Advertisement

Deepavali: ಪಟಾಕಿಯ ಶಬ್ದ…ವಿಶೇಷ ತಿಂಡಿಯ ಘಮಲು…ಸಂಭ್ರಮ, ಸಡಗರ, ವಿಜೃಂಭಣೆಯ ಬೆಳಕು

12:52 PM Nov 11, 2023 | Team Udayavani |

ದೀಪಾವಳಿ ಸಂಭ್ರಮದ ಹಬ್ಬ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಿಂದಿನ ವರ್ಷದ ತುಳಸಿ ಪೂಜೆ ಮುಗಿದೊಡನೆಯೇ, ಮುಂದಿನ ವರ್ಷದ ಹಬ್ಬಕ್ಕೆ ಕಾತುರತೆ ಮೂಡಿಸುವ ಹಬ್ಬ. ಹಬ್ಬಕ್ಕೆ ಒಂದು ವಾರ ಇರುವ ಮುಂಚೆಯೇ ಸಡಗರ ಮನಸ್ಸಿನ ಮುಗಿಲನ್ನು ಮುಟ್ಟಿರುತ್ತಿತ್ತು. ಬೆಂಗಳೂರಿನಿಂದ ಚಿಕ್ಕಪ್ಪ ವಾರದ ಮುಂಚೆಯೇ ಕಳಿಸುವ ಪಟಾಕಿಗಾಗಿ, ಬೆಳಗ್ಗೆ ಬೇಗ ಎದ್ದು, ಚಳಿಯನ್ನು ಲೆಕ್ಕಿಸದೇ, ಬರುವ ಬೆಂಗಳೂರು ಬಸ್ಸಿಗಾಗಿ ಹೆದ್ದಾರಿಯ ಬದಿಯಲ್ಲಿ ನಿಂತು ದಾರಿ ಕಾಯುವ ಖುಷಿ, ಇಂದು ಒಂದೇ ಗುಕ್ಕಿಗೆ ಸಾವಿರಾರು ರೂಪಾಯಿ ಕೊಟ್ಟು ಕೊಳ್ಳುವ ಪಟಾಕಿಯಲ್ಲಿಲ್ಲ. ಮನೆಗೆ ತಂದ ಪಟಾಕಿಯನ್ನು ಬೇಗನೆ ಬಿಡಿಸಿ, ಪ್ರತೀ ದಿನಕ್ಕೆ ಇಂತಿಷ್ಟು ಎಂದು ಪಾಲು ಮಾಡಿ, ಚಿಕ್ಕಪ್ಪ ತಮ್ಮನಿಗೆ ಎಷ್ಟು ತೆಗೆದು ಇಟ್ಟಿದ್ದಾರೆ ಎಂದು ಮನದಲ್ಲೇ ಲೆಕ್ಕ ಹಾಕಿ ಪಡುವ ಸಂಭ್ರಮ ಎಣಿಕೆಗೆ ಮೀರಿದ್ದು.

Advertisement

ತ್ರಯೋದಶಿಯಂದು ರಾತ್ರಿ ಹಂಡೆಗೆ ನೀರು ತುಂಬುವುದರಿಂದ ಆರಂಭವಾಗುವ ಹಬ್ಬ, ಆ ದಿನ ಬೆಳಗ್ಗೆಯೇ ಕೆಲಸ ಕೊಡುತ್ತಿತ್ತು. ಮನೆಯ ನೀರು ಕಾಯಿಸುವ ಹರಿಯನ್ನು (ಹಂಡೆ) ಚಂದಮಾಡಿ ತಿಕ್ಕಿ, ತೊಳೆದು, ಅರಶಿನ-ಕುಂಕುಮ-ಶೇಡಿಯಿಂದ ಅಲಂಕಾರ ಮಾಡಿ, ಮನೆ ಸುತ್ತಲಿನ ತೋಟದಲ್ಲಿ ಸಿಗುವ ದಾಸವಾಳ, ಗೊರಟೆ, ಗಂಟೆ ಹೂವುಗಳನ್ನು ಬಾಳೆಯ ಹಗ್ಗ(ದಾರ)ದಲ್ಲಿ ಪೋಣಿಸಿ ಮಾಲೆ ಮಾಡಿ, ಹರಿಯ ಬಾಯಿಗೆ ಕಟ್ಟಿದ್ರೆ ಒಂದು ಸುತ್ತಿನ ಕೆಲಸ ಮುಗಿದ ಹಾಗೆ. ರಾತ್ರಿ ಸೂರ್ಯ ಕಂತಿದ ಮೇಲೆ, ಅಮ್ಮ ಬಾವಿಯಿಂದ ನೀರು ಸೇದಿ ಗಂಗೆಯನ್ನು ಹಂಡೆಗೆ ತುಂಬುವಾಗ, ನಾನು ಮತ್ತೆ ತಂಗಿ ಜಾಗಂಟೆ ಬಾರಿಸಲಿಕ್ಕೆ ಮಾಡುವ ಜಗಳ ಈಗ ಸಿಹಿ ನೆನಪು ಮಾತ್ರ. ನೀರು ತುಂಬಿದ ಮೇಲೆ ಆ ದಿನದ ಬಾಬಿ¤ನ ಪಟಾಕಿಗಳನ್ನ ಢಮ್‌ ಅನ್ನಿಸಿದಾಗ, ಹಬ್ಬ ಪೂರ್ಣ ಪ್ರಮಾಣದಲ್ಲಿ ಆರಂಭವಾದ ಖುಷಿ ಮನಸ್ಸಲ್ಲಿ.

