Advertisement

ಕಲಾ ವಿಭಾಗದ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ

11:25 PM Jul 17, 2019 | Lakshmi GovindaRaj |

ಬೆಂಗಳೂರು: ಕನ್ನಡ, ಇಂಗ್ಲಿಷ್‌, ರಾಜ್ಯಶಾಸ್ತ್ರ , ಅರ್ಥಶಾಸ್ತ್ರ ಐಚ್ಛಿಕ ವಿಷಯ ಸಹಿತವಾಗಿ ಕಲಾ ವಿಭಾಗದಲ್ಲಿ ಪದವಿ ಪೂರೈಸಿದರೆ ಉದ್ಯೋಗ ಪಡೆಯುವುದು ಕಷ್ಟ ಎಂಬ ಭೀತಿದಿಂದ ರಾಜ್ಯದ ವಿದ್ಯಾರ್ಥಿಗಳು ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದೆಡೆಗೆ ಹೆಚ್ಚು ಆಸ್ತಕರಾಗಿದ್ದಾರೆ. ರಾಜ್ಯದಲ್ಲಿ 415 ಸರ್ಕಾರಿ ಹಾಗೂ 325 ಖಾಸಗಿ ಅನುದಾನ ಪದವಿ ಕಾಲೇಜುಗಳಿವೆ.

Advertisement

ಸರ್ಕಾರಿ ಪದವಿ ಕಾಲೇಜುಗಳಲ್ಲಿ 398 ಕಡೆಗಳಲ್ಲಿ ಬಿ.ಎ, 376 ಕಡೆಗಳಲ್ಲಿ ಬಿ.ಕಾಂ, 295 ಕಡೆಗಳಲ್ಲಿ ಬಿಬಿಎಂ, 269 ಕಡೆಗಳಲ್ಲಿ ಬಿಎಸ್ಸಿ ಹಾಗೂ 27 ಕಾಲೇಜುಗಳಲ್ಲಿ ಬಿಸಿಎ ಕೋರ್ಸ್‌ಗಳು ಕಳೆದ ವರ್ಷ ಇದ್ದವು. ಈ ಬಾರಿ ಕಲಾ ವಿಭಾಗ ಹೊಂದಿರುವ ಕಾಲೇಜುಗಳ ಸಂಖ್ಯೆ ಕಡಿಮೆಯಾಗಿದೆ. ವಾಣಿಜ್ಯ ವಿಭಾಗ ಹೊಂದಿರುವ ಕಾಲೇಜುಗಳ ಸಂಖ್ಯೆ ಹೆಚ್ಚಾಗಿದೆ. ಎಷ್ಟು ಕಾಲೇಜುಗಳಲ್ಲಿ ಹೊಸದಾಗಿ ವಾಣಿಜ್ಯ ವಿಭಾಗ ತೆರೆಯಲಾಗಿದೆ ಎಂಬುದರ ಮಾಹಿತಿ ಕಲೆಹಾಕುತ್ತಿದ್ದೇವೆಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

2018-19ನೇ ಸಾಲಿಗೆ ರಾಜ್ಯದ ಎಲ್ಲ ಪದವಿ ಕಾಲೇಜಿನಲ್ಲಿ 3.10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದರು. ಈ ವರ್ಷದ ದಾಖಲಾತಿ 3.25ಲಕ್ಷಕ್ಕೂ ಹೆಚ್ಚಾಗುವ ಸಾಧ್ಯತೆಯಿದೆ. ಇದರಲ್ಲಿ ಸುಮಾರು 1.75 ಲಕ್ಷದಷ್ಟು ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಲ್ಲಿದ್ದಾರೆ. ಉಳಿದಂತೆ ವಿಜ್ಞಾನ ವಿಭಾಗದಲ್ಲಿ ಸುಮಾರು 1 ಲಕ್ಷದಷ್ಟು ವಿದ್ಯಾರ್ಥಿಗಳಿದ್ದಾರೆ. ಕಲಾ ವಿಭಾಗದಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ವಿವರ ನೀಡಿದರು.

ಕಲಾ ವಿಭಾಗದಲ್ಲಿ ಕೆಲವೊಂದು ಕಾಂಬಿನೇಷನ್‌ಗೆ ಬೇಡಿಕೆ ಚೆನ್ನಾಗಿದೆ. ಕೆಲವೊಂದು ಕಾಂಬಿನೇಷನ್‌ಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಸ್ಥಿತಿಗೆ ತಲುಪಿದೆ. ಕಲಾ ವಿಭಾಗದಲ್ಲಿ ಪದವಿ ಪೂರೈಸಿದರೆ ಉದ್ಯೋಗ ಸಿಗುವುದಿಲ್ಲ ಎಂಬ ಭೀತಿ ವಿದ್ಯಾರ್ಥಿಗಳಲ್ಲಿ ಹಾಗೂ ಅವರ ಪಾಲಕ, ಪೋಷಕರಲ್ಲಿ ಹೆಚ್ಚಾಗಿದೆ. ಅಲ್ಲದೆ, ಕಲಾ ವಿಭಾಗದಲ್ಲಿ ಪದವಿ ಪಡೆದ ನಂತರ ಸ್ನಾತಕೋತ್ತರ ಪದವಿ ಪಡೆಯುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹೀಗಾಗಿ ಕಲಾ ವಿಭಾಗದ ಕೆಲವೊಂದು ಕೋರ್ಸ್‌ಗಳಲ್ಲಿ ಕನಿಷ್ಠ 15 ವಿದ್ಯಾರ್ಥಿಗಳು ದಾಖಲಾಗುವುದಿಲ್ಲ. ಅನಿವಾರ್ಯವಾಗಿ ಬೇರೆ ಕೋರ್ಸ್‌ ಸೇರಿಕೊಳ್ಳುವಂತೆ ನಾವೇ ಹೇಳಬೇಕಾದ ಸ್ಥಿತಿಯಿದೆ ಎಂದು ಸರ್ಕಾರಿ ಕಾಲೇಜಿನ ಪ್ರಾಂಶುಪಾಲರೊಬ್ಬರು ಮಾಹಿತಿ ನೀಡಿದರು.

