Advertisement

ಕೋವಿಡ್ ಸೋಂಕು ಪ್ರಕರಣ ಇಳಿಮುಖ

11:29 AM Jun 05, 2021 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಪಾಸಿಟಿವಿಟಿ ರೇಟ್‌ ಇಳಿಮುಖವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್‌ ಬೆಡ್‌ಮ್ಯಾನೇಜ್‌ ಮೆಂಟ್‌ ವೆಬ್‌ಸೈಟ್‌ ಮತ್ತು ಇತ್ತೀಚೆಗೆ ನಗರದ ಜಿ.ಪಂ ಸಮೀಪ ಅಪಘಾತದಲ್ಲಿ ಗಾಯಗೊಂಡ ಬೈಕ್‌ ಸವಾರರನ್ನು ರಕ್ಷಣೆ ಮಾಡಿದ ಅಗ್ನಿಶಾಮಕದಳದ ಸಿಬ್ಬಂದಿಯನ್ನು ಸನ್ಮಾನಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮೇ 1ರಿಂದ ಮೇ 7ರ ವರೆಗೆ 544 ಇದ್ದ ಪಾಸಿಟಿವ್‌ ಪ್ರಕರಣ ಮೇ 8ರಿಂದ ಮೇ 14ರ ವರೆಗೆ 538, ಮೇ 15ರಿಂದ ಮೇ 21ರ ವರೆಗೆ 836, ಮೇ 22ರಿಂದ ಮೇ 28ರ ವರೆಗೆ 645 ಹಾಗೂ ಮೇ 29ರಿಂದ ಇತ್ತೀಚೆಗೆ 552 ಪಾಸಿಟಿವ್‌ ಪ್ರಕರಣಗಳು ಕಂಡು ಬಂದಿವೆ. ಈ ಅಂಕಿ ಅಂಶ ಗಮನಿಸಿದಾಗ ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವಿಟಿ ರೇಟ್‌ ನಿಧಾನವಾಗಿ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.

ನರಸಿಂಹರಾಜಪುರ ತಾಲೂಕಿನಲ್ಲಿ ಶೇ.30, ಕೊಪ್ಪ ಮತ್ತು ಕಡೂರು ಶೇ.25ರಿಂದ 30, ಶೃಂಗೇರಿ ಶೇ.20ರಿಂದ 25, ತರೀಕೆರೆ ಮತ್ತು ಚಿಕ್ಕಮಗಳೂರು ಶೇ.15ರಂದ 20, ಮೂಡಿಗೆರೆ ಶೇ.5ರಿಂದ 10ಕ್ಕೆ ಇಳಿಕೆ ಕಂಡಿದೆ ಎಂದರು.

ಚಿಕ್ಕಮಗಳೂರು ತಾಲೂಕಿನ 2 ಗ್ರಾ.ಪಂ., ಕಡೂರು 1 ಗ್ರಾ.ಪಂ., ನರಸಿಂಹರಾಜಪುರ 2 ಗ್ರಾ.ಪಂ ಹಾಗೂ ತರೀಕೆರೆ 1 ಗ್ರಾ.ಪಂ ಸೇರಿದಂತೆ ಒಟ್ಟು 6 ಗ್ರಾಪಂಗಳು ಕೋವಿಡ್‌ ಮುಕ್ತ ಗ್ರಾಮಗಳಾಗಿದ್ದು, ಈ ಗ್ರಾಮಗಳಿಗೆ ಕೋವಿಡ್‌ ಸೋಂಕು ತಗುಲದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

ಚಿಕ್ಕಮಗಳೂರು ತಾಲೂಕಿನಲ್ಲಿ 4 ಗ್ರಾ.ಪಂ., ಕಡೂರು 7 ಗ್ರಾ.ಪಂ., ಕೊಪ್ಪ 4 ಗ್ರಾ.ಪಂ., ಮೂಡಿಗೆರೆ 4 ಗ್ರಾಪಂ, ನರಸಿಂಹರಾಜಪುರ 6 ಗ್ರಾಪಂ, ಶೃಂಗೇರಿ 2 ಗ್ರಾಪಂ ಹಾಗೂ ತರೀಕೆರೆ 11 ಗ್ರಾಪಂಗಳಲ್ಲಿ 25ಕ್ಕೂ ಹೆಚ್ಚು ಕೋವಿಡ್‌ ಪಾಸಿಟಿವ್‌ ಪ್ರಕರಣಗಳನ್ನು ಹೊಂದಿವೆ ಎಂದು ಮಾಹಿತಿ ನೀಡಿದರು.

