ರಾಯಚೂರು: ಪ್ರತಿ ವರ್ಷ ನಿರೀಕ್ಷಿತ ಗುರಿ ಮೀರಿ ಆದಾಯ ಸಂಗ್ರಹಿಸುತ್ತಿದ್ದ ಪ್ರಾದೇಶಿಕ ಸಾರಿಗೆ ಕಚೇರಿಗೆ ಈ ಬಾರಿ ಕೋವಿಡ್ ಲಾಕ್‌ಡೌನ್ ಪರಿಣಾಮ ಜೋರಾಗಿದೆ. ಪ್ರಸಕ್ತ ವರ್ಷದ ನಾಲ್ಕು ತಿಂಗಳಲ್ಲಿ ಶೇ.40 ಆದಾಯಕ್ಕೆ ಕೊಕ್ಕೆ ಬಿದ್ದಿದ್ದು, ಇಂದಿಗೂ ಚೇತರಿಕೆ ಕಾಣಿಸುತ್ತಿಲ್ಲ.
ಲಾಕ್‌ಡೌನ್ ಪರಿಣಾಮ ಅಟೋಮೊಬೈಲ್ ಕ್ಷೇತ್ರದ ಮೇಲೂ ಭಾರೀ ಪರಿಣಾಮ ಬೀರಿದೆ. ಜನರಿಗೆ ಆದಾಯವೇ ನಿಂತು ಹೋದ ಪರಿಣಾಮ ಹೊಸ ವಾಹನಗಳ ಖರೀದಿಯಂತೂ ದೂರದ ಮಾತಾಗಿದೆ. ಇನ್ನೂ ಸುಮಾರು ಎರಡು ತಿಂಗಳು ಕಾಲ ಎಲ್ಲ ರೀತಿಯ ಕೆಲಸ ಕಾರ್ಯಗಳು ನಿಂತು ಹೋಗಿದ್ದರಿಂದ ಭಾರೀ ವಾಹನಗಳ ಖರೀದಿ ಕೂಡ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಇದರಿಂದ ವಾಹನ ನೋಂದಣಿಯಲ್ಲೂ ಭಾರೀ ಪ್ರಮಾಣದ ಕುಸಿತ ಕಂಡಿದೆ.
ಸಾಕಷ್ಟು ಹಿನ್ನಡೆ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೋಂದಣಿಯಲ್ಲಿ ಸಾಕಷ್ಟು ಹಿನ್ನಡೆ ಕಂಡು ಬಂದಿದೆ. 2019-20ನೇ ಸಾಲಿನಲ್ಲಿ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಇಲಾಖೆಗೆ ಮಾಸಿಕ 5.58 ಕೋಟಿ ರೂ. ಗುರಿ ಇದ್ದರೆ, 2019ನೇ ಸಾಲಿನ ಏಪ್ರಿಲ್‌ನಲ್ಲಿ ಶೇ.81.74ರಷ್ಟು, ಮೇ ತಿಂಗಳಲ್ಲಿ ಶೇ.90.34ರಷ್ಟು, ಜೂನ್‌ನಲ್ಲಿ ಶೇ.97.17ರಷ್ಟು, ಜುಲೈನಲ್ಲಿ ಶೇ.92.99ರಷ್ಟು ಗುರಿ ಸಾಧಿಸಲಾಗಿತ್ತು. ಒಟ್ಟಾರೆ ಶೇ.90ರಷ್ಟು ಗುರಿ ಸಾಧಿಸಲಾಗಿತ್ತು. ಆದರೆ, 2020ರ ಏಪ್ರಿಲ್‌ನಲ್ಲಿ ಕೇವಲ ಶೇ.18.10ರಷ್ಟು, ಮೇನಲ್ಲಿ ಶೇ.47.39ರಷ್ಟು, ಜೂನ್‌ನಲ್ಲಿ ಶೇ.85.45ರಷ್ಟು, ಜುಲೈನಲ್ಲಿ ಶೇ.89.14ರಷ್ಟು ಗುರಿ ಸಾ ಧಿಸಲಾಗಿದೆ. ಒಟ್ಟಾರೆ ಶೇ.60ರಷ್ಟು ಮಾತ್ರ ಗುರಿ ಸಾಧನೆ ಆಗಿದೆ. ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪ್ರತಿ ವರ್ಷ ತಿಂಗಳಿಗೆ 2-3 ಸಾವಿರ ಹೊಸ ವಾಹನಗಳು ನೋಂದಣಿಯಾಗುತ್ತಿದ್ದವು. ಈ ವರ್ಷ ಮಾತ್ರ ಏಪ್ರಿಲ್-ಜುಲೈವರೆಗೆ ನಾಲ್ಕು ತಿಂಗಳಲ್ಲಿ ಕೇವಲ 4,007 ಬೈಕ್, 240 ಕಾರ್, 337 ಟ್ರ್ಯಾಕ್ಟರ್ ಗಳು ಮಾತ್ರ ನೋಂದಣಿಯಾಗಿವೆ. ಇನ್ನು ಭಾರೀ ವಾಹನಗಳಾದ ಲಾರಿ, ಟಿಪ್ಪರ್‌ಗಳು ಬೆರಳೆಣಿಯಷ್ಟು ಮಾತ್ರ ನೋಂದಣಿಯಾಗಿವೆ.
