Advertisement

ಡೀಮ್ಡ್ ಫಾರೆಸ್ಟ್‌ ತೊಡಕು ಇನ್ನೂ ಜೀವಂತ: ಅರಣ್ಯ-ಕಂದಾಯ ಇಲಾಖೆಯ ಜಟಾಪಟಿಗೆ ಅಂತ್ಯ ಎಂದು?

12:39 PM Mar 03, 2022 | Team Udayavani |

ಉಡುಪಿ : ಅರಣ್ಯ ಇಲಾಖೆಯ ಕಾನೂನು ತೊಡಕಿನಿಂದಾಗಿ ಜಿಲ್ಲೆಯಲ್ಲಿ ಸಾವಿರಾರು ಕಾಮಗಾರಿಗಳು ಮೊಟಕುಗೊಂಡಿವೆ. ಶೀಘ್ರದಲ್ಲಿ ಈ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಕಂದಾಯ ಸಚಿವರು ಭರವಸೆ ನೀಡಿದ್ದರೂ ಈ ಬಗ್ಗೆ ಯಾವುದೇ ಅಧಿಕೃತ ಆದೇಶ ಸರಕಾರದಿಂದ ಇದುವರೆಗೂ ಲಭ್ಯವಾಗಿಲ್ಲ. ಇದರಿಂದಾಗಿ ಜಿಲ್ಲೆಯ ಹಲವೆಡೆ ಶಾಲೆ, ಶ್ಮಶಾನ, ಕುಡಿಯುವ ನೀರು ಇರುವ ಕಡೆಗಳಲ್ಲಿ ಡೀಮ್ಡ್ ಫಾರೆಸ್ಟ್‌ ಎಂದು ಗುರುತಿಸಿರುವುದು ಗೊಂದಲಕ್ಕೆ ಎಡೆಮಾಡಿದೆ.

Advertisement

ಜಿಲ್ಲೆಯಲ್ಲಿ ನಮೂನೆ 50ರಲ್ಲಿ 80 ನಮೂನೆ 53ರಲ್ಲಿ 7754, 94 ಸಿಯಲ್ಲಿ 7299, 94 ಸಿಸಿಯಲ್ಲಿ 1532 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ರಾಜ್ಯದಲ್ಲಿ ಒಟ್ಟು 9 ಲಕ್ಷ ಹೆಕ್ಟೇರ್‌ ಡೀಮ್ಡ್ ಫಾರೆಸ್ಟ್‌ ವ್ಯಾಪ್ತಿಯಲ್ಲಿದೆ. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸಭೆ ನಡೆಸಿ 6 ಲಕ್ಷ ಹೆ. ಕಂದಾಯ ಇಲಾಖೆಗೆ ಮತ್ತು 3 ಲಕ್ಷ ಹೆ. ಅರಣ್ಯ ಇಲಾಖೆಗೆ ಹಂಚಿಕೆ ಮಾಡಲು ಈಗಾಗಲೇ ತೀರ್ಮಾನವಾಗಿದೆ. ಡೀಮ್ಡ್ ಫಾರೆಸ್ಟ್‌ ವಿರಹಿತಗೊಳಿಸಲು ಅಭ್ಯಂತರವಿಲ್ಲ ಎಂದು ಅರಣ್ಯ ಇಲಾಖೆ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದೆ. ಕಂದಾಯ ಇಲಾಖೆ ಕೂಡ ಇದು ನಮ್ಮದೇ ಭೂಮಿ ಎಂದು ಅಫಿಡವಿಟ್‌ ಸಲ್ಲಿಸಿದೆ.

