Advertisement

ದೀಪಕ್‌ ಹತ್ಯೆ: ಬಿಜೆಪಿಯಿಂದ ರಸ್ತೆ ತಡೆ ಪ್ರತಿಭಟನೆ, ಆಕ್ರೋಶ

11:55 AM Jan 05, 2018 | |

ಪುತ್ತೂರು: ಬಜರಂಗದಳ ಕಾರ್ಯಕರ್ತ ದೀಪಕ್‌ ರಾವ್‌ ಅವರ ಹತ್ಯೆ ಖಂಡಿಸಿ, ಬಿಜೆಪಿ ವತಿಯಿಂದ ನಗರದ ಬಸ್‌ ನಿಲ್ದಾಣದ ಸಮೀಪ ಮುಖ್ಯ ರಸ್ತೆಯನ್ನು ಗುರುವಾರ ಬೆಳಗ್ಗೆ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಯಿತು.

Advertisement

ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಎಂ.ಟಿ. ರಸ್ತೆ, ಬಸ್‌ ನಿಲ್ದಾಣ ಸಂಪರ್ಕ ರಸ್ತೆ ಹಾಗೂ ದರ್ಬೆ, ಬೊಳುವಾರು ರಸ್ತೆಗೆ ಅಡ್ಡಲಾಗಿ ಕುಳಿತು, ಕಾಂಗ್ರೆಸ್‌ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ಪೊಲೀಸ್‌ ಇಲಾಖೆಯ ನಿರ್ಲಕ್ಷದ ಕುರಿತು ಆಕ್ರೋಶ ವ್ಯಕ್ತಪಡಿಸಿ, ಮುಖ್ಯ ಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ, ಗೃಹ
ಸಚಿವರು ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

ತೆರವಿಗೆ ಯತ್ನ
ಹಠಾತ್‌ ರಸ್ತೆ ತಡೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಮಹೇಶ್‌ ಪ್ರಸಾದ್‌,
ರಸ್ತೆಯಿಂದ ಪ್ರತಿಭಟನೆ ತೆರವುಗೊಳಿಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಂಡಲ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅವರ ಮನವೊಲಿಸಲು ಯತ್ನಿಸಿದರು. ಇದಕ್ಕೆ ಬಗ್ಗದ ಪ್ರತಿಭಟನಕಾರರು, ನಮಗೆ ನ್ಯಾಯ ಸಿಗಬೇಕು. ಸರಕಾರ ಉತ್ತರ ಕೊಡಬೇಕು. ಅಲ್ಲಿಯ ತನಕ ನಮ್ಮ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು
ಘೋಷಣೆ ಮುಂದುವರಿಸಿದರು. ಕೆಲ ಕಾಲ ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. 

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಜಿಲ್ಲೆಯಲ್ಲಿ ಹಿಂದೂಗಳ
ಮಾರಣ ಹೋಮ ನಡೆಯುತ್ತಿದ್ದರೂ, ಕಾಂಗ್ರೆಸ್‌ ಸರಕಾರ ಆರೋಪಿಗಳ ಪರವಾಗಿ ನಿಂತಿದೆ. ಎರಡು ವರ್ಷದ ಹಿಂದೆ 1600 ಪಿಎಫ್‌ಐ ಕಾರ್ಯಕರ್ತರ ಮೇಲಿನ ಪ್ರಕರಣ ಹಿಂಪಡೆದು, ಹಿಂದೂಗಳ ಹತ್ಯೆಗೆ ಸರಕಾರವೇ ನೇರವಾಗಿ ಕುಮ್ಮಕ್ಕು ನೀಡಿದೆ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಸುರತ್ಕಲ್‌ ಶಾಸಕರು ಈ ಹತ್ಯೆಗೆ ಪ್ರಚೋದನೆ ನೀಡಿದ್ದಾರೆ. ರಾಜ್ಯದಲ್ಲಿ 21 ಜನ ಹಿಂದೂಪರ ಸಂಘಟನೆಯ ಕಾರ್ಯಕರ್ತರ ಹತ್ಯೆಯಾಗಿದೆ. ಇವರ ಜೀವಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ ಅವರು, ದೀಪಕ್‌ ರಾವ್‌ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರಧನ ವಿತರಿಸಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು.

