ಕೊಪ್ಪಳ: ಸ್ವಚ್ಛವಾಗಿರಿ ಎಂದೆನ್ನುತ್ತಿದ್ದ ವೈದ್ಯರ ಮಾತಿಗೆ ಸೊಪ್ಪು ಹಾಕದ ಜನತೆಯೀಗ ತಾವಾಗಿಯೇ ಮುಖಕ್ಕೆ ಮಾಸ್ಕ್ ಧರಿಸುತ್ತಿದ್ದಾರೆ. ಕೈಗಳಿಗೆ ಪದೇ ಪದೆ ಸ್ಯಾನಿಟೈಜರ್ ಬಳಕೆ ಮಾಡುತ್ತಿದ್ದಾರೆ. ಇದರಿಂದ ಕಳೆದ ಎರಡು ತಿಂಗಳಲ್ಲಿ ಜನರಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವುದು ಕಡಿಮೆಯಾಗುತ್ತಿದೆ ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದು ಅಕ್ಷರಶಃ ಸತ್ಯ. ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ| ಎಸ್.ಬಿ.ದಾನರಡ್ಡಿ ಅವರು ಜನತೆಯಲ್ಲಿ ಸಾಂಕ್ರಾಮಿಕ ರೋಗಗಳು ಇಳಿಮುಖ ಆಗಿರುವ ತಮ್ಮದೇ ವೈದ್ಯಕೀಯ ವಿಧಾನದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮೊದಲೆಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ತೆರಳುತ್ತಿದ್ದ ರೋಗಿಗಳಿಗೆ ನೀವು ಶುಚಿಯಾಗಿ ಇರಬೇಕು. ಕೈ ಕಾಲು ಚೆನ್ನಾಗಿ ಸೋಪಿನಿಂದ ತೊಳೆದುಕೊಂಡು ಊಟ ಮಾಡಬೇಕು. ಶೌಚಾಲಯಕ್ಕೆ ಹೋಗಿ ಬಂದ ಬಳಿಕ ಕೈಗಳನ್ನು ಸೋಪಿನಿಂದ ತೊಳೆಯಬೇಕು. ಶುದ್ಧ ನೀರು ಕುಡಿಯಬೇಕು. ಪೌಷ್ಠಿಕ ಆಹಾರ ಸೇವನೆ ಮಾಡಬೇಕು ಎಂದೆಲ್ಲ ಹೇಳುತ್ತಿದ್ದರೆ, ಜನತೆ ಕೆಲವೊಂದನ್ನು ಪಾಲಿಸುತ್ತಿದ್ದರು ಮತ್ತೆ ಕೆಲವೊಂದಿಷ್ಟನ್ನು ನಿರ್ಲಕ್ಷ್ಯ ಮಾಡುತ್ತಿದ್ದರು. ಆದರೆ ಪ್ರಸ್ತುತ ದೇಶದಲ್ಲಿ ಕೋವಿಡ್ ಉಲ್ಬಣದಿಂದ ಜನರಲ್ಲಿ ಕೋವಿಡ್ ಸೋಂಕಿನ ಭಯವೂ ಇದೆ. ತಮಗೆ ಸೋಂಕು ಬಾರದಂತೆ ಎಚ್ಚರಿಕೆ ವಹಿಸಿದ್ದು, ಮನೆಯಿಂದ ಹೊರಗೆ ತೆರಳುವ ಮುನ್ನ ಮಾಸ್ಕ್ ಧರಿಸಿ ಹೊರಡುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ.
