Advertisement

ಡೆಡ್‌ಸ್ಟೋರೇಜ್‌ ಬಳಕೆ ಸದ್ಯಕ್ಕಿಲ್ಲ

11:11 AM Feb 24, 2017 | |

ಬೆಂಗಳೂರು: ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಸದ್ಯ 12.69 ಟಿಎಂಸಿ ನೀರು ಸಂಗ್ರಹವಿದ್ದು, ಸಮರ್ಪಕವಾಗಿ ಬಳಸಿದರೆ ಮೇ ತಿಂಗಳ ಮಧ್ಯದವರೆಗೆ ಬೆಂಗಳೂರಿಗೆ ಅಗತ್ಯ ಪ್ರಮಾಣದ ನೀರು ಪೂರೈಸಲು ಅವಕಾಶವಿದೆ. ಆದಾದ ನಂತರವೂ ಪರಿಸ್ಥಿತಿ ಬಿಗಡಾಯಿಸಿದರೆ ಡೆಡ್‌ ಸ್ಟೋರೇಜ್‌ ಬಳಕೆ ಬಗ್ಗೆ ಚಿಂತನೆ ನಡೆಸಲು ಕಾವೇರಿ ನೀರಾವರಿ ನಿಗಮ ನಿರ್ಧರಿಸಿದೆ.

Advertisement

ಕಾವೇರಿ ನೀರಾವರಿ ನಿಗಮದ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಡೆಡ್‌ಸ್ಟೋರೇಜ್‌ ಬಳಕೆ ಕುರಿತು ಮಾತುಕತೆ ನಡೆಸಿದರು. ಸದ್ಯ ಲಭ್ಯವಿರುವ ನೀರಿನಲ್ಲೇ ಪರಿಸ್ಥಿತಿ ನಿಭಾಯಿಸಲು ಅವಕಾಶವಿರುವ ಬಗ್ಗೆ ಸಭೆಯಲ್ಲಿ ಗಹನ ಚರ್ಚೆ ನಡೆಯಿತು.

ಒಂದೊಮ್ಮೆ ಡೆಡ್‌ಸ್ಟೋರೇಜ್‌ ಬಳಕೆ ಮಾಡುವುದಾದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಗಿದೆ. ಇದರ ಜತೆಗೆ, ನೀರಿನ ಮಿತಬಳಕೆ ಬಗ್ಗೆ ಜಾಗೃತಿ ಮೂಡಿಸಿ ಬಳಕೆ ಪ್ರಮಾಣದ ತಗ್ಗಿಸಿದರೆ ಪರಿಸ್ಥಿತಿ ನಿಭಾಯಿಸಬಹುದು ಎಂಬ ಅಭಿಪ್ರಾಯ ಅಧಿಕಾರಿಗಳು ಬಂದಿದ್ದು  ಈ ಬಗ್ಗೆ ಜಲಮಂಡಳಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.  

ಸಭೆ ಬಳಿಕ ಮಾತನಾಡಿದ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ (ಹೆಚ್ಚುವರಿ ಪ್ರಭಾರ) ಬಿ.ಶಿವಶಂಕರ್‌, “ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಸದ್ಯ 12.69 ಟಿಎಂಸಿ ನೀರಿದೆ. ಇದನ್ನೇ ಸಮರ್ಪಕವಾಗಿ ಬಳಸಿದರೆ ಮೇ ತಿಂಗಳ ಮಧ್ಯದವರೆಗೆ ಬೆಂಗಳೂರಿಗೆ ಅಗತ್ಯ ಪ್ರಮಾಣದ ನೀರು ಸಿಗಲಿದೆ. ಜತೆಗೆ ನೀರಿನ ಮಿತಬಳಕೆ ಬಗ್ಗೆ ಜಾಗೃತಿ ಮೂಡಿಸಲು ಜಲಮಂಡಳಿಗೂ ಸೂಚಿಸಲಾಗುವುದು,” ಎಂದು ಹೇಳಿದರು.

