Advertisement

ವಾರ್ಡ್‌ ಸಮಿತಿ ರಚನೆಗೆ ಪಿಐಎಲ್‌ ಸಲ್ಲಿಸಲು ನಿರ್ಧಾರ

12:15 PM Mar 25, 2019 | Lakshmi GovindaRaju |

ಬೆಂಗಳೂರು: ಸಂವಿಧಾನದ 74ನೇ ತಿದ್ದುಪಡಿಗೆ ಅನುಗುಣವಾಗಿ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ವಾರ್ಡ್‌ ಸಮಿತಿ ರಚನೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲು ಹಲವು ಸಂಘಟನೆಗಳು ಸಿದ್ಧತೆ ನಡೆಸಿವೆ.

Advertisement

ಸಿವಿಕ್‌ ಬೆಂಗಳೂರು, ಇನ್‌ಸ್ಟಿಟ್ಯೂಟ್‌ ಆಫ್ ಪಬ್ಲಿಕ್‌ ಪಾಲಿಸಿ (ಎನ್‌ಎಲ್‌ಎಸ್‌ಐಯು) ಹಾಗೂ ನಾಗರಿಕ ಸಾಕ್ಷಿ ಸಂಘಟನೆಗಳಿಂದ ಭಾನುವಾರ ನಾಗರಬಾವಿಯ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಹಮ್ಮಿಕೊಂಡಿದ್ದ “ಸಂವಿಧಾನದ 74ನೇ ತಿದ್ದುಪಡಿ: ಸ್ಥಿತಿಗತಿ ಹಾಗೂ ಮುನ್ನೋಟ’ ವಿಷಯ ಕುರಿತ ಸಮಾಲೋಚನಾ ಸಭೆಯಲ್ಲಿ ವಿವಿಧ ಮಹಾನಗರ ಪಾಲಿಕೆಗಳಲ್ಲಿ 74ನೇ ತಿದ್ದುಪಡಿ ಅನುಷ್ಠಾನವಾಗಿರುವ ಕುರಿತು ಚರ್ಚಿಸಲಾಯಿತು.

ಬೆಂಗಳೂರು ಹೊರತುಪಡಿಸಿ ಉಳಿದ ಯಾವುದೇ ಮಹಾನಗರ ಪಾಲಿಕೆಗಳಲ್ಲಿ ವಾರ್ಡ್‌ ಸಮಿತಿ ರಚಿಸಲು ಸ್ಥಳೀಯ ಸಂಸ್ಥೆಗಳು ಮುಂದಾಗುತ್ತಿಲ್ಲ. ವಾರ್ಡ್‌ ಸಮಿತಿಗಳನ್ನು ರಚಿಸುವಂತೆ ಮೇಯರ್‌ ಹಾಗೂ ಆಯುಕ್ತರಿಗೆ ಮನವಿಗಳನ್ನು ನೀಡಲಾಗಿದೆ. ಆದರೆ, ಜನಪ್ರತಿನಿಧಿಗಳು ಅಧಿಕಾರ ಮೊಟಕುಗೊಳ್ಳುತ್ತದೆ ಹಾಗೂ ಭ್ರಷ್ಟಾಚಾರಕ್ಕೆ ಅವಕಾಶವಿರುವುದಿಲ್ಲ ಎಂಬ ಕಾರಣದಿಂದ ಸಮಿತಿ ರಚಿಸುತ್ತಿಲ್ಲ ಎಂದು ಕೆಲವರು ಆರೋಪಿಸಿದರು.

ಸಭೆಯಲ್ಲಿ ಮಾತನಾಡಿದ ನಿವೃತ್ತ ಮುಖ್ಯ ಕಾರ್ಯದರ್ಶಿ ಡಾ.ಎ.ರವೀಂದ್ರನ್‌, ಸಂವಿಧಾನ 74ನೇ ತಿದ್ದುಪಡಿಯಂತೆ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡಲಾಗಿದೆ. ಜತೆಗೆ ಜಿಲ್ಲಾ ಯೋಜನಾ ಸಮಿತಿ ಹಾಗೂ ನಗರ ಯೋಜನಾ ಸಮಿತಿಗಳನ್ನೂ ರಚಿಸಲಾಗಿದೆ. ಆದರೆ, ಯೋಜನೆ ರೂಪಿಸುವ ಸಾಮರ್ಥಯ ಸ್ಥಳೀಯ ಸಂಸ್ಥೆಗಳಿಗೆ ಇಲ್ಲ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಸಾಮರ್ಥಯ ಹೆಚ್ಚಿಸಲು ಸರ್ಕಾರ ಯೋಜನೆ ರೂಪಿಸಬೇಕಿದೆ ಎಂದು ಹೇಳಿದರು.