ಚತುರ್ದಶಿಯಂದು ಬೆಳಗ್ಗೆ 5 ಗಂಟೆಗೆ ಅಮ್ಮ ಇನ್ನೂ ನಿದ್ದೆ ಕಣ್ಣಲ್ಲೇ ಇರುವ ನಮ್ಮನ್ನು ಎಬ್ಬಿಸಿ, ದೇವರ ಮುಂದೆ ಅಣಿ ಮಾಡಿ ಕೂರಿಸಿದಾಗ, ಆ ಚಳಿ ಹುಟ್ಟಿಸುವ ನಡುಕ, ಖುಷಿ ವರ್ಣಿಸಲಸಾಧ್ಯ. ಇಡೀ ಮೈಗೆ ಕೊಬ್ಬರಿ ಎಣ್ಣೆ ಹಚ್ಚಿದಾಗ, ಸಾಕಮ್ಮ ಅಂದ್ರೆ “ಮಕ್ಳೆ, ಸುಮ್ನಾಯ್ಕಂರ್ತ್ಯ. ಈ ವರ್ಷ ಹಾಕಿದ್‌ ಎಣ್ಣೆ, ಬಪ್ಪು ದೀಪಾಳಿಗೂ ಮೈಯಲ್ಲಿ ಇರ್ಕು’ ಅಂತ ತಿಕ್ಕಿ ತಿಕ್ಕಿ ಹಚ್ಚಿದ ದಿನಗಳು, ಮತ್ತೆ ಬಾರದು. ಹಚ್ಚಿದ ಎಣ್ಣೆಯನ್ನೆಲ್ಲ ಮೈ ಕುಡಿದು, ಬಚ್ಚಲು ಮನೆಯಲ್ಲಿ ಅಮ್ಮ ಬಿಸಿನೀರನ್ನು ತೋಡಿ ತೋಡಿ ಸುರಿದು, ಸೀಗೇ ಕಾಯಿ ಹಚ್ಚಿ ಮೈ ಉಜ್ಜುವಾಗ ಅವಳ ಕಣ್ಣಲ್ಲಿ ಕಂಡ ಪ್ರೀತಿ ಇನ್ನೂ ಹಸಿ ಹಸಿ. ಸ್ನಾನಕ್ಕೂ ಮೊದಲು ಅಣ್ಣ-ತಂಗಿ ಇಬ್ಬರ ಮಧ್ಯೆ ಯಾರು ಮೊದಲು ಸ್ನಾನ ಮಾಡುವುದು ಎನ್ನುವುದಕ್ಕೆ ಒಂದು ಸಣ್ಣ ಜಗಳ ಮರೆಯೋಕಾಗಲ್ಲ. ಸ್ನಾನ ಮಾಡಿ ದೇವರಿಗೆ ನಮಸ್ಕರಿಸಿ, ಕಾಫಿ ಕುಡಿದು ಇನ್ನೊಂದು ಸುತ್ತಿನ ಪಟಾಕಿ ಹೊಡೆದು ಮುಗಿಸುವಾಗ ಅಮ್ಮನನಿಂದ ಬುಲಾವ್‌. “ಮಕೆÛà ತಿಂಡಿ’ ಅಂತ ಕರೆದಾಗ ಒಂದೇ ಓಟ. ಆ ದಿನದ ವಿಶೇಷ ಕೊಟ್ಟೆ ಕಡುಬು, (ಮೂಡೆ) ಕೊಬ್ಬರಿ ಎಣ್ಣೆ, ಕಾಯಿ ಚಟ್ನಿ ತಿಂದ್ರೆ ಬೆಳಗ್ಗಿನ ಸಂಭ್ರಮ ಅಲ್ಲಿ ಆರಂಭ.

