Advertisement
ಬನ್ನಿ, ದೀಪಾವಳಿಯ ಬಗ್ಗೆ ಕೊಂಚ ಭಿನ್ನವಾಗಿ ಮತ್ತು ನಾನಾ ವಿಷಯಗಳನ್ನು ಮಾತನಾಡುವ. ದೀಪಾವಳಿ ಹಬ್ಬ ಎಂಬುದು ಕೇವಲ ಒಂದು ಪ್ರಾಂತ, ರಾಜ್ಯ ಮತ್ತು ದೇಶಕ್ಕೆ ಸಂಬಂಧಿಸದೇ ಇಂದು ಲೋಕಾದ್ಯಂತ ಆಚರಿಸುವ ಹಬ್ಬವಾಗಿದೆ. ದೀಪಾವಳಿಯ ಹಬ್ಬಕ್ಕೂ ಈ ಕೆಳಗಿನ ಶಾಂತಿ ಮಂತ್ರಕ್ಕೂ ಬಹಳಾ ನಂಟಿದೆ.“ಓಂ ಅಸತೋಮಾ ಸದ್ಗಮಯ |
ತಮಸೋಮಾ ಜ್ಯೋರ್ತಿಗಮಯಾ |
ಮೃತ್ಯೋರ್ಮಾಮೃತಂಗಮಯ ||
ಓಂ ಶಾಂತಿ ಶಾಂತಿ ಶಾಂತಿಃ ”
Related Articles
Advertisement
“Diwali’ ಎಂಬುದು ದಿವಾಲಿ ಎಂದು ಓದಿಕೊಂಡಾಗ ತೊಂದರೆಯಾಗುವುದಿಲ್ಲ. ಅಂದ ಹಾಗೆ “Diwali’ ಎಂದು ಬರೆಯುವವರು ಉತ್ತರ ಭಾರತೀಯರು ಅಲ್ಲವೇ? ಹಿಂದಿಯಲ್ಲೂ “ಳ’ಕಾರವಿಲ್ಲ. ಈ ದೀಪಾವಳಿಯಿಂದಲಾದರೂ Diwali’ ಎಂಬುದನ್ನು ದಿವಾಳಿ ಎಂದು ಅರ್ಥೈಸಿಕೊಳ್ಳದೇ “ದಿವಾಲಿ’ ಎಂದು ಅರ್ಥೈಸಿಕೊಂಡು ಮನವನ್ನು ಶಾಂತವಾಗಿ ಇರಿಸಿಕೊಳ್ಳಿ. ಲಕ್ಷ್ಮೀ ದೇವಿಯ ಪೂಜೆಯ ಈ ಶುಭದಿನದಲ್ಲಿ ಯಾರೂ ಯಾರಿಗೂ ದಿವಾಳಿಯಾಗು ಎಂದು ಹಾರೈಸುವುದಿಲ್ಲ ಅಲ್ಲವೇ? ಹೀಗಾಗಬಹುದು ಅನ್ನಿಸಿದರೆ ಧಾರಾವಾಹಿ ನೋಡುವುದನ್ನು ಕಡಿಮೆ ಮಾಡಿ, ಆಯ್ತಾ?
ಬಹಳ ವರ್ಷಗಳ ಹಿಂದೆ, ನಮ್ಮ ಪಕ್ಕದ ಮನೆಯಲ್ಲಿ ಸ್ಕಾಟ್ಲ್ಯಾಂಡ್ ದೇಶದ ಹಿರಿಯ ದಂಪತಿಗಳು ಇದ್ದರು. ನವೆಂಬರ್ ತಿಂಗಳ ಸಮಯದಲ್ಲಿ ಹಲವಾರು ಮನೆಯ ಮುಂದೆ ದೀಪಾಲಂಕಾರ ಕಂಡು “ಕ್ರಿಸ್ಮಸ್ ಹಬ್ಬ ಇನ್ನೂ ದೂರವಿದೆ. ಬಹುಶ: ನೀವುಗಳು ಅದಕ್ಕಾಗಿ ದೀಪಗಳನ್ನು ಇರಿಸಿಲ್ಲ ಅನ್ನಿಸುತ್ತೆ. ನಿಮ್ಮ ಮನೆಗಳಲ್ಲಿ ಯಾವ ಹಬ್ಬ ನಡೆಯುತ್ತಿದೆ?’ ಎಂದು ವಿಚಾರಿಸಿದಾಗ ನಾನು ದೀಪಾವಳಿ ಹಬ್ಬದ ವೈಶಿಷ್ಟ್ಯವನ್ನು ತಕ್ಕಮಟ್ಟಿಗೆ ವಿವರಿಸಿದ್ದೆ. ಅದನ್ನು ನೆನಪಿನಲ್ಲಿ ಇರಿಸಿಕೊಂಡವರು, ಮುಂದಿನ ಕೆಲವು ವರ್ಷಗಳ ಕಾಲ, ಪ್ರತೀ ವರ್ಷವೂ ದೀಪಾವಳಿಯ ಶುಭಾಶಯಗಳನ್ನು ತಿಳಿಸುತ್ತಿದ್ದರು. ಆಸಕ್ತ ಮನಗಳಿಗೆ ಸೂಕ್ತವಾಗಿ ವಿವರಿಸಿದಾಗ ಅವರಲ್ಲೂ ನಮ್ಮ ಹಬ್ಬದ ಅರಿವು ಮೂಡುತ್ತದೆ. ನಮ್ಮೆಲ್ಲ ಹಬ್ಬದ ಮೂಲವೇ ವಿಶ್ವಶಾಂತಿ. ಯಾರಿಗೆ ಆಗಲಿ, ನಮ್ಮ ಹಬ್ಬದ ವೈಶಿಷ್ಟ್ಯ ತಿಳಿಸುವಾಗ ಶಾಂತಿ ಸಂದೇಶ ಅರುಹುವುದನ್ನು ಮರೆಯಬಾರದು, ಅಲ್ಲವೇ ?
ಇಲ್ಲಿನ ಹಲವಾರು ಐಟಿ ಕ್ಷೇತ್ರದ ಸಂಬಂಧಿ ಕಂಪೆನಿಗಳಲ್ಲಿ ಭಾರತೀಯರು ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಾರೆ ಎಂಬುದು ಗುಟ್ಟಿನ ಮಾತೇನಲ್ಲ. ನಮ್ಮೂರಿನ ದೊಡ್ಡ ಕಂಪೆನಿಗಳಲ್ಲಿ ಸಾಕಷ್ಟು ದೇಸೀ ಮಂದಿ ಇರುವುದರಿಂದ, ದೀಪಾವಳಿಯ ಹಬ್ಬದ ಬಗೆಗಿನ ಅರಿವು ಸಹೋದ್ಯೋಗಿಗಳಲ್ಲಿ ಮೂಡಿದೆ. ನಾನಿದ್ದ ಒಂದು ಕಂಪೆನಿಯಲ್ಲಿ, ದೀಪಾವಳಿಯ ದಿನದ ಕೆಲವು ಗಂಟೆಗಳು ಹಬ್ಬಕ್ಕಾಗಿ ಮೀಸಲಿಡಲಾಗಿದೆ. ಆ ಸಮಯದಲ್ಲಿ ಭಾರತೀಯರಲ್ಲದ ಗಂಡುಪಾಳ್ಯ ಬಣ್ಣಬಣ್ಣದ ಕುರ್ತಾ-ಪೈಜಾಮ ಧರಿಸಿಕೊಂಡು ಸಂತೋಷಿಸುತ್ತಾರೆ. ಹೆಚ್ಚಿನ ವೇಳೆ ತಮ್ಮದೇ ಸಹೋದ್ಯೋಗಿಗಳಿಂದ ಎರವಲು ಪಡೆದಿರುತ್ತಾರೆ. ಇದರಂತೆಯೇ ಮಹಿಳೆಯರು ಭಾರತೀಯ ಉಡುಪು ಧರಿಸುವುದರಲ್ಲಿ ಆಸಕ್ತಿ ತೋರುತ್ತಾರೆ. ಕೆಲವರು ಚೂಡಿದಾರ್ ಧರಿಸಿದರೆ, ಕೆಲವರು ಸೀರೆಯಲ್ಲಿ ಮಿಂಚುತ್ತಾರೆ. ಆ ಒಂದು ದಿನವಂತೂ ಹಣೆಗೆ ಕುಂಕುಮ ಧರಿಸಿಕೊಂಡು ಸಂಭ್ರಮಿಸುತ್ತಾರೆ. ಹಾಡುಗಾರಿಕೆ, ನೃತ್ಯ, ವಾದ್ಯಸಂಗೀತಗಳೇ ಮೊದಲಾದ ಕಾರ್ಯಕ್ರಮಗಳನ್ನು, ಊಟ ಮಾಡುತ್ತಾ, ನೋಡಿಕೊಂಡು ಆನಂದಿಸುತ್ತಾರೆ. ಬಾಂಗ್ರಾ ರೀತಿಯ ನೃತ್ಯಗಳಲ್ಲಿ ಭಾಗವಹಿಸುತ್ತಾರೆ ಕೂಡ.
