Advertisement

Karnataka ಸರ್ಕಾರದ ವಿರುದ್ಧ ಹೋರಾಟಕ್ಕೆ ದಲಿತ ಪರ ಚಿಂತಕರ ನಿರ್ಧಾರ

09:25 PM Sep 11, 2023 | Team Udayavani |

ಬೆಂಗಳೂರು: ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಮೂರು ಹಂತದ ಹೋರಾಟಕ್ಕೆ ದಲಿತ ಪರ ಚಿಂತಕರು ನಿರ್ಧರಿಸಿದ್ದು, ಇದಕ್ಕೆ ಬಿಜೆಪಿ ಸಹ ಬೆಂಬಲ ವ್ಯಕ್ತಪಡಿಸಿದೆ.

Advertisement

ಎಸ್‌ಟಿ, ಎಸ್‌ಟಿ ಮೀಸಲು ಹಣ ಮುಳುಗಿಸುತ್ತಿರುವ ರಾಜ್ಯ ಸರ್ಕಾರ ಎಂಬ ವಿಷಯ ಕುರಿತು “ಸಿಟಿಜನ್ಸ್‌ ಫಾರ್‌ ಸೋಶಿಯಲ್‌ ಜಸ್ಟೀಸ್‌’ ಸಂಘಟನೆಯು ಬೆಂಗಳೂರಿನ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಸಭಾಂಗಣದಲ್ಲಿ ವಿಚಾರ ಸಂಕಿರಣ ಹಮ್ಮಿಕೊಂಡಿತ್ತು. ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿರುವ 11,144 ಕೋಟಿ ರೂ. ಅನುದಾನವನ್ನು ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳಿಗೆ ಹಿಂಪಡೆಯುವವರೆಗೆ ಹೋರಾಟ ನಡೆಸಲು ಒಕ್ಕೊರಲ ಅಭಿಪ್ರಾಯ ಕೇಳಿಬಂತು.

ವಿಚಾರ ಸಂಕಿರಣದ ನಂತರ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದ ಬಿಜೆಪಿ ನಾಯಕರು ಪರಿಶಿಷ್ಟರ ಹೋರಾಟಕ್ಕೆ ಬೆಂಬಲ ಪ್ರಕಟಿಸಿದ್ದು, ಮೊದಲ ಹಂತದಲ್ಲಿ ಸೆ.25 ರಿಂದ ಅ.10 ರವರೆಗೆ ಜಿಲ್ಲಾ ಕೇಂದ್ರಗಳಲ್ಲಿ ಜನಾಂದೋಲನ ನಡೆಯಲಿದೆ. ಅಷ್ಟರಲ್ಲಿ ಈ ಅನುದಾನವನ್ನು ಎಸ್‌ಸಿ, ಎಸ್‌ಟಿಗೆ ಬಳಸದಿದ್ದರೆ ಎರಡನೇ ಹಂತದಲ್ಲಿ ಅ.11 ರಿಂದ ಅ.25 ರವರೆಗೆ ಸಚಿವರು ಹಾಗೂ 224 ಶಾಸಕರ ಮನೆಗಳಿಗೆ ಮುತ್ತಿಗೆ ಹಾಕಲಾಗುತ್ತದೆ.

ದಲಿತಪರ ಹೋರಾಟಗಾರರಾದ ದಿ.ಪ್ರೊ.ಬಿ.ಕೃಷ್ಣಪ್ಪ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಹರಿಹರದಿಂದ ಪಾದಯಾತ್ರೆ ಆರಂಭಿಸಿ, ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ. ಮೂರನೇ ಹಂತದ ಈ ಹೋರಾಟವು ನವೆಂಬರ್‌ 2ನೇ ವಾರದಲ್ಲಿ ನಡೆಯಲಿದೆ ಎಂದು ವಿವರಿಸಿದೆ.

ಅಕ್ಕಿ, ಬೇಳೆಗೆ ಕೈಯೊಡ್ಡುವಂತೆ ಮಾಡಿದ ಸರ್ಕಾರ: ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ನಮ್ಮ ಸರ್ಕಾರ ಇದ್ದಾಗ ಗಂಗಾ ಕಲ್ಯಾಣ ಯೋಜನೆಯಡಿ ಎಸ್‌ಸಿ ಜನಾಂಗಕ್ಕೆ 10,700 ಹಾಗೂ ಎಸ್‌ಟಿ ಜನಾಂಗದ ಜಮೀನುಗಳಲ್ಲಿ 7500 ಕೊಳವೆಬಾವಿ ಕೊರೆಸಿದ್ದೆವು, ಆದಾಯ ತರಬಲ್ಲ ಹಾಗೂ ಆಸ್ತಿ ಸೃಷ್ಟಿಸುವ ಕಾರ್ಯವನ್ನು ಎಸ್‌ಸಿಪಿ, ಟಿಎಸ್‌ಪಿ ಹಣದಲ್ಲಿ ನಮ್ಮ ಸರ್ಕಾರ ಮಾಡಿತ್ತು. ಈ ಸರ್ಕಾರ ಬೊಕ್ಕಸದಲ್ಲಿರುವ ಹಣ ಹಂಚಿ ಮತ ಪಡೆಯುವ ನೀಚ ಕೆಲಸ ಮಾಡುತ್ತಿದೆ. ಅಕ್ಕಿ, ಬೇಳೆಗೆ ಕೈಯೊಡ್ಡುವಂತೆ ಮಾಡುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

