ಸುಳ್ಯ: ದೀಪಾವಳಿ ಹಬ್ಬದ ನಿಜವಾದ ಸಾಂಪ್ರದಾಯಿಕ ಆಚರಣೆಗಳು ತುಳುನಾಡಿನ ಗ್ರಾಮೀಣ ಭಾಗದಲ್ಲಿ ಇಂದಿಗೂ ನಡೆಯುತ್ತಿದೆ. ದೀಪಾವಳಿಯ ಮೂರನೇ ದಿನ ಬಲಿ ಪಾಡ್ಯದಂದು ಗೋಪೂಜೆ, ಬಲಿಯೇಂದ್ರ ಪೂಜೆ ಹಳ್ಳಿಗಳಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಆದರೂ ಬೇಸಾಯ ಕೃಷಿ ಕಡಿಮೆಯಾದ ಹಿನ್ನೆಲೆಯಲ್ಲಿ ಬಲಿಯೇಂದ್ರ ಪೂಜೆಯೂ ಅಷ್ಟಕ್ಕಷ್ಟೆ ನಡೆಯುತ್ತಿದೆ. ಅಳಿಯುವ ಹಾದಿಯಲ್ಲಿರುವ ಇಂಥ ಸಂಪ್ರದಾಯಗಳನ್ನು ಉಳಿಸುವ ನಿಟ್ಟಿನಲ್ಲಿ ಮತ್ತು ಎಲ್ಲರಿಗೂ ಪರಿಚಯಿಸುವ ನಿಟ್ಟಿನಲ್ಲಿ ಸುಳ್ಯದಲ್ಲಿ ಕಳೆದ 27 ವರ್ಷಗಳಿಂದ ವಿಶಿಷ್ಟ ಸ್ಪರ್ಧೆ ನಡೆಯುತ್ತಿದೆ. ಅದುವೇ ಬಲಿಯೇಂದ್ರ ಅಲಂಕಾರ ಸ್ಪರ್ಧೆ.
ಹಿಂದಿನ ಕಾಲದಲ್ಲಿ ಬಲಿಯೇಂದ್ರ ಪೂಜೆ (ಮರ ಹಾಕುವುದು) ಹೆಚ್ಚಿನ ಕಡೆಗಳಲ್ಲಿ ನಡೆಸುತ್ತಾ ಬರಲಾಗುತ್ತಿತ್ತು. ಪ್ರತೀ ಮನೆಗಳಲ್ಲಿ ಕಾಣಬಹುದಾಗಿದ್ದ ಬಲಿಯೇಂದ್ರ ಪೂಜೆ ಇಂದು ತರವಾಡು ಮನೆ, ದೈವಸ್ಥಾನ, ದೇವಸ್ಥಾನಗಳಿಗೆ ಸೀಮಿತವಾಗಿದೆ. ಬಲಿಯೇಂದ್ರ ಪೂಜೆಯನ್ನು ಮೂಲ ಸಂಪ್ರದಾಯದಂತೆ ಆಚರಿಸಿಕೊಂಡು ಬರಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಸುಳ್ಯ ಹಾಗೂ ಕೆಲ ಗ್ರಾಮೀಣ ಭಾಗದಲ್ಲಿ ಬಲಿಯೇಂದ್ರ ಅಲಂಕಾರ ಸ್ಪರ್ಧೆ ಆಯೋಜಿಸಲಾಗುತ್ತಿದೆ.