ಜನರಲ್ಲೂ ಕ್ರಮೇಣ ಜಾಗೃತಿ ಮೂಡಲಾರಂಭಿಸಿದೆ. ಜಿಲ್ಲೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸುತ್ತಾಟ ನಡೆಸುವ ಜನತೆ ಮೊದಲೆಲ್ಲ ಪೊಲೀಸರ ಭಯಕ್ಕೆ ಮಾಸ್ಕ್ ಧರಿಸುತ್ತಿದ್ದರು. ಈಗ ತಾವಾಗಿಯೇ ಮಾಸ್ಕ್ ಧರಿಸಿ ಎಚ್ಚರಗೊಳ್ಳುತ್ತಿದ್ದಾರೆ. ಜನರಲ್ಲಿ ಮಾಸ್ಕ್ ಅಂದರೆ ಏನು ? ಹೇಗೆ ಧರಿಸಬೇಕು ? ಇದನ್ನು ಧರಿಸಿದರೆ ನಮಗೇನು ಪ್ರಯೋಜನ ಎನ್ನುವ ತಿಳುವಳಿಕೆಯೂ ಮಾಡಲಾರಂಭಿಸುತ್ತಿದೆ. 10 ಜನರಲ್ಲಿ ಕನಿಷ್ಟ 5 ಜನರಾದರೂ ಈಗ ಮಾಸ್ಕ್ ಧರಿಸಿ ಸುತ್ತಾಟ ನಡೆಸುತ್ತಿರುವುದು ಕಾಣುತ್ತಿದೆ.
ಮಾಸ್ಕ್-ಸ್ವಚ್ಛತೆಯಿಂದ ರೋಗ ಇಳಿಮುಖ: ಸಾಮಾನ್ಯವಾಗಿ ಜನರಿಗೆ ಸಾಂಕ್ರಾಮಿಕ ರೋಗಗಳು ಕೈ, ಬಾಯಿ, ಮೂಗಿನ ಮೂಲಕ ಮನುಷ್ಯನಿಗೆ ಹರಡುತ್ತವೆ. ಪ್ರಸ್ತುತ ಹಲವು ಜನರು ಮಾಸ್ಕ್ ಧರಿಸಿ ಸಂಚರಿಸುತ್ತಿದ್ದರಿಂದ ವೈರಸ್‌ಗಳು ಅಷ್ಟು ಬೇಗವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದು ತುಂಬಾ ಕಡಿಮೆ. ಸೋಂಕಿತ ವ್ಯಕ್ತಿ ಮಾಸ್ಕ್ ಧರಿಸಿ ಕೆಮ್ಮಿದಾಗ, ಸೀನಿದಾಗ ವೈರಸ್‌ಗಳು ಮಾಸ್ಕ್ನಲ್ಲೇ ಉಳಿಯುತ್ತವೆ. ಗಾಳಿಯಲ್ಲಿ ಅವು ಸೇರುವುದಿಲ್ಲ. ಈಗ ಕೋವಿಡ್ ಜನರಿಗೆ ಒಂದು ರೀತಿ ಪಾಠವನ್ನೆ ಕಲಿಸಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆ ಮಾಡಿದೆ. ಜನರಲ್ಲಿನ ಸಣ್ಣಪುಟ್ಟ ರೋಗಗಳು ಕಾಣಿಸಿಕೊಳ್ಳುವಿಕೆ ಕಡಿಮೆಯಾಗಿವೆ ಎನ್ನುತ್ತಾರೆ ವೈದ್ಯರು.