Advertisement

ಬಿಜೆಪಿ ಗ್ರಾಮಾಂತರ ಮಂಡಲ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಸಂಪ್ಯದಲ್ಲಿ ಪೊಲೀಸ್‌ ಇಲಾಖೆಯೇ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿತ್ತು. ಜಿಲ್ಲೆಯ ನಾನಾ ಭಾಗದಲ್ಲಿ ಕೊಲೆ, ಹಲ್ಲೆ ಇತ್ಯಾದಿ ದೌರ್ಜನ್ಯಗಳು ನಡೆಯುತ್ತಲೇ ಇವೆ. ರಾಜ್ಯ ಸರಕಾರ ಇದರ ಬಗ್ಗೆ ಚಕಾರೆ ಎತ್ತದ ಪರಿಣಾಮ ಮತಾಂಧ ಶಕ್ತಿಗಳು ಜಿಲ್ಲೆಯ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದೆ. ದೀಪಕ್‌ ರಾವ್‌ ಕುಟುಂಬಕ್ಕೆ ನ್ಯಾಯ ಸಿಗದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಅರ್ಧ ತಾಸು ಸಂಚಾರ ಬಂದ್‌
ರಸ್ತೆ ತಡೆ ಹಿನ್ನೆಲೆಯಲ್ಲಿ ಸುಮಾರು ಅರ್ಧ ತಾಸು ವಾಹನಗಳು ಓಡಾಟ ಸ್ಥಗಿತಗೊಂಡಿತ್ತು. ಪೊಲೀಸರು ಎಂ.ಟಿ. ರಸ್ತೆಯ ಮೂಲಕ ವಾಹನ ಕಳುಹಿಸಲು ಮುಂದಾದರು. ಅಲ್ಲೂ ರಸ್ತೆ ತಡೆ ಮಾಡಲಾಯಿತು. ಪೊಲೀಸ್‌ ಇನ್‌ಸ್ಪೆಕ್ಟರ್‌ ಮಹೇಶ್‌ ಪ್ರಸಾದ್‌ ಅವರು ಮುಖ್ಯ ರಸ್ತೆಯ ಒಂದು ಬದಿಯಲ್ಲಿದ್ದ ಕಾರ್ಯಕರ್ತರನ್ನು ಬದಿಗೆ ಸರಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿದರು. ಆದರೂ, ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. 10 ನಿಮಿಷ ಇಲ್ಲೇ ಕೂರುವುದಾಗಿ ಪ್ರತಿಭಟನಕಾರರು ಪಟ್ಟು ಹಿಡಿದರು. ರಸ್ತೆಯ ಮಧ್ಯಭಾಗದಲ್ಲೇ ಮುಖಂಡರು ಭಾಷಣ ಮಾಡಿದರು. ಪ್ರತಿಭಟನೆ ಬಳಿಕ ಸಂಚಾರ ಸುಗಮವಾಯಿತು.

ಪ್ರತಿಭಟನೆಯಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನಗರ ಮಂಡಲ ಸಮಿತಿ ಅಧ್ಯಕ್ಷ ಜೀವಂಧರ್‌ ಜೈನ್‌, ಮಂಡಲ ಸಮಿತಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ, ಹಿಂದೂ ಸಂಘಟನೆಯ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ, ಬಿಜೆಪಿ ವಕ್ತಾರ ಆರ್‌.ಸಿ. ನಾರಾಯಣ, ತಾ.ಪಂ. ಸದಸ್ಯ ಶಿವರಂಜನ್‌, ಹರೀಶ್‌ ಬಿಜತ್ರೆ, ನಗರಸಭೆ ಸದಸ್ಯರಾದ ರಾಜೇಶ್‌ ಬನ್ನೂರು, ಹರೀಶ್‌ ನಾೖಕ್‌, ಸಹಜ್‌ ರೈ ಬಳಜ್ಜ, ಅಜಿತ್‌ ರೈ ಹೊಸಮನೆ, ಜಿ.ಪಂ. ಮಾಜಿ ಸದಸ್ಯರಾದ ಶೈಲಜಾ ಭಟ್‌, ಕೇಶವ ಗೌಡ ಪುಯಿಲ, ಮಂಡಲ ಗ್ರಾಮಾಂತರ ಕಾರ್ಯದರ್ಶಿ ಶಂಭು ಭಟ್‌. ತಾ.ಪಂ. ಮಾಜಿ ಸದಸ್ಯ ಜಯರಾಮ ಪೂಜಾರಿ, ರಾಜೇಶ್‌ ಪರ್ಪುಂಜ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next