ಕೊಟ್ಟೆ ಕಡುಬು ನನ್ನ ಅತೀ ಪ್ರಿಯ ತಿಂಡಿ. ಈಗಲೂ ಊರಿಗೆ ಹೋದರೆ ಅಮ್ಮ ಅಷ್ಟೇ ಪ್ರೀತಿಯಿಂದ ಅದನ್ನು ಮಾಡಿ ಬಡಿಸುತ್ತಾಳೆ. ಆ ಕಡುಬಿನ ಘಮ ಯಾವ ತಟ್ಟೆ ಇಡ್ಲಿಗಾಗಲೀ, ಸ್ಟೀಲ್‌ ಪ್ಲೇಟ್‌ ಅಲ್ಲಿ ಮಾಡುವ ಇಡ್ಲಿಗಾಗಲೀ ಸಮವಿಲ್ಲ. ಹೊಟ್ಟೆ ಬಿರಿಯುವಂತೆ ತಿಂಡಿ ತಿಂದರೆ, ಆ ನಿದ್ದೆ ಯಾವ ಮಾಯಕದಲ್ಲಿ, ಸಂದಿನಲ್ಲಿ ಬರತ್ತೋ. ಆ ಭಗವಂತನೇ ಬಲ್ಲ. ಇಷ್ಟೆಲ್ಲ ತಿಂದು, ಒಂದು ಸುತ್ತಿನ ನಿದ್ದೆ ಮುಗಿಸಲು ನಮ್ಮ ಪಕ್ಕದ ಮನೆಯಲ್ಲಿ ಶ್ರಾದ್ಧದ ಊಟಕ್ಕೆ ಬುಲಾವ್‌. ಪ್ರತೀ ವರ್ಷ ದೀಪಾವಳಿಯೆಂದೇ ಅಲ್ಲಿ ಅಜ್ಜನ ಶ್ರಾದ್ಧ. ವಡೆ, ಸುಕ್ಕಿನುಂಡೆ, ಪಾಯಸದ ಊಟ. ಮೊದಲ ಪಂಕ್ತಿಗೆ ಬಡಿಸಿ ಮತ್ತೆ 2ನೇ ಪಂಕ್ತಿಯಲ್ಲಿ ಉಂಡು, ಬಂದ ಎಲ್ಲರೊಡನೆ ಮಾತಾಡಿ ಮತ್ತೆ ಮನೆಗೆ ಬಂದು, ಇನ್ನೊಂದು ಸುತ್ತಿನ ನಿದ್ದೆ.