ಜನರು ಜಾತ್ರೆ, ಯಾತ್ರೆ, ಪ್ರವಾಸದ ಸಂದರ್ಭದಲ್ಲಿ ಹೆಚ್ಚು ಜನದಟ್ಟಣೆ ಇರುವ ಸ್ಥಳದಲ್ಲಿ ತೊಡಗಿಕೊಂಡಿದ್ದಾಗ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಳ್ಳುತ್ತಿದ್ದವು. ಏಕೆಂದರೆ ಅಲ್ಲಿ ಒಬ್ಬರ ಉಸಿರಾಟ ಇನ್ನೊಬ್ಬರಿಗೆ ತಾಗಿರುತ್ತದೆ. ಇದರಿಂದ ವೈರಸ್ ಜನರ ಕೈ, ಬಾಯಿ ಮೂಲಕ ದೇಹ ಸೇರಿರುತ್ತವೆ. ಈಗ ಪರಿಸ್ಥಿತಿ ಹಾಗಿಲ್ಲ. ಜನರಲ್ಲಿ ಕೊರೊನಾದಿಂದ ಜಾಗೃತಿ ಬರುತ್ತಿದೆ. ನಾವು ಹೇಳುವ ಮೊದಲೇ ತಾವಾಗಿಯೇ ಮಾಸ್ಕ್ ಧರಿಸುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಎಲ್ಲರೂ ಧರಿಸುತ್ತಿದ್ದಾರೆ ಎಂದಲ್ಲ. ಅರ್ಧದಷ್ಟು ಜನ ಧರಿಸುತ್ತಿದ್ದು, ಸಾಮಾಜಿಕ ಅಂತರವನ್ನು ಕಾಪಾಡುತ್ತಿದ್ದಾರೆ.
ಇನ್ನೂ ಕೋವಿಡ್ ಸೋಂಕಿನ ಬಗ್ಗೆ ಜನರಲ್ಲಿ ನಿರ್ಲಕ್ಷ್ಯ ಭೇಡ, ಸಾಮಾನ್ಯ ಜನತೆ ತ್ರಿಪಲ್ ಲೇಯರ್ ಮಾಸ್ಕ್ ಧರಿಸಿದರೆ ಸಾಕು. ಅಥವಾ ಬಟ್ಟೆಯಿಂದ ಸಿದ್ದಪಡಿಸಿದ ಮಾಸ್ಕ್ ಅನ್ನು ನಿತ್ಯ ತೊಳೆದುಕೊಂಡು ಧರಿಸಿದರೆ ಸಾಕು, ಮೂಗು, ಬಾಯಿ ಮೂಲಕ ಧೂಳಿನ ಕಣಗಳು ದೇಹ ಸೇರುವುದಿಲ್ಲ. ಇದರಿಂದ ಆರೋಗ್ಯ ಚೆನ್ನಾಗಿ ಇರುತ್ತದೆ. ಇನ್ನೂ ಪೌಷ್ಠಿಕ ಆಹಾರ, ತಪ್ಪಲು ಪಲ್ಯ ಹೆಚ್ಚು ಸೇವನೆ ಮಾಡುವುದರಿಂದ ಆರೋಗ್ಯ ಸದೃಢವಾಗಿರುತ್ತದೆ ಎನ್ನುತ್ತಿದ್ದಾರೆ ವೈದ್ಯರು.
ಕೋವಿಡ್ ವೇಳೆ ಜನರು ಮಾಸ್ಕ್ ಧರಿಸುವುದು. ಕೈಗಳನ್ನು ಸ್ಯಾನಿಟೈಜರ್‌ನಿಂದ ತೊಳೆಯುವುದು.ಸಾಮಾಜಿಕ ಅಂತರ ಕಾಪಾಡುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳಾದ ಕೆಮ್ಮು, ನೆಗಡಿ, ಜ್ವರದ ಪ್ರಮಾಣ ಕಡಿಮೆಯಾಗುತ್ತಿವೆ. ನಮ್ಮ ಆಸ್ಪತ್ರೆಗೆ ಅಂತಹ ರೋಗಿಗಳು ಬರುವುದು ಕಡಿಮೆಯಾಗಿದೆ. ಆದರೂ ಜನರಲ್ಲಿ ಇನ್ನೂ ಜಾಗೃತಿ ಬರಬೇಕಿದೆ. ಜನತೆ ಮಾಸ್ಕ್, ಕೈ ತೊಳೆಯುವುದು, ಸಾಮಾಜಿಕ ಅಂತರ ಈ ಮೂರು ಸೂತ್ರ ಪಾಲಿಸಿದರೆ ಸೋಂಕು –
ಕಾಣಿಸುವುದಿಲ್ಲ ಡಾ| ಎಸ್.ಬಿ.ದಾನರಡ್ಡಿ, ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