ಖರೀದಿಗೆ ಹಿಂದೇಟು: ಕಳೆದ ಆರು ತಿಂಗಳಿಂದ ಜನರಿಗೆ ಕೆಲಸವಿಲ್ಲದೇ, ಉತ್ತಮ ಆದಾಯವಿಲ್ಲದೇ ಜೀವನ ನಿರ್ವಹಣೆಯೇ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಹೊಸ ವಾಹನಗಳ ಖರೀದಿಗೆ ಜನ ಹಿಂದೇಟು ಹಾಕುತ್ತಿದ್ದಾರೆ. ಅದರ ಬದಲಿಗೆ ಹಳೇ ವಾಹನಗಳನ್ನೇ ಸಾವಿರಾರು ರೂ. ಖರ್ಚು ಮಾಡಿ ದುರಸ್ತಿ ಮಾಡಿಸಿಕೊಳ್ಳುತ್ತಿದ್ದಾರೆ. ಕೃಷಿ ಚಟುವಟಿಕೆ ಶುರುವಾಗಿದ್ದರಿಂದ ರೈತಾಪಿ ವರ್ಗದ ಜನ ಹಳೇ ವಾಹನಗಳನ್ನೇ ಹೆಚ್ಚು ದುರಸ್ತಿ ಮಾಡಿಸಿಕೊಳ್ಳುತ್ತಿದ್ದಾರೆ. ಹೊಸ ಬೈಕ್ ಖರೀದಿಸಲು 80 ಸಾವಿರ ರೂ.ದಿಂದ ಒಂದು ಲಕ್ಷ ರೂ. ಬೇಕು. ಅದರ ಬದಲಿಗೆ ಹಳೇ ಬೈಕ್‌ಗಳನ್ನೇ ದುರಸ್ತಿ ಮಾಡಿಕೊಳ್ಳುವುದು ಸೂಕ್ತ ಎನ್ನುತ್ತಾರೆ ಅಟೊಮೊಬೈಲ್ಸ್ ವ್ಯಾಪಾರಿ ವಿಜಯ್.
ಲಾಕ್‌ಡೌನ್‌ನಿಂದಾಗಿ ಅಟೋಮೊಬೈಲ್ ವಲಯ ತುಂಬ ದುರ್ಬಲಗೊಂಡಿದೆ. ಹೀಗಾಗಿ ವಾಹನ ನೋಂದಣಿಯಲ್ಲಿ ಶೇ.40ರಷ್ಟು ಹಿನ್ನಡೆಯಾಗಿದೆ. ಪ್ರತಿ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸಾಕಷ್ಟು ಹಿಂದುಳಿದಿದ್ದೇವೆ. ಕಳೆದ ತಿಂಗಳಿನಿಂದ ತುಸು ಚೇತರಿಕೆ ಕಂಡು ಬರುತ್ತಿದೆ. ಬಹುಶಃ ಮುಂಬರುವ ದಿನಗಳಲ್ಲಿ ಆದಾಯ ಹೆಚ್ಚಾಗಬಹುದು.
-ಜಿ.ಪಿ. ವಿಶಾಲ್, ಪ್ರಾದೇಶಿಕ ಸಾರಿಗೆ ಅಧಿಕಾರಿ, ರಾಯಚೂರು