Advertisement

ಸಂಜೆ ಇಳಿದು ಕತ್ತಲು ಆಗುವುದನ್ನೇ ಕಾತರದಿಂದ ನೋಡುತ್ತಾ, ಪಟಾಕಿ ಡಬ್ಬಿಯನ್ನು ಪದೇ ಪದೇ ಮುಟ್ಟಿ ನೋಡಿಕೊಳ್ಳುತ್ತಾ ಕಳೆಯೋ ಪ್ರತೀ ಕ್ಷಣವೂ ಅಮೂಲ್ಯ. ಹೊತ್ತು ಕಂತಿದ ಮೇಲೆ ಅಪ್ಪ ಸ್ನಾನ ಮಾಡಿ, ಮಡಿಯುಟ್ಟು ಬಂದು ಪೂಜೆ ಆರಂಭಿಸುವರು. ಆ ದಿನ ಸಂಜೆಯ ಪೂಜೆ ಹೊಲಿರಾಶಿಯ ಮುಂದೆ. ಹೊಲಿರಾಶಿ ಅಂದರೆ ಭತ್ತದ ರಾಶಿ. ಆ ವರ್ಷದ ತೆನೆ ಬಡಿದು ಭತ್ತವನ್ನು ರಾಶಿ ಮಾಡಿ ಇಟ್ಟ ಕಣಕ್ಕೆ ಪೂಜೆ. ಹೊಲಿರಾಶಿಯ ಮುಂದೆ ಕಾಲುದೀಪ ಹಚ್ಚಿ, ಮನೆಯಲ್ಲಿನ ಸಾಲಿಗ್ರಾಮ, ಇತರೆ ದೇವರುಗಳಿಗೆ ಅಭಿಷೇಕ ಪೂಜೆ ಮಾಡಿ, ನೈವೇದ್ಯ ಆರತಿ ಎತ್ತಿ; ಅನಂತರ ಮನೆಯ ಎಲ್ಲ ಕಡೆ ದೀಪ ಇಡುವ ಸಂಭ್ರಮ. ಬೆಳಗ್ಗೆಯೇ ಅಮ್ಮ, ನಮ್ಮಗಳ ಸಹಾಯವನ್ನು ತೆಗೆದುಕೊಂಡು ಇಡೀ ಮನೆಯನ್ನು ಸ್ವತ್ಛ ಮಾಡಿ ಇಟ್ರೆ, ಸಂಜೆ ಅಲ್ಲೆಲ್ಲ ಹಣತೆಯ ದೀಪ ಬೆಳಗುವ ಸುಂದರ ಸಂಭ್ರಮ. ಮೊದಲು ಹೊಲಿರಾಶಿಯ ಮುಂದೆ ಆಮೇಲೆ ಈ ಕೆಳಗಿನಂತೆ ಎಲ್ಲ ಜಾಗಗಳಲ್ಲೂ ದೀಪ ಇಡುವುದು.

ದೇವರ ಕೋಣೆಯಿಂದ ಹಿಡಿದು ಮನೆಯ ಎಲ್ಲ ಕಡೆ ಜಾಗಂಟೆ ಬಾರಿಸುತ್ತ ದೀಪವಿಟ್ಟ ಮೇಲೆ, ಅವಲಕ್ಕಿ ಬೆಲ್ಲ ನೈವೇದ್ಯ ತಿನ್ನುವ ಸಂಭ್ರಮ. ಇಷ್ಟೆಲ್ಲ ಆದ ಮೇಲೆಯೇ ನೋಡಿ ಇರೋದು ಮುಖ್ಯ ಕಾರ್ಯಕ್ರಮ. ಪಟಾಕಿ ಸುಡುವ ಸಂಭ್ರಮ. ನಕ್ಷತ್ರ ಕಡ್ಡಿ, ಬಿಡಿ ಪಟಾಕಿ, ಹನುಮಂತನ ಬಾಲ, ನೆಲ ಚಕ್ರ, ಲಕ್ಷ್ಮೀ ಬಾಂಬು, ಆಟಂ ಬಾಂಬು, ರಾಕೆಟ್‌, ಬಿರ್ಸು (ಹೂಕುಂಡ) ಎಲ್ಲ ಹಚ್ಚಿ, ಬೆಳಕನ್ನು ಮನೆಯ ಅಂಗಳದ ತುಂಬೆಲ್ಲ ತುಂಬಿ, ಕೊನೆಯ ಆಟವಾಗಿ ಹಾವಿನ ಮಾತ್ರೆ ಸುಟ್ಟರೆ ಆ ಸಂಭ್ರಮಕ್ಕೆ ಒಂದು ಅಲ್ಪವಿರಾಮ. ಈ ಮಧ್ಯೆ ಅಪ್ಪ, ಅಮ್ಮನಿಂದ ಪದೇ ಪದೇ ಎಚ್ಚರಿಕೆ. ಅವರಷ್ಟಕ್ಕೆ ಅವರೇನೋ ಹೇಳ್ತಾ ಇರ್ತಾರೆ, ಕೇಳುವವರು ಯಾರು ಬೇಕಲ್ಲ.

