Advertisement

ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ನಿರ್ಧಾರ; ಬಸ್‌ಗಳ ಫುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣ

03:38 PM Aug 08, 2022 | Team Udayavani |

ಮಹಾನಗರ: ನಗರದಲ್ಲಿ ಸಂಚರಿಸುವ ಖಾಸಗಿ ಬಸ್‌ಗಳಲ್ಲಿ ಫುಟ್‌ಬೋರ್ಡ್‌ನಲ್ಲಿ ನಿಂತು ಕೆಲವರು ಪ್ರಯಾಣಿಸುತ್ತಿದ್ದು, ಅವರ ಬಗ್ಗೆ ನಿಗಾ ಇಡಲು ಸಾರಿಗೆ ಇಲಾಖೆ ನಿರ್ಧರಿಸಿದೆ. ವಿಶೇಷ ತಂಡ ರಚಿಸಿ ನಗರದ ವಿವಿಧ ಕಡೆ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ.

Advertisement

ಸ್ಟೇಟ್‌ಬ್ಯಾಂಕ್‌- ಬಿ.ಸಿ.ರೋಡ್‌ ನಡುವೆ ಸಂಚರಿಸುವ ಖಾಸಗಿ ಬಸ್ಸೊಂದರ ಫ‌ುಟ್‌ಬೋರ್ಡ್‌ ನಲ್ಲಿ ಮಹಿಳೆಯರು ಸಹಿತ ಪ್ರಯಾಣಿಕರು ನೇತಾಡಿಕೊಡು ಪ್ರಯಾಣಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಬಿಕರ್ನಕಟ್ಟೆ – ಕುಲಶೇಖರ – ನೀರುಮಾರ್ಗ – ಮಲ್ಲೂರು – ಬೆಂಜನಪದವು – ಕಲ್ಪನೆ ಮಾರ್ಗವಾಗಿ ಬಿ.ಸಿ.ರೋಡ್‌ಗೆ ಸಂಚರಿಸುವ ಈ ಬಸ್‌ ಪ್ರಯಾಣಿಕರಿಂದ ತುಂಬಿ ತುಳುಕಿದ್ದು, ಕೆಲವು ಮಂದಿ ಅಪಾಯಕಾರಿಯಾಗಿ ಅನಿವಾರ್ಯವೆಂಬಂತೆ ಫ‌ುಟ್‌ ಪಾತ್‌ನಲ್ಲೇ ಪ್ರಯಾಣಿಸಿರುವ ದೃಶ್ಯ ವೀಡಿಯೋದಲ್ಲಿ ದಾಖಲಾಗಿತ್ತು. ಅದೇ ರೀತಿ ನಗರದಲ್ಲಿ ಸಂಚರಿಸುವ ಕೆಲವೊಂದು ಸಿಟಿ ಬಸ್‌ಗಳಲ್ಲಿಯೂ ಫುಟ್‌ಬೋರ್ಡ್‌ ನಲ್ಲಿ ನಿಂತು ಪ್ರಯಾಣಿಕರು ಸಂಚರಿಸುತ್ತಿರುವುದು ಕಂಡುಬರುತ್ತಿದೆ.

ಎಚ್ಚರಿಕೆ ನೀಡಿದರೂ ನಿರ್ಲಕ್ಷ್ಯ

ಖಾಸಗಿ-ಸಿಟಿ ಬಸ್‌ಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವಕರು ಹೆಚ್ಚಾಗಿ ಫುಟ್‌ಬೋರ್ಡ್‌ಗಳಲ್ಲಿ ನಿಂತಿರುವುದು ಸಾಮಾನ್ಯವಾಗಿಬಿಟ್ಟಿದೆ. ಬಸ್‌ನಲ್ಲಿ ಕುಳಿತುಕೊಳ್ಳಲು ಸೀಟ್‌ ಇದ್ದರೂ ಕೆಲವೊಂದು ಬಾರಿ ನಿರ್ವಾಹಕರು ಎಚ್ಚರಿಕೆ ನೀಡಿದರೂ ಕೆಲವೊಬ್ಬರು ಫುಟ್‌ಬೋರ್ಡ್‌ ಬಿಟ್ಟು ಕದಲುತ್ತಿಲ್ಲ. ಅದರಲ್ಲೂ ಶಾಲಾ-ಕಾಲೇಜು ಸಮಯ ಬೆಳಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳು ಫುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣ ಮಾಡುತ್ತಿದ್ದಾರೆ. ಸಾರಿಗೆ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಪ್ರತ್ಯೇಕ ತಂಡದೊಂದಿಗೆ ಕಾರ್ಯಾಚರಣೆ ನಡೆಸಲಿದೆ. ಸಾರಿಗೆ ನಿಯಮದ ಪ್ರಕಾರ ಬಸ್‌ ಫುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣ ಮಾಡುವುದು ಅಪರಾಧವಾಗಿದೆ. ನಗರದಲ್ಲಿ ಸದ್ಯ 340ಕ್ಕೂ ಮಿಕ್ಕಿ ಸಿಟಿ ಬಸ್‌ಗಳಿವೆ. ಬಹುತೇಕ ಬಸ್‌ ಗಳಲ್ಲಿ ಸ್ವಯಂಚಾಲಿತ ಬಾಗಿಲುಗಳಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next