ಸುಳ್ಯದ ಕಾಯರ್ತೋಡಿ ಮಿತ್ರ ಬಳಗ ಕಳೆದ 27 ವರ್ಷಗಳಿಂದ ಬಲಿಯೇಂದ್ರ ಅಲಂಕಾರ ಸ್ಪರ್ಧೆ ನಡೆಸುತ್ತ ಬಂದಿದೆ. ಯಾರ ಮನೆಗಳಲ್ಲಿ ಬಲಿಯೇಂದ್ರ ಮರ ಹಾಕುತ್ತಾರೆಯೋ ಅಂತಹವರು ಸ್ಪರ್ಧೆಗೆ ಹೆಸರು ನೋಂದಾಯಿಸುತ್ತಾರೆ. ಬಲಿಯೇಂದ್ರ ಪೂಜೆ ನಡೆಯುವ ದಿನ ಸ್ಪರ್ಧೆ ಆಯೋಜನೆಯ ತೀರ್ಪುಗಾರರ ತಂಡ ಬಲಿಯೇಂದ್ರ ಮರ ಹಾಕಿದ(ಅಲಂಕಾರ) ಮನೆಗಳಿಗೆ ತೆರಳಿ ವೀಕ್ಷಣೆ ನಡೆಸಿ, ಸಂಪ್ರದಾಯ, ಅಲಂಕಾರ, ವಿಶೇಷತೆ ಇವುಗಳ ಆಧಾರದ ಮೇಲೆ ಅಂಕ ನೀಡಿ ವಿಜೇತರ ಆಯ್ಕೆ ಮಾಡುತ್ತಾರೆ.
ಗೋಪೂಜೆಯ ಹಿಂದಿನ ದಿನ ಸಂಪ್ರದಾಯದಂತೆ ಬಲಿಯೇಂದ್ರ ಮರ ಹಾಕುವ ಕಾರ್ಯಕ್ರಮ ಸಂಪ್ರದಾಯದಂತೆ ನಡೆಯುತ್ತದೆ. ಮರುದಿನ ಮರ ಆಳುವ ಕಾರ್ಯಕ್ರಮ ಹಾಗೂ ಬಲಿಯೇಂದ್ರ ಪೂಜೆ, ಬಲಿಯೇಂದ್ರ ಕೂಗು (ಬಲಿಯೇಂದ್ರ ಲೆಪ್ಪು) ಮತ್ತಿತರ ಕಾರ್ಯಕ್ರಮಗಳು ಸಂಪ್ರದಾಯದಂತೆ ನಡೆಯುತ್ತದೆ.
ಸ್ಪರ್ಧೆಗೆ ಷರತ್ತುಗಳು
ಬಲಿಯೇಂದ್ರ ಮರವನ್ನು ಸಂಪ್ರದಾಯದಂತೆಯೇ ಹಾಕಬೇಕು, ಮೂಲ ಸಂಪ್ರದಾಯದಂತೆಯೇ ಅಲಂಕಾರ ಮಾಡಬೇಕು.
ಪ್ರಕೃತಿಯಲ್ಲಿ ಸಿಗುವ ಸಾಂಪ್ರದಾಯಿಕ ವಸ್ತುಗಳನ್ನು ಮಾತ್ರವೇ ಬಳಸಿ ಬಲಿಯೇಂದ್ರ ರಚಿಸಬೇಕು. ಪ್ಲಾಸ್ಟಿಕ್ ಬಳಕೆ ಮಾಡಬಾರದು.
ಸ್ಪರ್ಧೆಗೆ ಹೆಸರು ನೋಂದಾಯಿಸಿದವರ ಮನೆಗೇ ತೀರ್ಪುಗಾರರ ತಂಡ ಹೋಗಿ ವೀಕ್ಷಣೆ ನಡೆಸಿ ಮಾನದಂಡಗಳ ಆಧಾರದಲ್ಲಿ ಅಂಕ ನೀಡುತ್ತದೆ.
ಈ ವರ್ಷ ಸುಳ್ಯದ ಗೌಡ ಮಹಿಳಾ ಘಟಕದ ವತಿಯಿಂದಲೂ ತಾಲೂಕು ಮಟ್ಟದ ಬಲಿಯೇಂದ್ರ ಅಲಂಕಾರ ಸ್ಪರ್ಧೆ ಆಯೋಜಿಸಲಾಗಿದೆ.
ದಯಾನಂದ ಕಲ್ನಾರ್