ಶಿವಮೊಗ್ಗ: ರಾಗಿಗುಡ್ಡವನ್ನು ಜೈವಿಕ ಅರಣ್ಯವಾಗಿ ಘೋಷಿಸಲು ಆಗ್ರಹಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಶಿವಮೊಗ್ಗ ನಗರದ ಪರಿಸರದ ಕಳಶದಂತೆ ಇರುವ ರಾಗಿ ಗುಡ್ಡವನ್ನು ಇಎಸ್‌ಐ ಆಸ್ಪತ್ರೆ ಮತ್ತು ಇತರೆ ಇಲಾಖೆಗಳಿಗೆ ನೀಡಿರುವುದರಿಂದ ಸಂಪೂರ್ಣ ನೆಲಸಮವಾಗಲಿದೆ. ವಿಶ್ವ ಪರಿಸರ ದಿನಾಚರಣೆಯ ಸಮಯದಲ್ಲಿ ಇಂತಹ ಘಟನೆ ನಡೆದಿರುವುದು ವಿಷಾದನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಗಿ ಗುಡ್ಡದಲ್ಲಿ ನ್ಪೋಟಕ್ಕೆ ಅನುಮತಿ ನೀಡುವ ಮೂಲಕ ಹಿಂದೆ ಜಿಲ್ಲಾಧಿಕಾರಿಗಳು ನೀಡಿದ ಭರವಸೆ ಹುಸಿಗೊಳಿಸಲಾಗಿದೆ. ಹಿಂದೆ ರಾಗಿಗುಡ್ಡದಿಂದ ಮಣ್ಣು ತೆಗೆಯುವುದನ್ನು ಪರಿಸರಾಸಕ್ತರು ವಿರೋಧಿಸಿದಾಗ ಅಂದಿನ ಜಿಲ್ಲಾಧಿಕಾರಿಗಳು, ಮಣ್ಣು, ಕಲ್ಲು ತೆಗೆಯುವುದನ್ನು ನಿಲ್ಲಿಸಿ ರಾಗಿಗುಡ್ಡ ನೈಸರ್ಗಿಕ ಮೇಲ್ಮೈಯನ್ನು ಹಾಗೆಯೇ ಉಳಿಸಿಕೊಂಡು ಕಟ್ಟಡ ನಿರ್ಮಾಣ ಮಾಡುವಂತೆ ಮತ್ತು ನಿರ್ಮಾಣದ ವಿನ್ಯಾಸದಲ್ಲಿ ಬದಲಾವಣೆ ಮಾಡಿಕೊಳ್ಳಲು ಸೂಚಿಸಿದ್ದರು.
ರಾಗಿಗುಡ್ಡದಲ್ಲಿ ಯಾವುದೇ ಸ್ಫೋಟಕ್ಕೆ ಅನುಮತಿ ನೀಡಿರಲಿಲ್ಲ. ಆದರೆ, ಈಗ ಕಲ್ಲು ಬಂಡೆಗಳನ್ನು ತೆಗೆಯಲು ಸ್ಫೋಟಕ ಬಳಸಲು ಅನುಮತಿ ನೀಡುವ ಮೂಲಕ ಹಿಂದಿನ ಜಿಲ್ಲಾಧಿಕಾರಿಗಳ ಭರವಸೆಯನ್ನು ಹುಸಿಗೊಳಿಸಿದಂತಾಗಿದೆ. ಈಗ ಆಸ್ಪತ್ರೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸ್ಥಳದಿಂದ ಹಿಂದಿಗಿಂತಲೂ 15 ಅಡಿ ಕೆಳಗೆ ಮಣ್ಣನ್ನು ತೆಗೆಯುವ ಮೂಲಕ ರಾಗಿಗುಡ್ಡವನ್ನು ಇನ್ನಷ್ಟು ಹಾಳು ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೇವಲ ಇಎಸ್‌ಐ ಆಸ್ಪತ್ರೆಗಾಗಿ 5 ಎಕರೆ ಜಾಗ ನೀಡಿದ ಪರಿಣಾಮ 40 -50 ಅಡಿಗಳಷ್ಟು ರಾಗಿಗುಡ್ಡ ನೆಲಸಮವಾಗಿದೆ. ಅಲ್ಲದೇ, ರಾಗಿಗುಡ್ಡದಲ್ಲಿ ಸರ್ಕಾರದ ಕೆಲವು ಇಲಾಖೆಗಳಿಗೆ ನೀಡಿರುವ ಜಾಗದಲ್ಲಿ ಅಭಿವೃದ್ಧಿಯಾದರೆ, ರಾಗಿಗುಡ್ಡ ಸಂಫೂರ್ಣ ನೆಲಸಮವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಗಿ ಗುಡ್ಡ ಉಳಿಸಲೇಬೇಕಾಗಿದೆ.ಹಾಗಾಗಿ ವಿವಿಧ ಇಲಾಖೆಗಳಿಗೆ ನೀಡಿರುವ ಎಲ್ಲಾ ಜಾಗವನ್ನು ಹಿಂಪಡೆಯಬೇಕು.
ಅಲ್ಲದೇ, ಇಲಾಖೆಗಳಿಗೆ ಜಮೀನು ನೀಡುವ ಸಂದರ್ಭದಲ್ಲಿ ಸಾರ್ವಜನಿಕರ ಅಭಿಪ್ರಾಯ ಪಡೆದೇ ಇಲ್ಲ. ಇದು ಕಾನೂನುಬಾಹಿರವಾಗಿದೆ. ವಿವಿಧ ಇಲಾಖೆಗಳಿಗೆ ನೀಡಿರುವ ಜಾಗದಲ್ಲಿ 2019 ರಲ್ಲಿ ಗಿಡಗಳನ್ನು ನೆಡಲು ಅರಣ್ಯ ಇಲಾಖೆಗೆ ಜಿಲ್ಲಾಡಳಿತ ಅನುಮತಿ ನೀಡಿತ್ತು. ಈ ಅನುಮತಿ ಆಧಾರದ ಮೇಲೆ ಮೂರು ವರ್ಷಗಳಲ್ಲಿ ಅರಣ್ಯ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳು 12 ಸಾವಿರಕ್ಕೂ ಅಧಿಕ ಗಿಡಗಳನ್ನು ಈ ಪ್ರದೇಶದಲ್ಲಿ ನೆಟ್ಟು ಫೋಷಿಸಿವೆ. ಈಗ ಈ ಗಿಡಗಳೆಲ್ಲಾ ಸರ್ವನಾಶವಾಗಲಿದೆ ಎಂದು ದೂರಿದರು.
ರಾಗಿಗುಡ್ಡ ನಾಶವಾಗುವುದನ್ನು ತಪ್ಪಿಸಲು ಕಾನೂನುಬಾಹಿರವಾಗಿ ನೀಡಿದ ಎಕರೆಗಟ್ಟಲೆ ಜಾಗ ಹಿಂದಕ್ಕೆ ಪಡೆದು ಪರಿಸರಕ್ಕೆ ಆಗುವ ಹಾನಿ ತಪ್ಪಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕೆ.ವಿ. ವಸಂತ್ ಕುಮಾರ್, ಡಾ| ಸತೀಶ್ ಕುಮಾರ್ ಶೆಟ್ಟಿ, ಅಶೋಕ್ ಕುಮಾರ್ ಮೊದಲಾದವರಿದ್ದರು.