ಬೆನ್ನಿಗೆ ಎರಡೇಟು ಬಿಗಿದೇ ಬಿಟ್ಟರು. ಜೊತೆಗೆ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಪಟಾಕಿ ಹೊಡೆಯಬಾರದು. ಅದರಲ್ಲೂ ನೀನಿನ್ನೂ ಬಾಲಕ. ಪಟಾಕಿಯ ಸದ್ದು ನಿನ್ನ ಶ್ರವಣಶಕ್ತಿ ಇಲ್ಲವೇ ದೃಷ್ಟಿ ದೋಷಕ್ಕೆ ಕಾರಣವಾಗಬಹುದು. ಎಷ್ಟೋ ಮಕ್ಕಳಿಗೆ ಈ ಪಟಾಕಿಗಳು ಶಾಪವಾಗಿ ಪರಿಣಮಿಸಿದೆ. ಒಂದೆರಡು ದಿನಗಳ ಮೋಜಿನ ಆಸೆಗೆ, ಬೆಳಕಿನ ಹಬ್ಬದ ದಿನ ಪಟಾಕಿ ಹೊಡೆದು ಶಾಶ್ವತವಾಗಿ ಬೆಳಕನ್ನೇ ನೋಡದ ಸ್ಥಿತಿಗೆ ಬರಬಹುದು ಎಂದರು.

Advertisement

ಅಪ್ಪನ ಮಾತು ಕೇಳಿ ಮೊದಲು ಯಾಕಾಗಿ ಅವರು ಆ ರೀತಿ ನಡೆದುಕೊಳ್ಳುತ್ತಾರೆ  ಎಂದು ಬೇಜಾರಾದದ್ದು, ಸಿಟ್ಟು ಬಂದದ್ದು ನಿಜ. ಆದರೆ ಇಂದಿಗೂ ನಾನು ಪಟಾಕಿ ಹೊಡೆಯುವಾಗ ಅವರ ಮಾತುಗಳು ನೆನಪಾಗುತ್ತವೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತೇನೆ.

ಈ ಬಾಲ್ಯದ ಗಮ್ಮತ್ತು, ಸವಿನೆನಪನ್ನು ಮೆಲುಕು ಹಾಕಿದರೆ ಹಬ್ಬದ ಸೊಗಸು ಮತ್ತಷ್ಟು ಕಳೆಗಟ್ಟುತ್ತದೆ.

-ಗಿರೀಶ್ ಪಿ.ಎಂ

ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next