ದಾವಣಗೆರೆ: ಕನ್ನಡ ಚಲನಚಿತ್ರ ರಂಗದ ದಂತಕಥೆ ದ್ವಾರಕೀಶ್ ಬ್ಯಾನರ್‌ನ 50ನೇ ಚಿತ್ರ ಚೌಕಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಚಿತ್ರದ ಗೆಲುವಿಗೆ ಕಾರಣವಾಗಿರುವ ಜನರಿಗೆ ಕೃತಜ್ಞತೆ ತಿಳಿಸುವುದಕ್ಕಾಗಿ ಚೌಕ ದಿಗ್ವಿಜಯ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದ ನಿರ್ಮಾಪಕ, ದ್ವಾರಕೀಶ್ ಪುತ್ರ ಯೋಗೇಶ್ ತಿಳಿಸಿದರು.
ಚೌಕಕ್ಕೆ ಸಾಕಷ್ಟು ಹಣ ತೊಡಗಿಸಲಾಗಿದೆ. ಈವರೆಗೆ ಹಾಕಿದ ಬಂಡವಾಳ ವಾಪಾಸ್ಸು ಬಂದಿಲ್ಲ. ಆದರೂ, ಚಿತ್ರಕ್ಕೆ ದೊರಕಿರುವ ಬೆಂಬಲದಿಂದ ಹಣ ವಾಪಾಸ್ಸು ಬಂದೇ ಬರುವ ವಿಶ್ವಾಸ ಇದೆ. ಹಣಕ್ಕಿಂತಲೂ ಮುಖ್ಯವಾಗಿ ಕರ್ನಾಟಕದ ಜನರ ಪೀತಿ, ಅಭಿಮಾನದ ಫಲವಾಗಿ ನಮ್ಮ ಬ್ಯಾನರ್‌ನ 50ನೇ ಚಿತ್ರ ಗೆದ್ದಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬಣ್ಣಿಸಿದರು.
ಬೆಂಗಳೂರು, ಮೈಸೂರು, ಮಂಗಳೂರು ಮುಂತಾದ ಕಡೆ ಚಿತ್ರ ಚೆನ್ನಾಗಿ ಓಡಿದರೆ ಆ ಚಿತ್ರ ಗೆದ್ದಂತೆ. ಇನ್ನು ಕರ್ನಾಟಕದ ಹೃದಯ ಭಾಗ ದಾವಣಗೆರೆಯಲ್ಲಿ ಚಿತ್ರ ಗೆದ್ದರಂತೂ ಇಡೀ ರಾಜ್ಯದಲ್ಲೇ ಗೆದ್ದಂತೆ. ಈ ಭಾಗದ ಜನರು ಕನ್ನಡ ಚಿತ್ರಕ್ಕೆ ನೀಡುವಂಥಹ ಪ್ರೋತ್ಸಾಹ, ಆಶೀರ್ವಾದ ಮರೆಯಲಿಕ್ಕಾಗದು. ಆಪ್ತಮಿತ್ರ ಚಿತ್ರ ಮೊದಲಿಗೆ ಗೆದ್ದಿದ್ದೇ ದಾವಣಗೆರೆಯಲ್ಲಿ ಎಂದು ಸ್ಮರಿಸಿದರು.
ಚೌಕ ತಂಡವನ್ನಿಟ್ಟಿಕೊಂಡು ಇನ್ನೊಂದು ಚಿತ್ರ ಮಾಡುವ ಬಯಕೆ ಇದೆ. ಪ್ರೇಮ್, ದಿಗಂತ್, ಪ್ರಜ್ವಲ್ ಹಾಗೂ ಚಿತ್ರದ ನಿರ್ದೇಶಕ ತರುಣ್ ಬೇರೆ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಾಜೆಕ್ಟ್ ಮುಗಿದ ನಂತರ ಮುಂದಿನ ಚಿತ್ರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹಿಂದೆಲ್ಲ ಕನ್ನಡ ಚಿತ್ರದ ಗುರಿ 50, 100 ದಿನ ಇತ್ತು. ಈಗ ವರ್ಷಕ್ಕೆ 120-150 ಚಿತ್ರ ನಿರ್ಮಾಣವಾಗುತ್ತಿವೆ.
