Advertisement

ಹೊನ್ನಾಳಿ-ನ್ಯಾಮತಿ ಅತಿವೃಷ್ಟಿ ಪೀಡಿತವೆಂದು ಘೋಷಿಸಿ

01:46 PM May 24, 2022 | Team Udayavani |

ಹೊನ್ನಾಳಿ: ಕಳೆದ ಕೆಲ ದಿನಗಳಿಂದ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳಲ್ಲಿ ಅತಿಯಾದ ಮಳೆ, ಗಾಳಿಯಿಂದ ಬೆಳೆ ಹಾಗೂ ಮನೆಗಳಿಗೆ ಅಪಾರ ಹಾನಿಯಾಗಿದೆ. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವರದಿ ನೀಡಿ ಅವಳಿ ತಾಲೂಕುಗಳನ್ನು ಅತಿವೃಷ್ಟಿ ಪೀಡಿತ ತಾಲೂಕು ಎಂದು ಘೋಷಿಸಲು ಮನವಿ ಮಾಡಲಾಗುವುದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ನ್ಯಾಮತಿ-ಹೊನ್ನಾಳಿ ಅವಳಿ ತಾಲೂಕುಗಳಲ್ಲಿ ಮಳೆಯಿಂದ ಹಾನಿಯ ಬಗ್ಗೆ ಮಾಹಿತಿ ಪಡೆಯಲು ತಾಲೂಕು ಸಾಮರ್ಥ್ಯ ಸೌಧದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ವಾಡಿಕೆ ಮಳೆ 88 ಮಿಮೀ ಮಳೆಗಿಂತ ಈ ಬಾರಿ ಅವಳಿ ತಾಲೂಕುಗಳಲ್ಲಿ ಮಿಮೀ ಅಂದರೆ ಶೇ. 288ರಷ್ಟು ಹೆಚ್ಚಿನ ಮಳೆ‌ಯಾಗಿದೆ. ಶಾಸಕನಾಗಿ ನಾನು ಖದ್ಧಾಗಿ ಮೂರು ದಿನಗಳ ಕಾಲ ಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಆದರೆ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳನ್ನು ಹೊರತುಪಡಿಸಿದರೆ ಬೇರೆ ಅಧಿಕಾರಿಗಳು ಹಾನಿಯಾದ ಸ್ಥಳಗಳಿಗೆ ಭೇಟಿ ನೀಡದೆ ನಿರ್ಲಕ್ಷ ತೋರಿದ್ದಾರೆ. ಇಂದಿನ ಸಭೆಯಲ್ಲಿ ನಿಖರವಾದ ಮಾಹಿತಿ ನೀಡುವಲ್ಲಿ ವಿಫಲವಾಗಿರುವುದು ಬೇಸರದ ಸಂಗತಿ. ಇದನ್ನು ಸಹಿಸಲಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಸುಮಾರು 15 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ. 2710 ಎಕರೆ ಪ್ರದೇಶದ ಭತ್ತ ನಾಶವಾಗಿದ್ದು ಇದರ ಜೊತೆಗೆ ಮೆಕ್ಕೆಜೋಳ 158 ಎಕರೆ, ಸೂರ್ಯಕಾಂತಿ 86 ಎಕರೆಯಷ್ಟು ಹಾಳಾಗಿದೆ. ಸುಮಾರು 90 ಶಾಲಾ ಕೊಠಡಿಗಳು ಜಖಂಗೊಂಡಿದ್ದು, 71 ಮನೆಗಳಿಗೆ ಮಳೆ ನೀರು ನುಗ್ಗಿ ತೊಂದರೆಯಾಗಿದ್ದು, ಮಳೆಯಿಂದ 152 ಮನೆಗಳಿಗೆ ಹಾನಿಯಾಗಿದೆ ಎಂದು ಹೇಳಿದರು.

