ಆಂಧ್ರಪ್ರದೇಶ:ತೆಲುಗು ಸಿನಿಮಾರಂಗದಲ್ಲಿ ವೇದಂ, ಭಾಗ್ ಮತಿ, ಆರುಂಧತಿ, ರುದ್ರಮದೇವಿ ಹಾಗೂ ಸೈಜ್ ಜೀರೋದಂತಹ ಮಹಿಳಾ ಪ್ರಧಾನ ಚಿತ್ರಗಳ ಮೂಲಕ ಎಲ್ಲರ ಮನಗೆದ್ದಾಕೆ ಅನುಷ್ಕಾ ಶೆಟ್ಟಿ. ಅದರಲ್ಲಿಯೂ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾದ ನಂತರ ಅನುಷ್ಕಾ ಬಹುಬೇಡಿಕೆಯ ಸ್ಟಾರ್ ನಟಿಯಾಗಿದ್ದು ಸುಳ್ಳಲ್ಲ. ಆದರೆ ಇದೀಗ ಅನುಷ್ಕಾ ಶೆಟ್ಟಿ ಸಿನಿಮಾರಂಗ ತೊರೆಯಲಿದ್ದಾರೆ ಎಂಬ ಊಹಾಪೋಹ ದಟ್ಟವಾಗಿ ಹರಿದಾಡತೊಡಗಿದೆ.
ಸ್ಟಾರ್ ನಟಿಯಾಗಿ ಖ್ಯಾತಿಯಾಗುವ ಮುನ್ನ ಅನುಷ್ಕಾ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದ್ದರು. ಈಕೆ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು.
ಆರ್.ಮಾಧವನ್ ಜತೆ ನಟಿಸಿರುವ ನಿಶ್ಯಬ್ದಂ ಸಿನಿಮಾ ಬಿಡುಗಡೆ ನಿರೀಕ್ಷೆಯಲ್ಲಿರುವ ಅನುಷ್ಕಾ ಶೆಟ್ಟಿ ಸಿನಿಮಾರಂಗ ತೊರೆಯುವ ನಿರ್ಧಾರ ಕೈಗೊಂಡಿರುವ ಮಾತುಗಳು ಕೇಳಿಬಂದಿದೆ ಎಂದು ಟಾಲಿವುಡ್ ಡಾಟ್ ನೆಟ್ ವರದಿ ಮಾಡಿದೆ.
ಇತ್ತೀಚೆಗಷ್ಟೇ ಅನುಷ್ಕಾ ಅವರು ಗೌತಮ್ ಮೆನನ್ ನಿರ್ದೇಶನದ ಬಹುಭಾಷಾ ಚಿತ್ರ ಪ್ಯಾನ್ ಇಂಡಿಯಾದಲ್ಲಿ ನಟಿಸುವ ಕರಾರಿಗೆ ಸಹಿ ಹಾಕಿದ್ದರು. ಏತನ್ಮಧ್ಯೆ ಕೋವಿಡ್ 19 ಅಟ್ಟಹಾಸದಿಂದಾಗಿ ಸಿನಿಮಾದ ಕುರಿತು ಯಾವುದೇ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಮೂಲಗಳ ಪ್ರಕಾರ, ಗೌತಮ್ ಮೆನನ್ ಈ ಪ್ರಾಜೆಕ್ಟ್ ಸೆಟ್ಟೇರುವುದಿಲ್ಲ, ಇದಕ್ಕೆ ಕಾರಣ ನಿರ್ದೇಶಕರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವುದು ಎಂದು ವಿವರಿಸಿದೆ.
ತಮ್ಮ ಆಪ್ತ ನಿರ್ದೇಶಕರು ಮತ್ತು ನಿರ್ಮಾಪಕರುಗಳಿಗೆ ಮಾತ್ರ ಮೊದಲ ಪ್ರಾಶಸ್ತ್ಯ ನೀಡುವ ಮೂಲಕ ಸಿನಿಮಾಗಳಿಗೆ ಸಹಿ ಹಾಕುತ್ತಿದ್ದಾರೆ. ಅಂದರೆ ಅನುಷ್ಕಾ ಶೀಘ್ರವಾಗಿ ನಟನೆಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಅನುಮಾನ ಮೂಡಿಸುತ್ತಿರುವುದಾಗಿ ವರದಿ ಹೇಳಿದೆ.