ಹಾಕಿದಂತಹ ಬಂಡವಾಳ 2-3 ದಿನಗಳಲ್ಲಿ ವಾಪಾಸ್ಸು ಬರುತ್ತದೆ. ಹಣ ವಾಪಾಸ್ಸಾಗುವುದು ಮುಖ್ಯವಾಗಿರುವಾಗ ಚಿತ್ರ ಓಡುವುದರತ್ತ ಅಷ್ಟಾಗಿ ಗಮನ ನೀಡುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಚಿತ್ರದ ನಿರ್ದೇಶಕ ತರುಣ್ ಸುಧೀರ್ ಮಾತನಾಡಿ, ಮೇಯರ್ ಮುತ್ತಣ್ಣ, ವಿಷ್ಣುವರ್ಧನ ಇತರೆ ಚಿತ್ರ ಮಾಡಿರುವಂತಹ ದ್ವಾರಕೀಶ್ ಬ್ಯಾನರ್‌ನಡಿ ಚಿತ್ರ ಮಾಡುವಾಗ ನಿಜಕ್ಕೂ ದೊಡ್ಡ ಜವಾಬ್ದಾರಿ ಇತ್ತು.
ಒಂದು ವರ್ಷ ಕಷ್ಟಪಟ್ಟು ಮಾಡಿದ್ದೇವೆ. ಈಗ ಚಿತ್ರ ಗೆದ್ದಿದೆ. ಚಿತ್ರದ ಗೆಲುವಿಗೆ ಕಾರಣವಾಗಿರುವ ಜನರಿಗೆ ಧನ್ಯವಾದ ಹೇಳಿ, ಅವರ ಅಭಿಪ್ರಾಯ ತಿಳಿದುಕೊಳ್ಳಲು ಈ ಪ್ರವಾಸ. ದರ್ಶನ್ ಅವರಂತಹವರು ಒಂದೇ ಮಾತಿಗೆ ಈ ಚಿತ್ರದಲ್ಲಿ ನಟಿಸಲಿಕ್ಕೆ ಒಪ್ಪಿಕೊಂಡಿದ್ದರು. ಮಲ್ಟಿ ನಾಯಕರ ಚಿತ್ರ ಸದಾ ಬರುತ್ತಿವೆ. ಪುನೀತ್, ಸುದೀಪ್, ದರ್ಶನ್ ಎಲ್ಲರೂ ಒಂದೇ ಚಿತ್ರದಲ್ಲಿ ನಟಿಸುವುದೇ ಇಲ್ಲ ಎನ್ನುವುದಿಲ್ಲ, ಅವರಿಗೆ ಬೇಕಾದ ಕಥೆ ಮುಖ್ಯ.
ದರ್ಶನ್ ಅವರ 50ನೇ ಚಿತ್ರ ನಿರ್ದೇಶಿಸುತ್ತಿರುವುದಾಗಿ ಅವರು ತಿಳಿಸಿದರು. ನಾಯಕ ನಟರಾದ ಪ್ರೇಮ್, ದಿಗಂತ್, ಪ್ರಜ್ವಲ್ ದೇವರಾಜ್, ಚಿತ್ರದ ಗೆಲುವಿಗೆ ಕಾರಣರಾದ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸುವುದಕ್ಕಾಗಿ ಅವರ ಬಳಿಗೆ ಬಂದಿದ್ದೇವೆ. ಚೌಕ ಚಿತ್ರ ಎಲ್ಲ ಕಡೆ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಕಥೆಯೇ ಚಿತ್ರದ ಗೆಲುವಿಗೆ ಮುಖ್ಯ ಕಾರಣ. ಚಿತ್ರ ತಂಡದ ಶ್ರಮಕ್ಕೆ ಒಳ್ಳೆಯ ಫಲ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು. ಅಶೋಕ ಚಿತ್ರಮಂದಿರದ ಮಾಲೀಕ ಲಕ್ಷ್ಮೀಕಾಂತ್‌ರೆಡ್ಡಿ ಇದ್ದರು.