ವಾಯು ಮತ್ತು ಶಬ್ದ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಎರಡು ವರ್ಷಗಳ ಹಿಂದೆ ತಾನು ನೀಡಿದ್ದ ಆದೇಶ ಇಡೀ ದೇಶಕ್ಕೆ ಅನ್ವಯವಾಗುತ್ತದೆ ಎಂಬ ಸುಪ್ರೀಂ ಕೋರ್ಟ್‌ನ ಆದೇಶ ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆಯೇ ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕೆಂಬ ಬೇಡಿಕೆ ಪರಿಸರವಾದಿಗಳಿಂದ ಮುನ್ನೆಲೆಗೆ ಬರುವುದು ಈಗ ಸರ್ವೇಸಾಮಾನ್ಯ ವಾಗಿದೆ. ಇದೇ ಅವಧಿಯಲ್ಲಿ ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿ ವಾಯುಮಾಲಿನ್ಯ ಅತಿರೇಕಕ್ಕೆ ತಲುಪುವುದರಿಂದ ಪರಿಸರವಾದಿಗಳ ಈ ಬೇಡಿಕೆಗೆ ಮತ್ತಷ್ಟು ಬಲ ಲಭಿಸುತ್ತದೆ.
2021ರಲ್ಲಿ ಪಟಾಕಿ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೆಲವೊಂದು ನಿರ್ದಿಷ್ಟ ಮಾರ್ಗಸೂಚಿಗಳನ್ನು ಸಿದ್ಧಪಡಿಸುವಂತೆ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿತ್ತು. ಅತೀ ಹೆಚ್ಚು ಮಾಲಿನ್ಯಕರವಾದ ರಾಸಾಯನಿಕಗಳನ್ನು ಹೊಂದಿರುವ, ಭಾರೀ ಶಬ್ದವನ್ನುಂಟು ಮಾಡುವ ಪಟಾಕಿಗಳಿಗೆ ಸಂಪೂರ್ಣ ನಿಷೇಧ ಹೇರುವಂತೆ ರಾಜ್ಯ ಸರಕಾರಗಳಿಗೆ ಆದೇಶ ನೀಡಿತ್ತು. ಕೇವಲ ಹಸುರು ಪಟಾಕಿಗಳ ಬಳಕೆಗೆ ಮತ್ತು ಪಟಾಕಿ ಸಿಡಿಸುವುದಕ್ಕೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸುವಂತೆಯೂ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸಲಹೆ ನೀಡಿತ್ತು. ಈ ಆದೇಶವನ್ನು ಎಲ್ಲ ರಾಜ್ಯಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಈಗ ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ. ಇತ್ತ ಕರ್ನಾಟಕದಲ್ಲಿ ರಾಜ್ಯ ಸರಕಾರ, ದೀಪಾವಳಿ ಸಂದರ್ಭದಲ್ಲಿ ರಾತ್ರಿ 2 ತಾಸುಗಳ ಕಾಲ ಮಾತ್ರವೇ ಹಸುರು ಪಟಾಕಿಗಳನ್ನು ಸಿಡಿಸಲು ಅನುಮತಿ ನೀಡಿ, ಇದಕ್ಕಾಗಿ ಈಗಾಗಲೇ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಪಟಾಕಿ ಬಳಕೆ ಸಂಬಂಧ ಸುಪ್ರೀಂ ಕೋರ್ಟ್‌ನ ಆದೇಶ ಮತ್ತು ಕರ್ನಾಟಕ ಸರಕಾರ ಹೊರಡಿಸಿರುವ ಮಾರ್ಗಸೂಚಿ ಪಟಾಕಿ ಪ್ರಿಯರ ತೀವ್ರ ಅಸಮಾ ಧಾನಕ್ಕೆ ಕಾರಣವಾಗಿದೆ. ಕೇವಲ ದೀಪಾವಳಿ ಸಂದರ್ಭದಲ್ಲಿ ಮಾತ್ರವೇ ಪಟಾಕಿ ಸಿಡಿಸುವುದಕ್ಕೆ ನಿರ್ಬಂಧ ಹೇರಲಾಗುತ್ತಿರುವುದರ ಹಿಂದಿನ ಕಾರಣವೇನು ಹಾಗೂ ಚುನಾವಣೆ ಮತ್ತು ಇತರ ಸಂಭ್ರಮಾಚರಣೆಗಳ ಸಂದರ್ಭದಲ್ಲಿ ಪಟಾಕಿ ಸಿಡಿಸುವುದಕ್ಕೆ ಪರಿಸರವಾದಿಗಳು ಯಾವುದೇ ತಕರಾರು ಎತ್ತದಿರುವ ಕುರಿತಂತೆಯೂ ಪ್ರಶ್ನಿಸಿದ್ದಾರೆ.
ಒಟ್ಟಾರೆ ದೇಶದಲ್ಲಿ ಪಟಾಕಿ ಬಳಕೆಯ ವಿಷಯ ಈಗ ವ್ಯಾಪಕ ಚರ್ಚೆಗೀಡಾ ಗಿದ್ದು ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಇಡೀ ದೇಶಕ್ಕೆ ಮತ್ತು ಎಲ್ಲ ಸಂಭ್ರಮಾಚರ ಣೆಗಳಿಗೂ ಅನ್ವಯವಾಗುವಂತೆ ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸುವ ಅಗತ್ಯವಿದೆ. ಇದೇ ವೇಳೆ ಪಟಾಕಿ ತಯಾರಿಕ ಉದ್ಯಮದಲ್ಲಿ ತೊಡಗಿಸಿಕೊಂಡಿ ರುವ ಲಕ್ಷಾಂತರ ಬಡ ಕಾರ್ಮಿಕರ ಹಿತರಕ್ಷಣೆಯತ್ತಲೂ ಸರಕಾರ ಗಮನ ಹರಿಸಬೇಕು. ವಾದ-ವಿವಾದಗಳೇನೇ ಇದ್ದರೂ ದೇಶವಾಸಿಗಳು ಕಾನೂನು ನಿಯಮಾವಳಿಗಳಿಗನುಸಾರವಾಗಿ ಪಟಾಕಿಗಳನ್ನು ಬಳಸಬೇಕು ಮತ್ತು ಈ ವೇಳೆ ತಮ್ಮ ಸುರಕ್ಷೆಯನ್ನು ಖಾತರಿಪಡಿಸಿಕೊಳ್ಳುವುದು ಬಲುಮುಖ್ಯವಾಗಿದೆ. ದೀಪಾವಳಿ ಹಬ್ಬದ ಸಂಭ್ರಮ, ಸಡಗರ ಯಾವುದೇ ದುರಂತಕ್ಕೆ ಕಾರಣವಾಗದಂತೆ ಎಚ್ಚರಿಕೆ ವಹಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ.