Advertisement

Deepavali 2023: ದೀಪಾವಳಿಯ ಬಲಿಪಾಡ್ಯಮಿ… ಪೂಜ್ಯನೀಯ ಗೋ ಪೂಜೆ

05:58 PM Nov 13, 2023 | Team Udayavani |

ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ತುಂಬಾ ಮಹತ್ವವಿದೆ. ಅವಳನ್ನು ಮಾತೆಯೆಂದು ಸಹ ಸಂಬೋಧಿಸಲಾಗುತ್ತದೆ. ತನ್ನ ಸಹವಾಸದಿಂದ ಇತರರನ್ನು ಪಾವನಗೊಳಿಸುವ, ತನ್ನ ಹಾಲಿನಿಂದ ಸಮಾಜವನ್ನು ಬಲಿಷ್ಠಗೊಳಿಸುವ, ತನ್ನ ಸೆಗಣಿಯಿಂದ ಗೊಬ್ಬರ ನೀಡುವ, ಕೃಷಿಗೆ ಉಪಯುಕ್ತವಾದ ಎತ್ತುಗಳಿಗೆ ಜನ್ಮ ನೀಡುವ, ಶ್ರೀಕೃಷ್ಣನಿಗೆ ಪ್ರಿಯವಾಗಿರುವ ಗೋವುಗಳನ್ನು ದೀಪಾವಳಿಯಂದು ಮರೆಯದೇ ಪೂಜಿಸುವ ಸಂಪ್ರದಾಯವಿದೆ.

Advertisement

ದೀಪಾವಳಿಯ ಬಲಿಪಾಡ್ಯಮಿಯನ್ನು ಗೋಸಂವರ್ಧನ ದಿನವನ್ನಾಗಿ ಆಚರಿಸುತ್ತಾರೆ. ಇದಕ್ಕೊಂದು ಪೌರಾಣಿಕ ಹಿನ್ನೆಲೆಯಿದೆ. ಶ್ರೀ ಕೃಷ್ಣ ಬೃಂದಾವನಕ್ಕೆ ಬರುವ ಮೊದಲು ಜನರೆಲ್ಲರೂ ದೇವೇಂದ್ರನನ್ನು ಪೂಜಿಸುತ್ತಿದ್ದರು. ಭಗವಾನ್‌ ಶ್ರೀ ಕೃಷ್ಣನು ಇಂದ್ರನ ಪೂಜೆ ನಿಲ್ಲಿಸುವುದರೊಂದಿಗೆ ಬೃಂದಾವನದಲ್ಲಿ ವಿಶೇಷವಾದ ಬಹಳ ದೊಡ್ಡದಾದ ಗೋವರ್ಧನ ಪರ್ವತದಿಂದ ಸಕಲ ಐಶ್ವರ್ಯ ಪಡೆಯುತ್ತಿರುವ ಜನರು ಇಂದ್ರನನ್ನು ಪೂಜಿಸುವ ಅಗತ್ಯವಿಲ್ಲ ಎಂದು ಶ್ರೀ ಕೃಷ್ಣ ಗೋವರ್ಧನಗಿರಿಯನ್ನು ಪೂಜಿಸುವ ವ್ಯವಸ್ಥೆ ಮಾಡಿದ.

ಇಂದ್ರ ಕ್ರೋಧಗೊಂಡು ಒಂದೇ ಸಮನೆ ಭಾರಿ ಮಳೆ ಸುರಿಸಿ ಜಲಪ್ರಳಯ ಉಂಟು ಮಾಡಿದ. ಜನರೆಲ್ಲರೂ, ಹಾಗೂ ಗೋವುಗಳೆಲ್ಲವೂ ಎಲ್ಲೆಂದರಲ್ಲಿ ಓಡತೊಡಗಿ ರಕ್ಷಣೆಗೆ ಭಗವಂತನಾದ ಶ್ರೀ ಕೃಷ್ಣನನ್ನು ಪ್ರಾರ್ಥಿಸಿದರು. ಶ್ರೀ ಕೃಷ್ಣ ಗೋವರ್ಧನಗಿರಿಯನ್ನು ತನ್ನ ಕಿರುಬೆರಳಿನಿಂದ ಎತ್ತಿ ಹಿಡಿದು ಸಮಸ್ತ ಗೋವುಗಳನ್ನು, ಜನರನ್ನು ರಕ್ಷಿಸಿದ. ಇಂದ್ರ ತನ್ನ
ತಪ್ಪನ್ನೊಪ್ಪಿಕೊಂಡು ಕ್ಷಮೆ ಕೇಳಿದ. ಶ್ರೀ ಕೃಷ್ಣ ಗೋವರ್ಧನ ಪರ್ವತ ಎತ್ತಿ ಗೋಕುಲ ರಕ್ಷಿಸಿದ ನೆನಪಿಗಾಗಿ ಗೋಶಾಲೆಗಳನ್ನು ತೊಳೆದು, ಗೋವುಗಳಿಗೆ ಸ್ನಾನ ಮಾಡಿಸಿ, ಗೋವುಗಳ ಮೈಮೇಲೆ ರಂಗೋಲಿ ಬಿಡಿಸಿ, ಕೊರಳಿಗೆ ಹೂವಿನ ಮಾಲೆ ಹಾಕಿ, ಗೋವುಗಳಿಗೆ ಅಕ್ಕಿ, ಬಾಳೆಹಣ್ಣು, ಬೆಲ್ಲ ಮುಂತಾದ ತಿನಿಸುಗಳನ್ನು ನೀಡಿ ಗೋಗ್ರಾಸ ನೀಡಿ ಪೂಜಿಸಿ ನಮಸ್ಕರಿಸುವುದು ಸಂಪ್ರದಾಯವಾಗಿ ಈ ದೀಪಾವಳಿಯ ಪಾಡ್ಯದಂದು ಗೋಸಂವರ್ಧನ ದಿನವಾಗಿ ಗೋಪೂಜೆ ಎಂಬುದಾಗಿ ಲೋಕಾದ್ಯಂತ ಭಗವದ್‌ ಭಕ್ತರು ಭಕ್ತಿ-ಶ್ರದ್ಧೆಯಿಂದ ಆಚರಿಸುವಂತಾಯಿತು.

ಪ್ರಾಣಿಗಳಲ್ಲಿ ಗೋವಿಗಿಂತ ಪೂಜ್ಯತಮ ಪ್ರಾಣಿ ಇನ್ನೊಂದಿಲ್ಲ. ಗೋವುಗಳನ್ನು ಗೋಮಾತೆ ಎಂದೇ ಕರೆಯುತ್ತಾರೆ. ಸರ್ವ ದೇವಾಃ ಸ್ಥಿತಾ ದೇಹೇ ಗೋಮಾತೆಯ ಶಿಖೆ ಇಂದ ನಖದವರೆಗೆ ದೇವತೆಗಳು ವಾಸಿಸುತ್ತಾರೆ. ಗಾವೋ ವಿಶ್ವಸ್ಯ ಮಾತರಃ ಎಂದರೆ ಸಮಗ್ರ ಪ್ರಪಂಚಕ್ಕೆ ಗೋವುಗಳು ಮಾತೃ ಸ್ವರೂಪಿಗಳು ಎಂಬುದಾಗಿ. ಗೋಮಾತೆಯ ನಾಲ್ಕು ಕಾಲುಗಳನ್ನು ನಾಲ್ಕು ವೇದಗಳು ಎಂಬುದಾಗಿ ಪುರಾಣಗಳಲ್ಲಿ ತಿಳಿಸಲಾಗಿದೆ. ಗೋಮಾತೆಯ ಅಮೃತಸದೃಶವಾದ ಹಾಲನ್ನು ಜಾತಿ-ಮತ-ಪಂಥ- ಹೆಣ್ಣು-ಗಂಡುಗಳೆಂಬ ಬೇದವಿಲ್ಲದೆ ಸ್ವೀಕರಿಸಿ ನಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳುತ್ತೇವೆ.

ಗೋಮಾತೆಯ ಉತ್ಪನ್ನಗಳಿಲ್ಲದೆ ಮಾನವ ಬದುಕಲು ಸಾಧ್ಯವಿಲ್ಲ. ಗೋವುಗಳು ಮಾನವನಿಗೆ ಸಹಕಾರಿಯಾಗಿದ್ದು
ಗೋಮಾತೆಯ ಉತ್ಪನ್ನಗಳಾದ ಹಾಲು, ಮೊಸರು, ಬೆಣ್ಣೆ, ತುಪ್ಪ ಮಾರಿ ತನ್ನ ಜೀವನ ಶ್ರೀಮಂತಗೊಳಿಸಿಕೊಂಡಿದ್ದಾನೆ. ದೇವತಾ ಕಾರ್ಯವಿರಲಿ, ಪಿತೃಕಾರ್ಯವಿರಲಿ ಗೋವಿನ ಉತ್ಪನ್ನ ಬೇಕೇಬೇಕು. ಭಗವಂತನ ಪಂಚಾಮೃತ ಸೇವೆಗೆ ಹಾಲು-ಮೊಸರು-ತುಪ್ಪ ಇರಲೇಬೇಕು.

Advertisement

ಮಾನವನ ದೇಹ ಶುದ್ಧಿಗೆ ಪಂಚಗವ್ಯ ತಯಾರಿಸಲು ಗೋಮಾತೆಯ ಉತ್ಪನ್ನಗಳಾದ ಹಾಲು- ಮೊಸರು- ತುಪ್ಪ- ಗೋಮೂತ್ರ-
ಗೋಮಯ ಬೇಕು. ಇನ್ನೂ ಗೋಮೂತ್ರ ಸ್ನಾನದಿಂದ ಚರ್ಮರೋಗ ಸಂಬಂಧಿತ ರೋಗಗಳು ವಾಸಿಯಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next