ವಿದೇಶಿಯರಿಗೆ ನಮ್ಮ ಖಾರದ ಖಾದ್ಯಗಳು, ಮತ್ತು ಸಿಹಿತಿಂಡಿಗಳು ಬಲುಪ್ರಿಯ. ಹನ್ನೊಂದೂವರೆಗೆ ಊಟ ಎಂದು ಕಾರ್ಯಕ್ರಮದ ಪಟ್ಟಿಯಲ್ಲಿ ತಿಳಿಸಿರುವುದರಿಂದ ಕಾಲುಗಂಟೆ ಮುಂಚೆಯೇ ಸಾಲಿನಲ್ಲಿ ನಿಂತಿರುತ್ತಾರೆ. ನಾವೂ ಸಹ, ಮೊದಲು ಅವರಿಗೆ ಆದ್ಯತೆ ನೀಡಿ ಅನಂತರ ನಾವು ಊಟ ಮಾಡುವುದನ್ನು ಪಾಲಿಸಿಕೊಂಡೇ ಬಂದಿದ್ದೇವೆ. ದೀಪಾವಳಿಯ ಹಬ್ಬವು ದೇಶ, ಭಾಷೆ, ಗಂಡು-ಹೆಣ್ಣು ಎಂಬುದನ್ನೆಲ್ಲ ಬದಿಗೊತ್ತಿ ಸೌಹಾರ್ದತೆಯನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಇನ್ನೇನು ನಿದರ್ಶನ ಬೇಕು? ಯಾವುದೇ ಒಂದು ಹಬ್ಬದ ಮೂಲ ಉದ್ದೇಶವೇ ಅಲ್ಲವೇ?
ದೀಪಾವಳಿ ಎಂದರೆ ಬೆಳಕು, ಪಟಾಕಿ, ಮತ್ತು ಸಿಹಿತಿಂಡಿಗಳು. ಈ ಹಬ್ಬದ ಸಂದರ್ಭದಲ್ಲಿ ಪ್ರತೀ ವರ್ಷವೂ ನಮ್ಮದೇ ಸ್ನೇಹವರ್ಗಗಳಲ್ಲಿ ಹಬ್ಬದಲ್ಲಿ ಪಾಲ್ಗೊಳ್ಳುತ್ತೇವೆ. ಕನ್ನಡ ಸ್ನೇಹಿತರು ಮತ್ತು ಕನ್ನಡೇತರ ಸ್ನೇಹಿತರ ವಲಯದಲ್ಲಿ ಹಬ್ಬಗಳನ್ನು ಮಾಡುವುದರಿಂದ ನಮ್ಮದೇ ದೇಶದ ಹಲವಾರು ರಾಜ್ಯಗಳ ಸಂಸ್ಕೃತಿ, ರೀತಿ, ರಿವಾಜು, ಊಟ ತಿಂಡಿಗಳ ಪರಿಚಯವಾಗಿದೆ. ಪ್ರಮುಖವಾಗಿ ದೀಪಾವಳಿಯ ಹಬ್ಬವು ಪಟಾಕಿ ಸಿಡಿಸುವ ಮತ್ತು ಸಿಹಿತಿಂಡಿಗಳನ್ನು ಹಂಚಿಕೊಂಡು ತಿನ್ನುವ ಸಂಭ್ರಮ ವರ್ಣಿಸಲಾಗದ್ದು.