ವಾಣಿಜ್ಯ, ವಿಜ್ಞಾನದಲ್ಲಿ ಅವಕಾಶ ಹೆಚ್ಚು: ಕಲಾ ವಿಭಾಗದಲ್ಲಿ ಭಾಷಾ ವಿಷಯ ಸಹಿತವಾಗಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಸಹಿತವಾಗಿ ಕೆಲವು ವಿಷಯಗಳನ್ನು ಐಚ್ಛಿಕವಾಗಿ ಪಡೆದು, ಅದರಲ್ಲೇ ಉದ್ಯೋಗ ಹುಡುಕಿಕೊಳ್ಳಬೇಕು. ಆದರೆ, ವಾಣಿಜ್ಯ ವಿಭಾಗದಲ್ಲಿ ಬಿಕಾಂ, ಬಿಬಿಎಂ, ಬಿಬಿಎ ಮೊದಲಾದ ಆಯ್ಕೆಗಳಿವೆ. ಅಲ್ಲದೆ, ಇಂದಿನ ಅಗತ್ಯಕ್ಕೆ ತಕ್ಕಂತೆ ಕೌಶಲಾಧಾರಿತ ಪಠ್ಯಕ್ರಮಗಳನ್ನು ಇದರಲ್ಲಿ ಅಳವಡಿಸಲಾಗಿದೆ.

Advertisement

ಕ್ಯಾಂಪಸ್‌ ಸಂದರ್ಶನದಲ್ಲೇ ವಿದ್ಯಾರ್ಥಿಗಳು ಉದ್ಯೋಗ ಪಡೆಯಬಹುದಾದ ಅವಕಾಶವಿದೆ. ವಿಜ್ಞಾನ ವಿಭಾಗದಲ್ಲೂ ಆಯ್ಕೆಗಳು ಹೆಚ್ಚಿವೆ. ಕೈಗಾರಿಕೆಗಳು, ದೇಶಿ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳು ಕೂಡ ವಾಣಿಜ್ಯ ಹಾಗೂ ವಿಜ್ಞಾನದ ಪದವಿಗೆ ಹೆಚ್ಚಿನ ಮಾನ್ಯತೆ ನೀಡುತ್ತಿವೆ. ಕಲಾ ವಿಭಾಗದಲ್ಲಿ ಪದವಿ ಪಡೆದವರಿಗೆ ಉದ್ಯೋಗಾವಕಾಶದ ಆಯ್ಕೆ ಕಡಿಮೆ ಇರುತ್ತದೆ. ಹೀಗಾಗಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದೆಡೆಗೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತರಾಗಿದ್ದಾರೆಂದು ತಜ್ಞರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ಆನ್‌ಲೈನ್‌ ದಾಖಲಾತಿ: ಕಾಲೇಜು ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿನಿಂದ ಪದವಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಆರಂಭಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ವಿದ್ಯಾರ್ಥಿಗಳು ನೇರವಾಗಿ ಕಾಲೇಜಿನಲ್ಲಿಯೂ ಅರ್ಜಿ ಸಲ್ಲಿಸಬಹುದಾದ ವ್ಯವಸ್ಥೆಯನ್ನು ಮಾಡಿದೆ. ನೇರವಾಗಿ ಕಾಲೇಜಿಗೆ ಬಂದಿರುವ ಅರ್ಜಿಗಳನ್ನು ಆ ಕಾಲೇಜಿನ ಆಡಳಿತ ಮಂಡಳಿ ಆನ್‌ಲೈನ್‌ಗೆ ಅಪ್‌ಲೋಡ್‌ ಮಾಡುತ್ತಾರೆ. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫ‌ಲಿತಾಂಶ ಕೂಡ ಹೊರಬಿದ್ದಿದ್ದರಿಂದ ಬಹುತೇಕ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳು ಆನ್‌ಲೈನ್‌ ಮೂಲಕ ಮಾಹಿತಿ ಪಡೆಯುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ರಾಜ್ಯದ ಸರ್ಕಾರಿ ಪದವಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗಕ್ಕೆ ಹೆಚ್ಚಿನ ಬೇಡಿಕೆಯಿದೆ.ನಂತರ ವಿಜ್ಞಾನ ವಿಭಾಗಕ್ಕೆ ವಿದ್ಯಾರ್ಥಿಗಳು ಸೇರಿಕೊಳ್ಳುತ್ತಿದ್ದಾರೆ. ಕಲಾ ವಿಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.
-ಪ್ರೊ.ಎಸ್‌.ಮಲ್ಲೇಶ್ವರಪ್ಪ, ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next