ಚಿತ್ರದುರ್ಗ: ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಜೂ. 11 ರಿಂದ ಪ್ರತಿ ಯೂನಿಟ್‌ಗೆ 10 ಕೆಜಿ ಅಕ್ಕಿ, ಕುಟುಂಬಕ್ಕೆ 2 ಕೆಜಿ ಬೇಳೆ ಹಾಗೂ ಗೋದಿ ವಿತರಿಸಲಿದ್ದು, ಈ ನಿಟ್ಟಿನಲ್ಲಿ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ಜಿಲ್ಲೆಯ ಹಿರಿಯೂರು ಹಾಗೂ ಚಿತ್ರದುರ್ಗ ಪಡಿತರ ಸಗಟು ಆಹಾರ ಧಾನ್ಯ ಮಳಿಗೆಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಗಳವಾರದ ನಂತರ ಆಹಾರ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಐದು ತಂಡಗಳನ್ನಾಗಿ ಮಾಡಿ ರಾಜ್ಯಾದ್ಯಂತ ಆಹಾರ ವಿತರಣೆಗೆ ಮುನ್ನ ಅಧಿಕಾರಿಗಳು ಎಲ್ಲ ಜಿಲ್ಲೆ ಹಾಗೂ ತಾಲೂಕುಗಳ ಗೋದಾಮುಗಳನ್ನು ತಪಾಸಣೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದರು.
ಕಡುಬಡವರಿಗೆ, ಹೊರರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಆಗಮಿಸಿರುವ ವಲಸೆ ಕಾರ್ಮಿಕರಿಗೆ, ಕಾರ್ಡ್ ಇಲ್ಲದ ಕುಟುಂಬಕ್ಕೂ ಕೇವಲ ಆಧಾರ್ ಕಾರ್ಡ್ ಇದ್ದರೆ ಸಾಕು 10 ಕೆ.ಜಿ ಅಕ್ಕಿ, ಗೋದಿ, ಬೇಳೆ, ಕಡ್ಲೆಕಾಳು ವಿತರಿಸಲಾಗುವುದು. ಹೊರರಾಜ್ಯ ಮತ್ತು ಹೊರಜಿಲ್ಲೆಗಳಿಂದ ರಾಜ್ಯಕ್ಕೆ ಆಗಮಿಸಿರುವ 3 ಲಕ್ಷದ 80 ಸಾವಿರ ಜನರಿಗೆ ಎರಡು ತಿಂಗಳ ಆಹಾರ ಪದಾರ್ಥಗಳನ್ನು ವಿತರಿಸಲಾಗಿದೆ. ಜೂನ್ ಅಂತ್ಯದವರೆಗೆ ಆಹಾರ ಪದಾರ್ಥಗಳ ವಿತರಣೆಗೆ ಕ್ರಮವಹಿಸಿದ್ದು, ವಲಸೆ ಕಾರ್ಮಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬಡಜನರಿಗಾಗಿ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿದೆ. ಅನುಕೂಲ ಇರುವ ಕುಟುಂಬ, ಸರ್ಕಾರಿ ನೌಕರರು, ನಿವೃತ್ತ ಸರ್ಕಾರಿ ನೌಕರರು ಹಾಗೂ ಕಾನೂನು ಬಾಹಿರವಾಗಿ ಪಡಿತರ ಚೀಟಿಗಳನ್ನು ಹೊಂದಿರುವವರು ಕಡ್ಡಾಯವಾಗಿ 30 ರೊಳಗೆ ಹಿಂದಿರುಗಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಆಹಾರ, ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಧುಸೂದನ್, ತಹಶೀಲ್ದಾರ್ ಜೆ.ಸಿ. ವೆಂಕಟೇಶಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಉಮಾಶಂಕರ್, ಅಶೋಕ್ ಇದ್ದರು.