ಬೆಂಗಳೂರು: ಸಾರ್ವಜನಿಕ ಹಕ್ಕುಪತ್ರ ಸಮಿತಿಯ ಕಾರ್ಯಚಟುವಟಿಕೆಗೆ ಅಡ್ಡಿ ಪಡಿಸಿರುವ ಸ್ಪೀಕರ್ ವಿರುದ್ಧ ಹಕ್ಕು ಚ್ಯುತಿ ಮಂಡನೆ ಕುರಿತು ಮಂಗಳವಾರ ಅಧಿಕೃತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪಿಎಸಿ ಅಧ್ಯಕ್ಷ ಎಚ್.ಕೆ ಪಾಟೀಲ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸದನ ಸಮಿತಿಯ ಸದಸ್ಯರ ಹಕ್ಕುಗಳಿಗೆ ಇದೇ ಮೊದಲ ಬಾರಿ ಚ್ಯುತಿಯಾಗಿದೆ. ಹೀಗಾಗಿ ಮಂಗಳವಾರ ನಮ್ಮಸಮಿತಿ ಸಭೆ ನಡೆಯಲಿದೆ. ಆ ಸಮಿತಿ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಸ್ಪೀಕರ್ ನಡೆ ಸಂವಿಧಾನದ ನಿಯಮಕ್ಕೆ ತದ್ವಿರುದ್ಧವಾಗಿದೆ. ನಿಯಮಗಳನ್ನ ಗಾಳಿಗೆ ತೂರಿ ಈ ರೀತಿ ನಡೆದುಕೊಂಡಿದ್ದಾರೆ. ಯಾವುದೇ ಅವ್ಯವಹಾರ ಆರೋಪ ಬಂದರೆ ಲೆಕ್ಕಪತ್ರ ಸಮಿತಿಗೆ ಅದನ್ನ ತಪಾಸಣೆ ಮಾಡುವ ಹಕ್ಕಿದೆ. ಸಮಿತಿಯ ಪರಿಶೀಲನೆಗೆ ಸ್ಪೀಕರ್ ಕಚೇರಿ ತಡೆಯೊಡ್ಡಿರುವುದನ್ನು ಗಮನಿಸಿದರೆ ಭ್ರಷ್ಟಾಚಾರಿಗಳನ್ನು ರಕ್ಷಿಸುವಂತಿದೆ. ಹೀಗಾಗಿ ಸ್ಪೀಕರ್ ವಿರುದ್ದ ಹಕ್ಕುಚ್ಯುತಿ ಮಂಡಿಸುತ್ತೇವೆ ಎಂದು ಹೇಳಿದರು.
ಕಾನೂನು ಹೋರಾಟ:
ಇದೇ ವೇಳೆ ರಾಜ್ಯ ಚುನಾವಣಾ ಆಯೋಗ ಗ್ರಾ.ಪಂ ಚುನಾವಣೆಯನ್ನು ಮುಂದೂಡಿರುವುದರ ವಿರುದ್ಧ ಕಾನೂನು ಹೋರಾಟ ನಡೆಸಲಿದ್ದೇವೆ ಎಂದು ಹೇಳಿದರು.
ಆಯೋಗ ಕೋವಿಡ್ ನೆಪ ಹೇಳಿ ಚುನಾವಣೆ ಮುಂದೂಡಿಕೆ ಮಾಡಿರುವುದು ಸರಿಯಲ್ಲ. ಬಸ್, ಕಾರು ಎಲ್ಲ ಓಡಾಡುತ್ತಿಲ್ಲವೇ. ಲಾಕ್ ಡೌನ್ ಅಂತ ಏನಾದರೂ ಸ್ಥಗಿತಗೊಂಡಿದಿಯಾ? ಈಗ ಎಲ್ಲವನ್ನು ಸಡಿಲಗೊಳಿಸಲಾಗಿದೆ. ಎಲ್ಲದಕ್ಕೂ ಬಿಟ್ಟು ಚುನಾವಣೆಗೆ ಮಾತ್ರ ಲಾಕ್ ಡೌನ್ ನೆಪ ಹೇಳುವುದು ಸರಿಯಲ್ಲ.
ಪಂಚಾಯತಿಗಳಿಗೆ ನಾಮನಿರ್ದೇಶನ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಸಂವಿಧಾನ ಹಾಗೂ ಪಂಚಾಯತ್ ರಾಜ್ ಅಧಿನಿಯಮದಲ್ಲೂ ಅವಕಾಶವಿಲ್ಲ. ಹೀಗಿದ್ದರೂ ಚುನಾವಣೆ ಮುಂದೂಡಲಾಗಿದೆ. ಇದು ಸಂವಿಧಾನ ಬಾಹಿರವಾದುದು ಇದರ ವಿರುದ್ಧ ಶೀಘ್ರದಲ್ಲೇ ಕೋರ್ಟ್ ಮೆಟ್ಟಿಲೇರುತ್ತೇವೆ. ಈ ಕುರಿತು ಈಗಾಗಲೇ ನಮ್ಮ ಪಕ್ಷದಲ್ಲಿ ನಿರ್ಧಾರ ತೆಗೆದುಕೊಂಡಿದ್ದೇವೆ. ಕಾನೂನು ಹೋರಾಟ ಮಾಡದೇ ಬೇರೆ ದಾರಿಯಿಲ್ಲ ಎಂದು ಹೇಳಿದರು.