ನಿಮ್ಮಲ್ಲೂ ಪಟಾಕಿ ಹೊಡೆಯುವಿರಾ? ಎಂಬುದು ನಮಗೆ ಕೇಳಿ ಬರುವ ಸಾಮಾನ್ಯ ಪ್ರಶ್ನೆ. ಹೌದು, ಹಲವಾರು ವರ್ಷಗಳ ಹಿಂದೆ, ಸಲೀಸಾಗಿ ಪಟಾಕಿಗಳು ದೊರೆಯುತ್ತಿರಲಿಲ್ಲ ಮತ್ತು ಕೌಂಟಿಯವರ ಅನುಮತಿಯೂ ಇರುತ್ತಿರಲಿಲ್ಲ. ಇಂದಿನ ಸನ್ನಿವೇಶವೇ ಬೇರೆ. ಭಾರತೀಯರ ಸಂಖ್ಯೆ ಹೆಚ್ಚಿದೆ. ರಾಜಕೀಯದಿಂದ ಹಿಡಿದು ಹಲವಾರು ಕ್ಷೇತ್ರದಲ್ಲಿ ಭಾರತೀಯರು ಹೆಸರು ಮಾಡುತ್ತಿದ್ದಾರೆ ಹಾಗಾಗಿ ನಮ್ಮದೂ ಒಂದು ಐಡೆಂಟಿಟಿ ಹೆಚ್ಚಿದೆ. ಹಾಗಂತ ಈ ದೇಶ ನಮ್ಮದೇ ಎಂಬ ಉದ್ಧಟತನ ತೋರಿಲ್ಲ ಬಿಡಿ. ನೀತಿ-ನಿಯಮಾನುಸಾರವೇ ಹಬ್ಬಗಳ ಆಚರಣೆ ನಡೆಸಿಕೊಂಡು ಬಂದಿದ್ದೇವೆ.
ಬೆಳಕೆ ಪ್ರಧಾನವಾಗಿರುವ ಪಟಾಕಿಗಳನ್ನೇ ನಾವು ಹಚ್ಚುವುದು, ಸದ್ದು ಮಾಡುವ ಪಟಾಕಿಗಳು ದೊರೆಯುವುದೂ ಕಡಿಮೆಯೇ. ನಮ್ಮ ಮನೆಯ ಮುಂದೆಯೇ ಪಟಾಕಿಗಳನ್ನು ಸಿಡಿಸಿದರೂ ರಾತ್ರಿ ಹತ್ತು ಘಂಟೆಯ ಅನಂತರ ಯಾವ ಪಟಾಕಿಯನ್ನೂ ಸಿಡಿಸಿ ತೊಂದರೆ ಮಾಡುವುದಿಲ್ಲ. ಬೆಳಕಿನ ಪಟಾಕಿಯನ್ನೇ ಹಚ್ಚಿದರೂ, ಸಿಡಿಸಿದ ಅನಂತರದ ಅವಶೇಷವನ್ನು ಅರ್ಧ ನೀರು ತುಂಬಿಸಿರುವ ಬಕೇಟ್‌ನಲ್ಲಿ ಅದ್ದಿ ಇಡುತ್ತೇವೆ. ಅದರಂತೆಯೇ, ಹತ್ತರ ಅನಂತರ, ನಮ್ಮಿಂದ ಬೀದಿಯಲ್ಲಿ ಬಿದ್ದಿರುವ ಯಾವುದೇ ಪಟಾಕಿಯ ಕಸವನ್ನೂ ತೆಗೆದು ಟ್ರಾಶ್ ಮಾಡಿ ಶುಚಿ ಮಾಡುವುದನ್ನೂ ಪಾಲಿಸಿಕೊಂಡು ಬಂದಿದ್ದೇವೆ.
ಹಬ್ಬಗಳ ಉದ್ದೇಶವೇ ಸಂಭ್ರಮ, ಆನಂದ ಹಂಚಿಕೊಳ್ಳುವುದು. ಸಿಹಿತಿಂಡಿಗಳು ಎನ್ನುವುದು ಈ ಆನಂದದ ಪ್ರತೀಕ. ಬೆಳಕು ಎಂಬುದು ಅಂಧಕಾರವನ್ನು ತೊಡೆಯುವ ಅರ್ಥದಲ್ಲಿ ಸಂಭ್ರಮಿಸುವ ಪರಿ. ಇಂಥಾ ಒಂದು ಅದ್ಭುತ ಸಂದೇಶವನ್ನು ಸಾರುವ ಈ ಹಬ್ಬವನ್ನೂ ಬೇರೆ ಬೇರೆ ಅರ್ಥಗಳ ರೂಪ ಕೊಟ್ಟು ಹಾಳುಗೆಡುವುದು ಬೇಡ. “ಲೋಕಾಃ ಸಮಸ್ತಃ ಸುಖೀನೋಭವಂತು’ ಎಂಬ ನೀತಿಯನ್ನು ಅನುಸರಿಸಿ ಬಾಳುವ. ಎಲ್ಲರಿಗೂ ದೀಪಾವಳಿಯ ಹಬ್ಬದ ಶುಭಾಶಯಗಳು.
ಶ್ರೀನಾಥ್ ಭಲ್ಲೆ