ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿದ್ಯಾರ್ಥಿಗಳಲ್ಲಿ ಕಲಾ ವಿಭಾಗಕ್ಕೆ ಸೇರ್ಪಡೆ ಯಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿದೆ.
ಉಭಯ ಜಿಲ್ಲೆಯಲ್ಲಿ 10-15 ವರ್ಷಗಳ ಹಿಂದೆ ಶೇ. 40ರಷ್ಟು ವಿದ್ಯಾರ್ಥಿಗಳು ಕಲಾ ವಿಭಾಗಕ್ಕೆ ಸೇರ್ಪಡೆಯಾಗುತ್ತಿದ್ದರೆ ಸದ್ಯ ಶೇ. 15ರಿಂದ 20ರ ಗಡಿಯಲ್ಲಿದೆ. ಹೆಚ್ಚು ವಿದ್ಯಾರ್ಥಿಗಳು ವಿಜ್ಞಾನ, ವಾಣಿಜ್ಯ ವಿಭಾಗಗಳತ್ತ ಆಸಕ್ತಿ ಹೊಂದಿದ್ದಾರೆ.
ದ.ಕ.ದಲ್ಲಿ ಪ್ರತೀ ವರ್ಷ 40 ಸಾವಿರ ವಿದ್ಯಾರ್ಥಿಗಳು ಪಿಯುಸಿ ಪ್ರವೇಶ ಪಡೆಯುತ್ತಾರೆ. ಅವರಲ್ಲಿ ಸುಮಾರು 18 ಸಾವಿರ ಮಂದಿ ವಿಜ್ಞಾನ, 15 ಸಾವಿರ ಮಂದಿ ವಾಣಿಜ್ಯ ವಿಭಾಗಕ್ಕೆ ಪ್ರವೇಶ ಬಯಸುತ್ತಾರೆ. ಕೇವಲ 2,500ದಿಂದ 3 ಸಾವಿರದಷ್ಟು ಮಂದಿ ಮಾತ್ರ ಕಲಾ ಕ್ಷೇತ್ರದತ್ತ ಹೊರಳುತ್ತಾರೆ. ಉಳಿದವರು ಐಟಿಐ ಮತ್ತಿತರ ನೇರ ಉದ್ಯೋಗಾಧಾರಿತ ಕಲಿಕೆಗಳತ್ತ ದೃಷ್ಟಿ ಹರಿಸುತ್ತಾರೆ. ಕಳೆದ ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಇದೆ.
ರಾಜ್ಯದಲ್ಲಿ ಕಲಾ ವಿಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಿದ್ದರೂ ಕರಾವಳಿಯಲ್ಲಿ ಮಾತ್ರ ನಿರಾಸಕ್ತಿ ವ್ಯಕ್ತವಾಗುತ್ತಿರುವುದು ಶೈಕ್ಷಣಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮೆಡಿಕಲ್, ಎಂಜಿನಿಯರ್ ಮತ್ತಿತರ ವೃತ್ತಿಪರ ಕಲಿಕೆಗಳತ್ತ ಮಕ್ಕಳ ಒಲವಿನಿಂದ ಕಲಾ ವಿಭಾಗದಲ್ಲಿ ಮಕ್ಕಳ ಆಸಕ್ತಿ ಕುಸಿತಕ್ಕೆ ಕಾರಣ ಎಂಬುದು ಒಂದು ವಾದ. ಆದರೆ ಕಳೆದ ಸಾಲಿನಲ್ಲಿ ಎಸೆಸೆಲ್ಸಿಯಲ್ಲಿ ಎಲ್ಲರೂ ಉತ್ತೀರ್ಣಗೊಂಡ ಕಾರಣ ಕಲಾ ವಿಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೊಂಚ ಹೆಚ್ಚಿತ್ತು.
ವಿದ್ಯಾರ್ಥಿಗಳಿಗೆ ವಿಷಯ ಆಯ್ಕೆ ಬಗ್ಗೆ ಹೇರಿಕೆ ಅಸಾಧ್ಯ. ಬದಲಾಗಿ ಆಯ್ಕೆಗಳನ್ನು ಮನದಟ್ಟು ಮಾಡುವ ಪ್ರಯತ್ನವನ್ನು ಶಿಕ್ಷಕರು ಮಾಡಬಹುದು. ಕಲಾ ವಿಭಾಗದ ಸಾಧ್ಯತೆಗಳನ್ನು ತೆರೆದಿಡುವ ಪ್ರಯತ್ನ ನಡೆಯಬೇಕು. ಈ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ನಡೆಸಲಾಗುವುದು ಎಂದು ದ.ಕ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುಧಾಕರ್ ಕೆ. “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಕಲಾ ವಿಭಾಗದಲ್ಲಿ ಕಾನೂನು, ಪತ್ರಿಕೋದ್ಯಮ, ಬಿಎಡ್, ಲಲಿತ ಕಲೆ, ಫೈನ್ ಆರ್ಟ್ ಸೇರಿದಂತೆ ನಾನಾ ಅವಕಾಶಗಳಿವೆ. ಕೇಂದ್ರ ಲೋಕಸೇವಾ ಆಯೋಗ, ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಸಾವಿರಾರು ಬಗೆಯ ಉದ್ಯೋಗ ಸಾಧ್ಯತೆಯೂ ಇದೆ. ಈ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಚಂದ್ರನಾಥ ಎಂ. ಹೇಳುತ್ತಾರೆ.
ಕಲಾ ವಿಭಾಗಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುತ್ತಿದೆ. ಕಲಾ ವಿಭಾಗದ ಮೂಲಕ ಭವಿಷ್ಯದಲ್ಲಿ ಸಿಗಬಹುದಾದ ಅವಕಾಶಗಳ ಬಗ್ಗೆ ಪುಸ್ತಕ ರಚಿಸಿ ವಿದ್ಯಾರ್ಥಿಗಳಿಗೆ ನೀಡಲಾಗುವುದು. ಯಾವುದೇ ವಿಭಾಗಕ್ಕೆ ಸೇರ್ಪಡೆ ಆಯಾ ವಿದ್ಯಾರ್ಥಿಯ ಆಯ್ಕೆ. ಪೂರಕ ವ್ಯವಸ್ಥೆಗಳನ್ನು ಇಲಾಖೆ ಕಡೆಯಿಂದ ನೀಡಲಾಗುವುದು.
– ಸಿ.ಡಿ. ಜಯಣ್ಣ / ಮಾರುತಿ,
ಉಪನಿರ್ದೇಶಕರು, ದ.ಕ. ಮತ್ತು ಉಡುಪಿ ಪದವಿಪೂರ್ವ ಶಿಕ್ಷಣ ಇಲಾಖೆ