ಶೀಘ್ರ ಆದೇಶ?
ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಪರಿಹಾರದ ಬಗ್ಗೆ ಸರಕಾರ ಎರಡೂ ಇಲಾಖೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಅಗತ್ಯವಿದೆ. ಈ ಬಗ್ಗೆ ಶೀಘ್ರದಲ್ಲಿ ಅಂತಿಮ ಆದೇಶ ಹೊರಡಿಸುವ ಸಾಧ್ಯತೆಗಳಿವೆ. ಈ ಆದೇಶ ಬಂದದ್ದೇ ಆದಲ್ಲಿ ಜಿಲ್ಲೆಯ 1 ಲಕ್ಷ ಎಕ್ರೆ ಭೂಮಿ ಡೀಮ್ಡ್ ಫಾರೆಸ್ಟ್‌ನಿಂದ ಕಂದಾಯ ಇಲಾಖೆ ವ್ಯಾಪ್ತಿಗೆ ಬರಲಿದೆ. ಅನಂತರ 94ಸಿ, 94 ಸಿಸಿ ಹಾಗೂ ನಮೂನೆ 50, 53ರಡಿ ಅರ್ಜಿ ಸಲ್ಲಿಸಿದ ಕೃಷಿಕರು, ಬಡ ಜನರಿಗೆ ಸಿಗಲಿದೆ.

ಸಮಸ್ಯೆ ಉದ್ಭವಿಸಿದ್ದು ಹೇಗೆ
ರಾಜ್ಯದಲ್ಲಿ ನಿಗದಿತ ಪ್ರಮಾಣದ ಅರಣ್ಯವಿರಬೇಕು ಎಂದು 1982ರಲ್ಲಿ ಕಂದಾಯ ಇಲಾಖೆಯ ಅಧೀನದಲ್ಲಿದ್ದ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲು ನಿರ್ಧರಿಸಲಾಯಿತು. ಇದರ ಆಧಾರದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಆರಂಭಿಸಿದರು. ಇದು ರಾಜ್ಯವ್ಯಾಪಿ ವಿವಾದ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲು ರಾಜ್ಯ ಸರಕಾರ ತೀರ್ಮಾನಿಸಿತು. ಸುಪ್ರೀಂ ಕೋರ್ಟ್‌ನ 1996ರ ಟಿಎನ್‌ ಗೋವರ್ಧನ್‌ ಪ್ರಕರಣದ ತೀರ್ಪಿನ ಮಾನದಂಡದಂತೆ ಇಂತಿಷ್ಟು ಪ್ರದೇಶದಲ್ಲಿ ಇಂತಿಷ್ಟು ಮರಗಳಿದ್ದರೆ ಮಾತ್ರ ಅದನ್ನು ಅರಣ್ಯ ಎಂಬಂತೆ ವರದಿ ಸಿದ್ಧಪಡಿಸಲಾಗಿದೆ. 2015ರಲ್ಲಿ ಅಂದಿನ ಸರಕಾರ ಈ ವರದಿಯನ್ನು ಸಂಪುಟದ ಅನುಮೋದನೆಗಾಗಿ ಮಂಡನೆ ಮಾಡಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ ಪ್ರಗತಿ ಕಾಣದೆ ಸಾಗುವಳಿದಾರರು ಸಮಸ್ಯೆ ಎದುರಿಸುವಂತಾಗಿದೆ.

ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕು
ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡಂ ತಿರುವ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಸಾಗುವಳಿದಾರರು ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಂಖ್ಯೆ 50, 53ಗಳ ಮೂಲಕ ಮಂಜೂರಾತಿಗೆ ಮನವಿ ಸಲ್ಲಿಸಿ ಕಾಯುವಂತಾಗಿದೆ.

Advertisement

ಹೊಸ ಆದೇಶದ ನಿರೀಕ್ಷೆ
ಡೀಮ್ಡ್ ಫಾರೆಸ್ಟ್‌ ವಿರಹಿತಗೊಳಿಸಲು ಅಭ್ಯಂತರವಿಲ್ಲ ಎಂದು ಅರಣ್ಯ ಇಲಾಖೆ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದೆ. ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯೊಂದಿಗೆ ಈ ಬಗ್ಗೆ ಸ್ಪಷ್ಟತೆ ನೀಡಿದ ಬಳಿಕ ಸರಕಾರ ಹೊಸ ಆದೇಶ ಹೊರಡಿಸಲಿದೆ.
-ಆಶೀಶ್‌ ರೆಡ್ಡಿ, ಡಿಎಫ್ಒ, ಕುಂದಾಪುರ

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next