ರಾಜ್ಯದಿಂದ ಜಿಲ್ಲೆಗೆ 2,46,270 ಕೋವಿಶಿಲ್ಡ್‌ ಲಸಿಕೆ ಹಾಗೂ 33,460 ಕೋವ್ಯಾಕ್ಸಿನ್‌ ಲಸಿಕೆ ಸರಬರಾಜಾಗಿದ್ದು, ಕೋವಿಶೀಲ್ಡ್‌ ಮೊದಲ ಲಸಿಕೆ 2,12,236 ಮಂದಿಗೆ ನೀಡಲಾಗಿದೆ. ಎರಡನೇ ಲಸಿಕೆ 43,542 ಮಂದಿಗೆ ನೀಡಲಾಗಿದೆ. ಒಟ್ಟು 2,55,778 ಮಂದಿಗೆ ಲಸಿಕೆ ನೀಡಲಾಗಿದೆ. ಕೋವ್ಯಾಕ್ಸಿನ್‌ ಮೊದಲ ಲಸಿಕೆ 15,932 ಮಂದಿಗೆ ಎರಡನೇ ಲಸಿಕೆ 11,591 ಮಂದಿ ಸೇರಿ ಒಟ್ಟು 27,523ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಹೇಳಿದರು.

ವಿಲಕಚೇತನರು, ಚಿತಗಾರ ಸಿಬ್ಬಂದಿ, ಕೈದಿಗಳು, ಪೆಟ್ರೋಲ್‌ಬಂಕ್‌ ಮತ್ತು ಎಲ್‌ಪಿಜಿ ವಿತರಕರು, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಎಪಿಎಂಸಿ ಸಿಬ್ಬಂದಿ, ಮೆಸ್ಕಾಂ ಸಿಬ್ಬಂದಿ, ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಚಾಲಕರು, ಬ್ಯಾಂಕ್‌ ಸಿಬ್ಬಂದಿ, ಅಗ್ನಿಶಾಮಕದಳದ ಸಿಬ್ಬಂದಿ, ವಾಟರ್‌ಮ್ಯಾನ್‌, ಕ್ರೀಡಾಪಟುಗಳು, ಎಫ್‌ ಸಿಐ, ಅಂಚೆಕಚೇರಿ ಸಿಬ್ಬಂದಿಗೆ ಹಾಗೂ ಕೋವಿಡ್‌ ಕರ್ತವ್ಯ ನಿರತರು, ನ್ಯಾಯಾಂಗ ಇಲಾಖೆ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ ಇಲಾಖೆ ಸಿಬ್ಬಂದಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗಿದೆ ಎಂದರು.