ಕಳೆದ 15 ವರ್ಷಗಳ ಹಿಂದೆ ವಾರ್ಡ್‌ ಕಮಿಟಿಗಳಿಗೆ ಚುನಾವಣೆಯ ಮೂಲಕ ಸದಸ್ಯರನ್ನು ನೇಮಿಸಬೇಕೆಂಬ ವಾದವಿತ್ತು. ಆದರೆ, ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಅದು ಜಾರಿಯಾಗಲಿಲ್ಲ. ಬಜೆಟ್‌ ಮಂಡಿಸುವ ಸಂದರ್ಭದಲ್ಲಿ ಅನುದಾನವನ್ನು ಯಾವ ಯೋಜನೆಗೆ ಬಳಸಬೇಕು, ಯಾವೆಲ್ಲ ಯೋಜನೆಗಳು ವಾರ್ಡ್‌ಗೆ ಬೇಕಾಗಿದೆ ಎಂಬುದನ್ನು ವಾರ್ಡ್‌ ಸಮಿತಿಯಲ್ಲಿ ನಿರ್ಧರಿಸಲು ಅವಕಾಶವಿರುತ್ತದೆ ಎಂದರು ಹೇಳಿದರು.

Advertisement

ವಾರ್ಡ್‌ ಸಮಿತಿಗಳು ವಾರ್ಡ್‌ನಲ್ಲಿ ನಡೆಯುವ ಕಾಮಗಾರಿಗಳ ಮೇಲೆ ನಿಗಾವಹಿಸಬೇಕು. ಹಳೆಯ ಕಲ್ಲು ಹೊಸ ಬಿಲ್ಲುಗಳಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕು. ಗ್ರಾಮಾಂತರ ಭಾಗದಲ್ಲಿ ಹೆಚ್ಚಿನ ಹಣ ಹಾಗೂ ಭೂಮಿಗೆ ಬೆಲೆಯಿಲ್ಲ. ಹೀಗಾಗಿ ಸಮಿತಿ ರಚನೆಗೆ ತೊಂದರೆಯಿಲ್ಲ. ಆದರೆ, ನಗರ ಭಾಗದಲ್ಲಿ ಹಣವೂ ಹೆಚ್ಚಾಗಿದ್ದು, ಭೂಮಿಯ ಬೆಲೆಯೂ ಹೆಚ್ಚಾಗಿದೆ. ಹೀಗಾಗಿ ನಮ್ಮ ಅಧಿಕಾರ ಮೊಟಕಾಗುತ್ತದೆ ಎಂಬ ಭಾವನೆ ಜನಪ್ರತಿನಿಧಗಳಲ್ಲಿದೆ ಎಂದರು.

ಸಭೆಯಲ್ಲಿ ಸಿವಿಕ್‌ ಬೆಂಗಳೂರು ಸಂಘಟನೆಯ ಕಾತ್ಯಾಯಿನಿ ಚಾಮರಾಜ್‌, ನಾಗರಿಕ ಸಾಕ್ಷಿ ಸಂಘಟನೆಯ ನರೇಂದ್ರ ಕುಮಾರ್‌, ಮೈಸೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಜಿ.ಆರ್‌.ವಿದ್ಯಾರಣ್ಯ, ಹುಬ್ಬಳ್ಳಿಯ ಸಂತೋಷ್‌, ಕಲಬುರ್ಗಿಯ ಸಿದ್ದುಹಿರೇಮs…, ಬಳ್ಳಾರಿಯ ವಿಜಯಕುಮಾರ್‌ ಸೇರಿದಂತೆ ವಿವಿಧ ಮಹಾನಗರ ಪಾಲಿಕೆಗಳಿಗೆ ವಿವಿಧ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.

ಸಮಾಲೋಚನಾ ಸಭೆ ನಿರ್ಣಯಗಳು
-ಎಲ್ಲ ಮಹಾನಗರ ಪಾಲಿಕೆಗಳಲ್ಲಿ ವಾರ್ಡ್‌ ಸಮಿತಿ ರಚನೆಗೆ ಪಿಐಎಲ್‌
-ಪಾಲಿಕೆ ಸದಸ್ಯರ ವೀಟೋ ಅಧಿಕಾರ ರದ್ದುಗೊಳಿಸುವುದು
-ಪ್ರತಿ ತಿಂಗಳು ವಾರ್ಡ್‌ ಸಮಿತಿ ಸಭೆಗೆ ದಿನಾಂಕ ನಿಗದಿ
-ಪ್ರತಿ ವಾರ್ಡ್‌ನಲ್ಲಿ ಮಾಹಿತಿ ಕೇಂದ್ರ ಸ್ಥಾಪನೆ
-ಮೂರು ಬಾರಿ ಸಭೆಗೆ ಗೈರಾಗುವ ಪಾಲಿಕೆ ಸದಸ್ಯರ ಅನರ್ಹ
-ವಾರ್ಡ್‌ ಸಮಿತಿ ನಿರ್ಣಯ ಪಾಲಿಸದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರ
-ಅವಿಶ್ವಾಸ ನಿರ್ಣಯ ಮಂಡಿಸುವ ಅಧಿಕಾರ
-ಕಡ್ಡಾಯವಾಗಿ ಪ್ರಗತಿ ಪರಿಶೀಲನಾ ವರದಿ ಮಂಡನೆ

Advertisement

Udayavani is now on Telegram. Click here to join our channel and stay updated with the latest news.

Next