Advertisement

Ayodhya: ರಾಮಮಂದಿರದಲ್ಲಿ ಐತಿಹಾಸಿಕ ದೀಪಾವಳಿ: ಮೊದಲ ದೀಪಾವಳಿಗೆ ಅಯೋಧ್ಯೆ ಸಾಕ್ಷಿ

10:45 PM Oct 30, 2024 | Team Udayavani |

ಅಯೋಧ್ಯೆ: ಪವಿತ್ರ ರಾಮಮಂದಿರ ಉದ್ಘಾಟನೆಯ ಮೊದಲ ದೀಪಾವಳಿಗೆ ಅಯೋಧ್ಯೆ ಸಾಕ್ಷಿಯಾಗಿದೆ. ಇಲ್ಲಿನ ಸರಯೂ ನದಿ ದಡದಲ್ಲಿ 25 ಲಕ್ಷಕ್ಕೂ ಅಧಿಕ ಹಣತೆಗಳನ್ನು ಬೆಳಗಲಾಗಿದ್ದು, 2 ಗಿನ್ನೆಸ್‌ ವಿಶ್ವದಾಖಲೆಗಳು ನಿರ್ಮಾಣವಾಗಿವೆ.

Advertisement

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಇಡೀ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದು, ದೀಪಾರಾಧನೆಯಲ್ಲಿ ರಾಜ್ಯದ ಎಲ್ಲಾ ಕ್ಯಾಬಿನೆಟ್‌ ಸಚಿವರು ಭಾಗಿಯಾಗಿದ್ದರು. ಯೋಗಿ ಮೊದಲ ದೀಪ ಹಚ್ಚುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ಸರಯೂ ತಟದಲ್ಲಿ ನಡೆಯುವ ದೀಪಾರತಿ ಮತ್ತು ದೀಪೋತ್ಸವ ನೋಡಲು ಇಡೀ ಅಯೋಧ್ಯೆಯ ಜನರು ನೆರೆದಿದ್ದು, ಎಲ್ಲೆಡೆ ರಾಮನ ಜಪ ಕೇಳಿಬರುತ್ತಿತ್ತು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಯೋಗಿ, ಕಾಶಿ ಮತ್ತು ಮಥುರಾಗಳು ಸಹ ಅಯೋಧ್ಯೆಯಂತೆ ಪ್ರಕಾಶಿಸಬೇಕು. ಅಯೋಧ್ಯೆಯಲ್ಲಿ ನಡೆದಿರುವುದು ಡಬಲ್‌ ಎಂಜಿನ್‌ ಸರ್ಕಾರದ ಅಭಿವೃದ್ಧಿ ಎಂದು ಹೇಳಿದರು.

ಡ್ರೋನ್‌ ಶೋ: ದೀಪಾವಳಿಯ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಡ್ರೋನ್‌ ಶೋವನ್ನು ಸಹ ಆಯೋಜಿಸಲಾಗಿತ್ತು. ಡ್ರೋನ್‌ ಶೋನಲ್ಲಿ ರಾಮಾಯಣದ ಕಥೆಗಳನ್ನು ಪ್ರಸ್ತುತಪಡಿಸಲಾಗಿತ್ತು. ಅಯೋಧ್ಯೆಯಲ್ಲಿ ರಕ್ಷಣೆಗಾಗಿ 10000 ಮಂದಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು.

Advertisement

ಒಂದೇ ಬಾರಿ ಬೆಳಗಿನ 25 ಲಕ್ಷಕ್ಕೂ ಅಧಿಕ ಹಣತೆ
ಅಯೋಧ್ಯೆಯಲ್ಲಿ ನಡೆದ ದೀಪೋತ್ಸವದಲ್ಲಿ 2 ವಿಶ್ವ ದಾಖಲೆಗಳು ನಿರ್ಮಾಣವಾಗಿವೆ. ಅತಿ ಹೆಚ್ಚು ಜನರು ಒಂದೇ ಬಾರಿ ಆರತಿ ಎತ್ತಿದ್ದು ಮತ್ತು ಒಂದೇ ಪ್ರದೇಶದಲ್ಲಿ 25,12,585 ಎಣ್ಣೆ ದೀಪಗಳನ್ನು ಬೆಳಗಿದ್ದು ವಿಶ್ವದಾಖಲೆ ಪಟ್ಟಿಗೆ ಸೇರ್ಪಡೆಯಾಗಿದೆ. ದೀಪೋತ್ಸವಕ್ಕೆ ಆಗಮಿಸಿದ್ದ ಗಿನ್ನೆಸ್‌ ಸಂಸ್ಥೆಯ ಅಧಿಕಾರಿಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಪ್ರಮಾಣಪತ್ರವನ್ನು ನೀಡಿದ್ದಾರೆ.

ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದಲ್ಲೂ ದೀಪಾವಳಿ
ಭಾರತದಲ್ಲಿ ದೀಪಾವಳಿ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ಸಂಭ್ರಮಾಚರಣೆ ನಡೆಸಲಾಗಿದೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ವಿಶ್ವ ವ್ಯಾಪಾರ ಕೇಂದ್ರದ ಇಡೀ ಕಟ್ಟಡವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಿದ್ದು, ಇದರ ಮೇಲೆ ಹಣತೆಯ ಚಿತ್ರ ಮೂಡಿಸುವ ಮೂಲಕ ಭಾರತೀಯರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಶುಭ ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next