ಮೂರು ದಿನಗಳ ಹಬ್ಬ ದೀಪಾವಳಿಯ ಕೊನೆಯ ಭಾಗ ಬಲಿ ಪಾಡ್ಯಮಿ ಮತ್ತೆ ಗೋಪೂಜೆ. ಅಂದಿನ ಹರುಷ ಅಂದ್ರೆ ಮನೆಯ ಹಸುಗಳನ್ನೆಲ್ಲ ಸಿಂಗರಿಸುವುದು. ಬೆಳಗ್ಗೆ ಬೇಗ ಎದ್ದು ಮನೆಯ ಎಲ್ಲ ದನಗಳನ್ನು ಬಾವಿಕಟ್ಟೆಯ ಬಳಿ ಪಂಪ್‌ಸೆಟ್‌ ನೀರಿನಲ್ಲಿ ಮೈ ತಿಕ್ಕಿ ತಿಕ್ಕಿ ತೊಳೆದು, ಅವುಗಳ ಮೈ ಫ‌ಳಫ‌ಳ ಹೊಳೆವಂತೆ ಮಾಡುವುದು ಮುಖ್ಯ ಕೆಲಸ. ಅನಂತರ ಎಲ್ಲ ದನಗಳನ್ನ ಮನೆಯ ಸುತ್ತಮುತ್ತಲೇ ಕಬ್ಬಿಣದ ಗೂಟಕ್ಕೆ ಕಟ್ಟಿ, ಅಮ್ಮ ಅಡುಗೆ ಮನೆ ಕಡೆ ಹೋದರೆ ನಮಗೆ ಅವುಗಳನ್ನು ಬಣ್ಣಗಳಲ್ಲಿ ಚಂದಗಾಣಿಸುವ ಕೆಲಸ. ಮನೆಯ ಸುತ್ತಲಿನ ತೋಟದಲ್ಲಿ ಕುಯ್ದು ಆರಿಸಿದ ದಾಸವಾಳ, ನೀಲಿ ಗೊರಟೆ ಹೂವುಗಳನ್ನು ಬಾಳೆ ದಾರದಲ್ಲಿ ಕಟ್ಟಿ ನಾಲ್ಕು ಹಾರ ಮಾಡಿಟ್ಟರೆ ಒಂದು ಕೆಲಸ ಮುಕ್ತಾಯ.

ತೊಳೆದ ಹಸುಗಳ ಮೈ ಇನ್ನು ಒದ್ದೆ ಇರುವಂತೆಯೇ ಒಂದೊಂದು ತಟ್ಟೆಯಲ್ಲಿ ಅರಶಿಣ, ಕುಂಕುಮ, ಶೇಡಿ ಇವುಗಳನ್ನು ನೀರಾಗಿಸಿ, ಒಂದು ಲೋಟವನ್ನು ಕವುಚಾಗಿ ಅದರಲ್ಲಿ ಅದ್ದಿ, ಹಸುಗಳ ಇಡೀ ಮೈಗೆ ಬಳೆಗಳಂತೆ ದುಂಡು ದುಂಡನೆ ಚಿತ್ತಾರ ಬಿಡಿಸಿದರೆ. ಉಳಿದ ಬಣ್ಣವನ್ನು ಅವುಗಳ ಕೊಂಬಿಗೆ ಹಚ್ಚಿ ರಂಗೈರಿಸುತ್ತಿದ್ದೆವು. ಇಲ್ಲಿಗೆ ಎರಡನೇ ಹಂತದ ಸಿಂಗಾರ ಮುಗಿದಂತೆ. ಕೊನೆಯದಾಗಿ ನಮ್ಮ ಮನೆಯ ಒಕ್ಕಲು ಹೆಂಗಸು ಚಂದು ತಂದುಕೊಟ್ಟ ಕ್ವಾಳೇ/ಕೋಳೆ (ನೈದಿಲೇ) ಅಥವಾ ತಾವರೆ ಹೂವನ್ನು ಉದ್ದದ ಕಂಡಿ ಸಮೇತ ತಂದು ಕೊಡುತ್ತಿದ್ದಳು. ಅದನ್ನು ಪುರುಸೊತ್ತಲ್ಲಿ ಜೋಪಾನವಾಗಿ, ಹೂವಿನ ಕಾಂಡವನ್ನು ಆ ಕಡೆಗೊಮ್ಮೆ, ಈ ಕಡೆಗೊಮ್ಮೆ ಮುರಿದು ಉದ್ದದ ಹಾರವನ್ನಾಗಿ ಮಾಡಿ ಇಟ್ಟರೆ ಪೂಜೆಗೆ ಒಂದು ಲೆಕ್ಕದ ತಯಾರಿ ಮುಗಿದಂತೆ.

