ಮಂಗಳೂರು: ಉಳ್ಳಾಲ ತೊಕ್ಕೊಟ್ಟು ರೈಲ್ವೇ ಮೇಲ್ಸೇತುವೆ ಬಳಿ 2016ರಲ್ಲಿ ನಡೆದಿದ್ದ ಮೊಹಮ್ಮದ್ ಸೈಫ್ವಾನ್ ಕೊಲೆ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಉಳ್ಳಾಲದಲ್ಲಿ ನಡೆದಿದ್ದ ರಾಜು ಕೋಟ್ಯಾನ್ ಕೊಲೆಗೆ ಪ್ರತೀಕಾರವಾಗಿ 2016ರ ಎ.26ರಂದು ಮಧ್ಯರಾತ್ರಿ 12.30ಕ್ಕೆ ಸೈಫ್ವಾನ್ ನ ಕೊಲೆ ನಡೆದಿತ್ತು ಎನ್ನಲಾಗಿದೆ.
ಮೊಹಮ್ಮದ್ ಸಲೀಂ, ನಿಜಾಮುದ್ದೀನ್ ಮತ್ತು ಮೊಹಮ್ಮದ್ ಸೈಫ್ವಾನ್ ಕ್ಯಾಟರಿಂಗ್ ಕೆಲಸ ಮುಗಿಸಿ ಒಂದೇ ಬೈಕ್‌ನಲ್ಲಿ ತೊಕ್ಕೊಟ್ಟು ಒಳ ಪೇಟೆಯಿಂದ ಪಿಲಾರ್ ಕಡೆಗೆ ಹೋಗಲು ರೈಲ್ವೇ ಮೇಲ್ಸೇತುವೆ ಬಳಿಗೆ ಬಂದಾಗ ಆರೋಪಿಗಳಾದ ರಾಹುಲ್ ಯಾನೆ ಬ್ಯಾಕ್ ರಾಹುಲ್, ಪವನ್‌ರಾಜ್, ಕಾರ್ತಿಕ್, ಶಿವರಾಜ್, ಎಡ್ವಿನ್ ರಾಹುಲ್ ಡಿ’ಸೋಜಾ, ರಾಹುಲ್ ಪೂಜಾರಿ, ಹೇಮಚಂದ್ರ ಅವರು ಮಾರಕಾಯುಧಗಳಿಂದ ಮೂವರ ಮೇಲೂ ಯದ್ವಾತದ್ವಾ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಈ ವೇಳೆ ಮೊಹಮ್ಮದ್ ಸಲೀಂ ಮತ್ತು ನಿಜಾಮುದ್ದೀನ್ ತಪ್ಪಿಸಿಕೊಳ್ಳುವಲ್ಲಿ ಸಫಲರಾಗಿದ್ದರು. ಮೊಹಮ್ಮದ್ ಸೈಫ್ವಾನ್ ನನ್ನು ತಂಡವು ಕೊಲೆ ಮಾಡಿತ್ತು ಎಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉಳ್ಳಾಲ ದರ್ಗಾದಲ್ಲಿ ರಾತ್ರಿ ಪ್ರಾರ್ಥನೆ ಮುಗಿಸಿ ಬರುತ್ತಿದ್ದ ಕೆಲವರು ಆರೋಪಿಗಳು ಕೊಲೆ ಮಾಡುವುದನ್ನು ನೋಡಿದ್ದ ಪ್ರತ್ಯಕ್ಷಸಾಕ್ಷಿಗಳಾಗಿದ್ದರು. ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಬಟ್ಟೆ ಮತ್ತು ಮಾರಕಾಯುಧಗಳ ಮೇಲಿದ್ದ ರಕ್ತ ಮೃತನ ಡಿಎನ್‌ಎಗೆ ತಾಳೆಯಾಗಿದೆ ಎಂದು ಸಾಕ್ಷಿ ವಿಚಾರಣೆ ನಡೆಸಲಾಗಿತ್ತು. ಪ್ರಾಥಮಿಕ ತನಿಖೆಯನ್ನು ಪಿಎಸ್‌ಐ ಭಾರತಿ, ಪೊಲೀಸ್ ನಿರೀಕ್ಷರಾದ ಅಶೋಕ್ ಅವರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ದ.ಕ. ಜಿಲ್ಲಾ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧಿಧೀಶರಾದ ಕಾಂತರಾಜು ಎಸ್. ವಿ. ಅವರು, ಆರೋಪಿಗಳ ಮೇಲಿನ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟು, ಆರೋಪಿಗಳನ್ನು ನಿರ್ದೋಷಿಗಳು ಎಂದು ತೀರ್ಪು ನೀಡಿ ಆದೇಶಿಸಿದ್ದಾರೆ.
ಆರೋಪಿಗಳ ಪರವಾಗಿ ಬೆಳುವಾಯಿ ಅರುಣ್ ಬಂಗೇರ, ರಾಜೇಶ್ ಕುಮಾರ್ ಅಮ್ಟಾಡಿ ಹಾಗೂ ಆಶಾ ನಾಯಕ್ ವಾದ ಮಂಡಿಸಿದ್ದರು.