ನವದೆಹಲಿ: ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗೆಗಿನ ಆಹ್ವಾನವನ್ನು ತಿರಸ್ಕರಿಸುವಂತೆ ಕಾಂಗ್ರೆಸ್ ಕೋರ್ ಕಮಿಟಿ ಅಧ್ಯಕ್ಷ ರಾಹುಲ್ ಗಾಂಧಿಗೆ ಸಲಹೆ ಮಾಡಿದೆ. ನವದೆಹಲಿಯಲ್ಲಿ ಗುರುವಾರ ಸಭೆ ಸೇರಿದ್ದ ಕಮಿಟಿಯ ಸಭೆಯಲ್ಲಿ ಆರ್‌ಎಸ್‌ಎಸ್ ಆಹ್ವಾನ, ರಫೇಲ್ ಡೀಲ್, ನೋಟುಗಳ ಅಪಮೌಲ್ಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿತು. ಕಮಿಟಿ ಸೂಚನೆ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ಸೆಪ್ಟೆಂಬರ್ 17ರಿಂದ 19 ವರೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ “ಆರ್‌ಎಸ್‌ಎಸ್ ದೃಷ್ಟಿಕೋನದಲ್ಲಿ ಮುಂದಿನ ಭಾರತ’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಲ್ಲಿಕೆಯಾಗಲಿರುವ ಆಹ್ವಾನವನ್ನು ತಿರಸ್ಕರಿಸುವ ಸಾಧ್ಯತೆ ಹೆಚ್ಚಾಗಿದೆ. ಆಹ್ವಾನ ತಿರಸ್ಕರಿಸುವಂತೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಲಹೆ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರು ಈ ತೀರ್ಮಾನ ಕೈಗೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ. ಈ ಹಿಂದೆ ಸೋನಿಯಾ ಗಾಂಧಿಯವರಿಗೂ ಇದೇ ಮಾದರಿ ಆಹ್ವಾನ ಸಲ್ಲಿಕೆಯಾಗಿದ್ದರೂ, ಅವರು ಅದನ್ನು ಸ್ವೀಕರಿಸಿರಲಿಲ್ಲ.
ಜೆಪಿಸಿ ಬೇಕು: ಇದೇ ವೇಳೆ ರಾಷ್ಟ್ರ ರಾಜಧಾನಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ 520 ಕೋಟಿ ರೂ. ಮೌಲ್ಯದ ವಿಮಾನವನ್ನು 1,200 ಕೋಟಿ ರೂ.ನೀಡಿ ಖರೀದಿ ಮಾಡಿದ್ದೇಕೆ ಎಂದು ಪ್ರಧಾನಿಯವರನ್ನು ಪ್ರಶ್ನಿಸಿದ್ದಾರೆ.
ರಫೇಲ್ ಯುದ್ಧ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಅರುಣ್ ಜೇಟ್ಲಿಯವರು ಬ್ಲಾಗ್ ಬರೆಯುದು ಬಿಟ್ಟು ರಫೇಲ್ ಡೀಲ್ ಬಗ್ಗೆ ಜೆಪಿಸಿ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ. ನೋಟು ಅಪಮೌಲ್ಯ ಎನ್ನುವುದು ಬಲುದೊಡ್ಡ ಹಗರಣ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಉತ್ತರ ಕೊಡಬೇಕಾಗಿದೆ ಎಂದಿದ್ದಾರೆ. ಜನರಿಂದ ಪಡೆದ ನೋಟುಗಳನ್ನು ಉದ್ಯಮಪತಿಗಳಿಗೆ ನೀಡಲಾಗಿದೆ ಎಂದು ದೂರಿದ್ದಾರೆ. ಪ್ರಧಾನಿ ಕ್ಷಮೆ ಯಾಚನೆಗೆ ಒತ್ತಾಯಿಸುತ್ತೀರಾ ಎಂಬ ಪ್ರಶ್ನೆಗೆ “ನೀವು ತಪ್ಪು ಮಾಡಿದರೆ ಕ್ಷಮೆ ಯಾಚನೆ ಮಾಡುತ್ತೀರಿ. ಪ್ರಧಾನಿ ಮೋದಿಯವರು ಅಪಮೌಲ್ಯವನ್ನು ಉದ್ದೇಶಪೂರ್ವಕವಾಗಿಯೇ ಅದನ್ನು ಮಾಡಿದ್ದಾರೆ’ ಎಂದರು ರಾಹುಲ್ ಗಾಂಧಿ.
ಹೆಚ್ಚು ತೆರಿಗೆ ಸಂಗ್ರಹ, ಬೆಳವಣಿಗೆ: ಜೇಟ್ಲಿ
ನೋಟುಗಳ ಅಪಮೌಲ್ಯದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮತ್ತು ಉತ್ತಮ ರೀತಿಯಲ್ಲಿ ಆರ್ಥಿಕ ಕ್ಷೇತ್ರದ ಅಭಿವೃದ್ಧಿಯಾಗಿದೆ. ಹೀಗೆಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಈ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ಲೇಖನ ಬರೆದಿದ್ದಾರೆ. ದೇಶದ ಅರ್ಥ ವ್ಯವಸ್ಥೆ ಹೆಚ್ಚು ಕ್ರಮಬದ್ಧವಾಗಿ ಈಗ ಮಾರ್ಪಾಡಾಗಿದೆ. ಭಾರತವನ್ನು ತೆರಿಗೆ ಪಾವತಿ ಮಾಡದೇ ಇರುವ ರಾಷ್ಟ್ರದ ಬದಲಾಗಿ ತೆರಿಗೆ ಪಾವತಿ ಮಾಡುವ ರಾಷ್ಟ್ರವಾಗಿ ಮಾರ್ಪಾಡು ಮಾಡುವಲ್ಲಿ ಅಪಮೌಲ್ಯ ಕ್ರಮ ಯಶಸ್ವಿಯಾಗಿದೆ. ಹೆಚ್ಚಿನ ಪ್ರಮಾಣದ ವೆಚ್ಚ, ಅಭಿವೃದ್ಧಿ ದಾಖಲಾಗಿದೆ ಎಂದು ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ನೋಟುಗಳ ಅಪಮೌಲ್ಯವೇ ಒಟ್ಟು ಪ್ರಕ್ರಿಯೆಯ ಯಶಸ್ವಿಯೇ ಎಂದರೆ ಅಲ್ಲ ಎಂದು ಹೇಳಿಕೊಂಡಿದ್ದಾರೆ.
ಯು.ಕೆ.ಹಿಂದಿಕ್ಕಲಿದೆ: ಸದ್ಯ ಭಾರತದ ವಿಶ್ವದ ಆರನೇ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿದೆ. ಮುಂದಿನ ವರ್ಷ ಅದು ಐದನೇ ಸ್ಥಾನದಲ್ಲಿರುವ ಯುನೈಟೆಡ್ ಕಿಂಗ್‌ಡಮ್ ಅನ್ನು ಹಿಂದಿಕ್ಕಿ, ಅಲ್ಲಿಗೆ ಭಾರತ ಪ್ರವೇಶಿಸಲಿದೆ ಎಂದಿದ್ದಾರೆ. ಮುಂದಿನ 10-20ರಿಂದ ವರ್ಷಗಳಲ್ಲಿ ಜಗತ್ತಿನ ಮೂರು ಪ್ರಬಲ ಅರ್ಥ ವ್ಯವಸ್ಥೆಯಲ್ಲಿ ಒಂದು ರಾಷ್ಟ್ರವಾಗಲಿದೆ ಎಂದಿದ್ದಾರೆ.