ಇಷ್ಟನ್ನು ಮುಗಿಸಿದ ಮೇಲೆ ನಾವೆಲ್ಲ ಸ್ನಾನ ಮಾಡಿ ಪೂಜೆಗೆ ಸಿದ್ಧ. ಅಮ್ಮ ಹಸುಗಳನ್ನೆಲ್ಲ ತಂದು ಅಂಗಳದಲ್ಲಿ ಕೊಟ್ಟಿಗೆಯ ಕಂಬಕ್ಕೆ ಕಟ್ಟಿ ಇಡುತ್ತಿದ್ಲು. ಆಮೇಲೆ ಅವುಗಳಿಗೆ ಅರಶಿನ ಕುಂಕುಮ ಹಣೆಗೆ ಹಚ್ಚಿ , ಹೂವಿನ ಸರಗಳನ್ನು ಕುತ್ತಿಗೆಗೆ ಕಟ್ಟಿ, ಪೂಜೆ ಮಾಡ್ತಾ ಇದ್ವಿ. ನೈವೇದ್ಯಕ್ಕೆ ನೆನೆಸಿದ ಅಕ್ಕಿಯನ್ನು ಬಾಯಿಗೆ ತಿನ್ನಿಸಿದ ಮೇಲೆ ಅಮ್ಮ, ಮಾಡಿದ ದೋಸೆಯನ್ನು ತಂದು ಎಲ್ಲ ಹಸುಗಳಿಗೆ ಮಕ್ಕಳ ಮೂಲಕ ತಿನ್ನಿಸುತ್ತ ಇದ್ಲು. ಆಮೇಲೆ ಅವುಗಳಿಗೆ ಆರತಿ ಮಾಡಿ, ನಮಸ್ಕಾರ ಮಾಡೋದು. ಅದೊಂದು ಸುಂದರ ಅನುಭೂತಿ. ಇಷ್ಟೆಲ್ಲ ಆದ್ಮೇಲೆ ಈ ದಿನ ಒಂದು ಹೆಚ್ಚು ಕೆಲಸ ಅಂದ್ರೆ ಹಿಂದಿನ ದಿನ ಸುಡದೆ ಹಾಗೆ ಉಳಿದ ಪಟಾಕಿಗಳನ್ನು ಆರಿಸೋದು. ಅವುಗಳನ್ನು ಜೋಪಾನದಿಂದ ತಂದು ಬಿಸಿಲಿನಲ್ಲಿ ಒಣಗಿಸೋದು. ಯಾವುದು ದಂಡ ಆಗಬಾರದು ನೋಡಿ, ಎಷ್ಟಾದ್ರೂ ಮಹಾರಾಜರ ಆಸ್ತಿ ಅಲ್ವೇ.