“ಸದ್ಯಕ್ಕೆ ಕೆಆರ್‌ಎಸ್‌ ಜಲಾಶಯದಲ್ಲಿನ ಡೆಡ್‌ ಸ್ಟೋರೇಜ್‌ ಬಳಕೆ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಅಗತ್ಯವಿರುವ ಕೆಲ ಮಾಹಿತಿ, ದಾಖಲೆ ಸಲ್ಲಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ತುರ್ತು ಪರಿಸ್ಥಿತಿ ನಿರ್ಮಾಣವಾದರೆ ಡೆಡ್‌ಸ್ಟೋರೇಜ್‌ ಬಳಕೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ” ಎಂದು ಹೇಳಿದರು.

Advertisement

ನೀರಿಗೆ ಕೊರತೆಯಾಗದಂತೆ ಮಾಡಲು ಜಲಮಂಡಳಿ ಕಾರ್ಯಪ್ರವೃತ್ತ 
ರಾಜಧಾನಿ ಜನತೆಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಮಾಡಲು ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಅವರು ಇತ್ತೀಚೆಗೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. “ಏಪ್ರಿಲ್‌ ನಂತರ ಪರಿಸ್ಥಿತಿ ನಿರ್ವಹಣೆಗೆ ಕೈಗೊಳ್ಳ­ ಪರ್ಯಾಯ ವ್ಯವಸ್ಥೆಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ,” ಎಂದು ಅಧಿಕಾರಿಗಳಿಗೆ ಸೂಷಸಿದ್ದಾರೆ.

“ನೀರಿನ ಮಿತ ಬಳಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಗತ್ಯವಿರುವಷ್ಟೇ ನೀರು ಬಳಸಬೇಕು, ಕೊಳವೆ ಬಾವಿ ಸಂಪರ್ಕವಿದ್ದರೆ ಅದನ್ನೇ ಬಳಸಿ ಕಾವೇರಿ ನೀರನ್ನು ಇತರರು ಬಳಸಲು ಸಹಕರಿಸಬೇಕು ಎಂದು ಜನರಲ್ಲಿ ಮನವಿ ಮಾಡಬೇಕು,” ಎಂದು ಅಧ್ಯಕ್ಷರು ಸೂಚನೆ ನೀಡಿದ್ದರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

“ಗಣಿ ಮತ್ತು ಭೂವಿಜ್ಞಾನ ಇಲಾಖೆ ವಿಜ್ಞಾನಿಗಳ ಸಹಯೋಗದಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿರುವ ಸ್ಥಳಗಳನ್ನು ಗುರುತಿಸಿ ಆ ಪ್ರದೇಶಗಳಲ್ಲಿ ತ್ವರಿತವಾಗಿ ಕೊಳವೆಬಾವಿ ಕೊರೆದು ಟ್ಯಾಂಕರ್‌ ಮೂಲಕ ನೀರು ವಿತರಣೆಗೆ ಕ್ರಮ ಕೈಗೊಳ್ಳಬೇಕು. 2007ರಲ್ಲಿ ಪಾಲಿಕೆಗೆ ಸೇರ್ಪಡೆ­ಯಾದ ಪ್ರದೇಶಗಳಲ್ಲಿದ್ದ  ಕಿರು ನೀರು ಯೋಜನೆಗಳನ್ನು ಪತ್ತೆ ಹಚ್ಚಿ ಸಾರ್ವಜನಿಕರ ಬಳಕೆಗೆ ಮೀಸಲಿಡಬೇಕು,” ಎಂದು ಅಧ್ಯಕ್ಷರು ಕಟ್ಟಪ್ಪಣೆ ಮಾಡಿದ್ದಾರೆ.  ಅದರಂತೆ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸಿ ಅಂತಿಮಗೊಂಡ ನಂತರ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕಾರ್ಯ ಶುರುವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next