ಅವಳಿ ತಾಲೂಕುಗಳಲ್ಲಿ ಸುಮಾರು 6 ಕೆರೆಗಳಿಗೆ ಅತಿವೃಷ್ಟಿಯಿಂದ ಕೋಡಿ ಬಿದ್ದು ಹಾಳಾಗಿವೆ. ಇದರ ಜೊತೆಗೆ ಅನೇಕ ಕಡೆಗಳಲ್ಲಿ ಚೆಕ್‌ಡ್ಯಾಂ, ಸೇತುವೆಗಳಿಗೂ ಕೂಡ ಹಾನಿಯಾಗಿದೆ. ಗಂಗನಕೋಟಿ ಸೇತುವೆ ಹಾಳಾಗಿದ್ದು, ರಾಮೇಶ್ವರ, ನಗರಿನಕಟ್ಟೆ, ದೊಡ್ಡೇರಳ್ಳಿ, ಮಾದೇನಹಳ್ಳಿ, ಚಟ್ನಹಳ್ಳಿ, ಚಿನ್ನಿಕಟ್ಟೆ, ಹೊಸಕೊಪ್ಪದ ಕೆರೆಗಳು ಒಡೆದು ನಷ್ಟವಾಗಿದೆ. ಅನೇಕ ಗ್ರಾಮಗಳಲ್ಲಿ ರಸ್ತೆ ಸೇತುವೆಗಳು ಹಾನಿಗೊಳಗಾಗಿವೆ. ಸುಮಾರು 19 ವಿದ್ಯುತ್‌ ಕಂಬಗಳು ಮಳೆಯಿಂದಾಗಿ ನೆಲಕ್ಕೆ ಬಿದ್ದಿವೆ ಎಂದರು.

ಇತ್ತೀಚಿನ ದಿನಗಳಲ್ಲಿ ಪತ್ರಕರ್ತರೆಂದು ಹೇಳಿಕೊಂಡು ಹಾಗೂ ಕೆಲವರು ವಿವಿಧ ಸಂಘಟನೆಗಳ ಹೆಸರು ಹೇಳಿಕೊಂಡು ಅಧಿಕಾರಿಗಳನ್ನು ಹೆದರಿಸುವ ಅಥವಾ ಬ್ಲಾಕ್‌ ಮೇಲ್‌ ಮಾಡುತ್ತಿರುವ ಬಗ್ಗೆ ತಮಗೆ ಮಾಹಿತಿ ಬಂದಿದೆ. ಅಧಿಕಾರಿಗಳು ಯಾವುದೇ ಕಾರಣಕ್ಕೂ ಇಂತಹ ಬ್ಲಾಕ್‌ಮೇಲ್‌ಗ‌ಳಿಗೆ ಹೆದರಬಾರದು. ಕೂಡಲೇ ಅಂತಹವರ ವಿರುದ್ಧ ಪೊಲೀಸರಿಗೆ ದೂರು ನೀಡಿ. ನಿಮ್ಮ ಬೆಂಬಲಕ್ಕೆ ನಾನಿರುತ್ತೇನೆ ಎಂದು ಆತ್ಮಸ್ಥೈರ್ಯ ಮೂಡಿಸಿದರು.

Advertisement

ಸಭೆಯಲ್ಲಿ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ಹೊನ್ನಾಳಿ ತಹಶೀಲ್ದಾರ್‌ ರಶ್ಮಿ, ನ್ಯಾಮತಿ ತಹಶೀಲ್ದಾರ್‌ ರೇಣುಕಾ, ತಾಪಂ ಇಒ ರಾಮಾ ಭೋವಿ, ಕೃಷಿ ಇಲಾಖೆ ಉಪ ನಿರ್ದೇಶಕ ಸಿದ್ದೇಶ್‌ ಭಾಗವಹಿಸಿದ್ದರು.

ಬಿಇಒಗೆ ತರಾಟೆ

ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದ ವೇಳೆ ಅನೇಕ ಪೋಷಕರು ಶಾಲೆಗಳಿಗೆ ರಜೆ ಕೊಡಿಸಬೇಕೆಂದು ಮನವಿ ಮಾಡಿದ್ದರು. ಈ ವೇಳೆ ಸ್ಥಳೀಯ ಬಿಇಒ ಅವರಿಗೆ ಅನೇಕ ಬಾರಿ ದೂರವಾಣಿ ಕರೆ ಮಾಡಿದರೂ ಲಭ್ಯವಾಗಲಿಲ್ಲ. ಹೀಗಾಗಿ ಜಿಲ್ಲಾ ಉಪನಿರ್ದೇಶಕರಿಗೆ ಕರೆ ಮಾಡಿ ರಜೆ ಬಗ್ಗೆ ಹೇಳಬೇಕಾಯಿತು ಎಂದ ರೇಣುಕಾಚಾರ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಇ. ರಾಜೀವ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next