ಮೇ 4ರಿಂದ ಬೀದಿಬದಿ ವ್ಯಾಪಾರಿಗಳು, ಹೋಟೆಲ್‌ ಕಾರ್ಮಿಕರು, ಆಟೋ ಟ್ಯಾಕ್ಸಿ ಚಾಲಕರು, ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದೆ. ಕಟ್ಟಡ ಕಾರ್ಮಿಕರು, ಸವಿತಾಸಮಾಜ, ಮಾಕ್ಸ್‌ಕ್ಯಾಬ್‌ ಚಾಲಕರು, ಪ್ರೈವೇಟ್‌ ಬಸ್‌ ಆಪರೇಟರ್ ಕಟ್ಟಡ ಕಾರ್ಮಿಕ ಸಿಬ್ಬಂದಿಗೆ 2-3ದಿನಗಳಲ್ಲಿ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಒಂದು ನಿಮಿಷಕ್ಕೆ ಒಂದು ಸಾವಿರ ಲೀ. ಆಕ್ಸಿಜನ್‌ ತಯಾರಿಕಾ ಘಟಕದ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಜುಲೈ 15ರ ಬಳಿಕ ಆರಂಭವಾಗಲಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ವೈದ್ಯರ ಕೊರತೆ ನೀಗಿಸುವ ನಿಟ್ಟಿನಲ್ಲಿ ಮೆಡಿಕಲ್‌ ಕಾಲೇಜ್‌ಗೆ ಸಂಬಂಧಿ ಸಿದಂತೆ 31ಜನ ವೈದ್ಯರ ನೇಮಕಕ್ಕೆ ಅರ್ಜಿಗಳನ್ನು ಆಹ್ವಾನಿಸಿದ್ದು, ಈಗಾಗಲೇ ಕೆಲವು ವೈದ್ಯರ ನೇಮಕವಾಗಿದ್ದು, ಮುಂದಿನ ದಿನಗಳಲ್ಲಿ ನೇಮಕಾತಿ ಪೂರ್ಣಗೊಳ್ಳುವ ವಿಶ್ವಾಸವಿದೆ. 11ಜನ ತಜ್ಞ ವೈದ್ಯರು, 43 ಜನ ಸಾಮಾನ್ಯ ಕರ್ತವ್ಯ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈಗಾಗಲೇ 10ರಿಂದ 12 ಜನ ವೈದ್ಯರು ವರದಿ ಮಾಡಿಕೊಂಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಕೆ.ಎನ್‌. ರಮೇಶ್‌, ಎಸ್‌ಪಿ ಎಂ.ಎಚ್‌.ಅಕ್ಷಯ್‌, ಜಿ.ಪಂ. ಸಿಇಒ ಎಸ್‌.ಪೂವಿತ, ಡಿಎಚ್‌ಒ ಡಾ|ಉಮೇಶ್‌, ಜಿಲ್ಲಾ ಸರ್ಜನ್‌ ಡಾ| ಮೋಹನ್‌ಕುಮಾರ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಮಂಜುನಾಥ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಡೆತ್‌ರೇಟ್‌ ಅತ್ಯಂತ ಕಡಿಮೆ ಇದೆ. ರಾಜ್ಯದಲ್ಲಿ 0.71ರಷ್ಟು ಇದೆ. ರಾಜ್ಯದಲ್ಲಿ ಜಿಲ್ಲೆ ಪಾಸಿಟಿವಿಟಿ ರೇಟ್‌ನಲ್ಲಿ ಶೇ.28ರಷ್ಟಿದೆ. ಪತ್ತೆಯಾಗುತ್ತಿರುವ ಸೋಂಕಿತರು ಬಹುತೇಕ ಎಲ್ಲ ಗುಣಲಕ್ಷಣ ಹೊಂದಿದ್ದಾರೆ. ಯಾವುದೇ ಗುಣ ಲಕ್ಷಣಗಳು ಇಲ್ಲದವರು ಶೇ.90ರಷ್ಟು ಇದ್ದಾರೆ. ಪರೀಕ್ಷೆಯಿಂದ ಇವರಲ್ಲಿ ಸೋಂಕು ಇದೆ ಎಂದು ಪತ್ತೆಯಾಗಿದ್ದು,ಮುಂಜಾಗ್ರತೆಯಾಗಿ ಅವರನ್ನು ಕ್ವಾರಂಟೈನ್‌ ಗೆ ಒಳಪಡಿಸಲಾಗಿದೆ. ಇದು ಸಮಾಧಾನಕರ ಸಂಗತಿಯಾಗಿದೆ.– ಸಿ.ಟಿ.ರವಿ, ಶಾಸಕ.

ಕೋವಿಡ್‌ ಸಂದರ್ಭದಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಆರೋಗ್ಯ ಸಹಾಯಕರ ತರಬೇತಿಯನ್ನು ನೀಡಲಾಗುತ್ತಿದ್ದು, ಅರ್ಜಿ ಆಹ್ವಾನಿಸಲಾಗಿದೆ. 770 ಅರ್ಜಿಗಳು ಇದುವರೆಗೂ ಸ್ವೀಕಾರವಾಗಿದ್ದು, 876 ಸಿಬ್ಬಂದಿ ಅಗತ್ಯವಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. 8553611678, 9980238737, 08262-295535 ದೂರವಾಣಿ ಸಂಖ್ಯೆ ನೀಡಲಾಗಿದ್ದು ಆಸಕ್ತರು ಸಂಪರ್ಕಿಸಬಹುದಾಗಿದೆ. -ಕೆ.ಎನ್‌.ರಮೇಶ್‌, ಡಿಸಿ.

Advertisement

Udayavani is now on Telegram. Click here to join our channel and stay updated with the latest news.

Next