ಸಂಜೆ ಆದಾಗ ಅಪ್ಪ ಒಂದಷ್ಟು ಕೊಲೆ°ಣೆ ಸಾಮಗ್ರಿಗಳನ್ನ ತಯ್ನಾರು ಮಾಡುತ್ತಾ ಇದ್ರು. ಕೋಲೆ°ಣೆ ಅಂದ್ರೆ ಒಣಗಿದ ಬಿದಿರಿನ ಒಂದಡಿ ಉದ್ದದ ಕೋಲಿಗೆ ಹತ್ತಿಯ ಬಟ್ಟೆಯನ್ನು ಸುತ್ತಿ, ಎಣ್ಣೆಯಲ್ಲಿ ಅದ್ದಿ ದೀಪ ಬೆಳಗಲು ಮಾಡುವುದು. ಚಿಕ್ಕ ದೊಂದಿ ಅಂತ ಹೇಳಬಹುದು. ಅದರ ಜತೆಗೆ ನಮಗೆ ತೋಟ, ಗದ್ದೆ, ಬೇಲಿಯನ್ನು ಸುತ್ತಿ ಗಂಟೆ ಹೂವನ್ನು ಮತ್ತೆ ಬೇರೆ ಇತರ ಹೂಗಳನ್ನ ಕುಯ್ದು ತರುವುದು. ಆ ದಿನ ಸಂಜೆ ಗದ್ದೆಗೆ ದೀಪ ಇಡುವ ಕಾರ್ಯಕ್ರಮ. ಕರಾವಳಿಯಲ್ಲಿ ಇದೊಂದು ಸುಂದರ ಪದ್ಧತಿ. ಭತ್ತದ ಕೊಯ್ಲೆಲ್ಲ ಮುಗಿದ ಮೇಲೆ ದೀಪಾವಳಿಯ ಬಲಿ ಪಾಡ್ಯಮಿಯಂದು ಗದ್ದೆಯ ಒಂದು ಮೂಲೆಯಲ್ಲಿ ದೀಪ ಹಚ್ಚಿ, ಬಾಳೆ ಎಲೆಯ ಮೇಲೆ ಅವಲಕ್ಕಿ ಚೆಲ್ಲಿ ಬಲೀಂದ್ರನನ್ನು ಕೂಗಿ ಕರೆಯೋ ಕ್ರಮ. ಇದೆಲ್ಲ ನಡೆಯುವುದು ಸೂರ್ಯಾಸ್ತದ ಅನಂತರ. ಬಲಿಯನ್ನು ಕೂಗಿ ಕರೆಯುವಾಗ ಹೀಗೆ ಹೇಳುವುದು ವಾಡಿಕೆ “ಹೊಲಿ ಕೊಟ್ರೋ, ಬಲಿ ತಕಂಡ್ರೋ, ಬಲೀಂದ್ರ ದೇವ್ರು ತಂ ರಾಜ್ಯಕ್ಕೆ ತಾವೇ ಹೊತ್ರೋ, ಹೋಲಿಯೇ ಬಾ, ಹೋಲಿಯೇ ಬಾ, ಹೋಲಿಯೇ ಬಾ…’ ಅಂತ ಮೂರು ಬಾರಿ ಜೋರಾಗಿ ಹೇಳಿ “ಕೂ ಕೂ ಕೂ’ ಅಂತ ಕೂಗೋದು. ರಾತ್ರಿಯ ಮೌನದಲ್ಲಿ ಆ ಸ್ವರವನ್ನು ಕೇಳುವುದೇ ಒಂದು ಖುಷಿಯ ವಿಚಾರ.

ನಮ್ಮ ಮನೆಯಲ್ಲಿ ಈ ಗದ್ದೆಗೆ ದೀಪ ಇಡುವುದನ್ನ ನಮ್ಮ ಒಕ್ಕಲು ಜನರೇ ಮಾಡುತಿದ್ರು. ಹಾಗಾಗಿ ಸಂಜೆಯ ಹೊತ್ತಿಗೆ ಅವ್ರು ಮನೆಗೆ ಬಂದು, ಹೂವು, ಅವಲಕ್ಕಿ, ಬಾಳೆಎಲೆ, ಕೋಲ್ನೆಣೆ/ನೆಣೆಕೋಲು ತಕೊಂಡು ಹೋಗ್ತಾ ಇದ್ರು. ಅಲ್ಲಿಗೆ ಓಣಂಗೆಂದು ಬಂದ ಬಲೀಂದ್ರ ದೀಪಾವಳಿಯ ಬಲಿಪಾಡ್ಯಮಿಗೆ ಜನರ ಇಷ್ಟಾರ್ಥ ನೆರವೇರಿಸಿ, ಒಳ್ಳೆಯ ಫಸಲನ್ನು ಕೊಟ್ಟು ಮತ್ತೆ ತಮ್ಮ ರಾಜ್ಯಕ್ಕೆ ವಾಪಸ್‌ ಹೋಗ್ತಾರೆ.

ಹೀಗೆ ಮೂರು ದಿನದ ದೀಪಾವಳಿ ಹಬ್ಬದ ಸಂಭ್ರಮವೆಲ್ಲ ಮುಗಿದು, ಬಲೀಂದ್ರನನ್ನು ಅವನ ರಾಜ್ಯಕ್ಕೆ ಕಳಿಸಿ, ಮತ್ತೆ ಮುಂದೆ ಬರುವ ತುಳಸಿ ಹಬ್ಬಕ್ಕೆ ಕಾಯುವುದೇ ಒಂದು ಸುಂದರ ಕಾಲ.

*ಗುರುರಾಜ ಹೇರ್ಳೆ, ಬಹ್ರೈನ್‌

Advertisement

Udayavani is now on Telegram. Click here to join our channel and stay updated with the latest news.

Next