Advertisement

ಮಲ್ಲಿಕಾರ್ಜುನ ಖರ್ಗೆ ಹೇಗೆ ಸುಮ್ಮನಿದ್ದಾರೆ?: ಡೋಂಗಿ ಮಾತುಗಳನ್ನಾಡಿ ಬೊಕ್ಕಸದಲ್ಲಿರುವ ಹಣವನ್ನು ಮನಸೋಇಚ್ಛೆ ಖರ್ಚು ಮಾಡುವುದಲ್ಲ. ಕಲಬುರಗಿಯಿಂದ ದೆಹಲಿವರೆಗೆ ಅಂಬೆಗಾಲಿಟ್ಟು ಹೋಗಿರುವ ಎಐಸಿಸಿ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಇದನ್ನೆಲ್ಲಾ ಹೇಗೆ ಸಹಿಸಿಕೊಂಡಿದ್ದಾರೆ? ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ವರ್ಗಾಯಿಸಲು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡೆ ಎನ್ನುವ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಇನ್ನೂ ಏಕೆ ರಾಜೀನಾಮೆ ನೀಡಿಲ್ಲ? ಎಂದು ಪ್ರಶ್ನಿಸಿದರು.

ಶ್ರೀರಾಮುಲು ಸೋಲಿಗೆ ಬೇಸರ
ಎಸ್‌ಟಿಯಲ್ಲಿನ 52 ಉಪಸಮುದಾಯ ಹಾಗೂ ಎಸ್‌ಸಿಯಲ್ಲಿನ 101 ಉಪಜಾತಿಗಳಿಗೆ ಮೀಸಲಾತಿ ಹೆಚ್ಚಳ ಮಾಡಬೇಕೆಂಬ ದಶಕಗಳ ಹೋರಾಟಕ್ಕೆ ಸ್ಪಂದಿಸಿದ್ದೇ ಬಿಜೆಪಿ ಸರ್ಕಾರ ಎಂದ ಮಾಜಿ ಡಿಸಿಎಂ ಬಿ.ಶ್ರೀರಾಮುಲು, ಏನೂ ಮಾಡಲಾರದವರನ್ನು ಗೆಲ್ಲಿಸಿದ ನಮ್ಮದೇ ಜನರು ನಮ್ಮನ್ನು ಸೋಲಿಸಿದ್ದಾರೆ. ಕಣ್ಣೀರು ಹಾಕುವುದು ಬಿಟ್ಟು ಬೇರೇನು ಮಾಡುವುದು? ಎಲ್ಲರಂತೆ ನಮಗೂ ಅನ್ಯಾಯ ಎಂದುಕೊಂಡು ರಾಜಕಾರಣ ಬಿಟ್ಟು ಬಿಡೋಣ ಎನಿಸಿಬಿಟ್ಟಿದೆ ಎಂದು ಬೇಸರ ಹೊರಹಾಕಿದರು. ಸಮಾಧಾನ ಹೇಳಿದ ಕಾರಜೋಳ, ನೊಂದುಕೊಳ್ಳುವುದು ಬೇಡ. ಅಂಬೇಡ್ಕರ್‌ ಅವರು ತಮ್ಮ ಇಡೀ ಜೀವನ ಮುಡಿಪಿಡದಿದ್ದರೆ ನಾವ್ಯಾರೂ ರಾಜಕಾರಣಕ್ಕೆ ಬರಲಾಗುತ್ತಿರಲಿಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸಿ, ಮತ್ತೆ ಆಡಳಿತ ಮಾಡುತ್ತೇವೆಂಬ ಗಟ್ಟಿ ಮನಸ್ಸು ಮಾಡಿ. ಲೆಕ್ಕಾಚಾರಗಳಿಂದ ಸೋತಿರಬಹುದು. ಒಳ್ಳೆಯ ಕಾರ್ಯಗಳನ್ನು ಮುಂದುವರಿಸೋಣ ಎಂದು ತಿಳಿಹೇಳಿದರು.

ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ಕೊಡದ ಸಿಎಂ ಸಿದ್ದರಾಮಯ್ಯ, ಕೊರತೆ ಬಜೆಟ್‌ ಮಂಡಿಸಿರುವುದೂ ಅಲ್ಲದೆ, ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಗ್ಯಾರಂಟಿಗೆ ವರ್ಗಾಯಿಸುವ ಮೂಲಕ ದಲಿತರ ತಟ್ಟೆಗೆ ನಾಲಗೆ ಹಾಕಿ, ಹೊಟ್ಟೆ ಮೇಲೆ ಕಾಲಿಟ್ಟಿದೆ. ಇದರ ವಿರುದ್ಧ ದಲಿತ ಸಂಘಟನೆಗಳು ಪಕ್ಷಾತೀತ ಹೋರಾಟ ನಡೆಸಬೇಕು.
-ಪಿ.ರಾಜೀವ, ಮಾಜಿ ಶಾಸಕ

ಜನರಿಗೆ ಮೀನು ಕೊಡುವ ಕಾಂಗ್ರೆಸ್‌ ಮೀನು ಹಿಡಿಯುವುದನ್ನು ಮಾತ್ರ ಕಲಿಸುತ್ತಿಲ್ಲ. ಕಾಂಗ್ರೆಸ್‌ನ ಇಂತಹ ಗೋಸುಂಬೆತನ, ಮೋಸದ ಆರ್ಥಿಕತೆಯನ್ನು ಜನರ ಮುಂದಿಟ್ಟು ಪರ್ಯಾಯ ನೀತಿ ರೂಪಿಸಬೇಕಿದೆ. ಎಲ್ಲಿಯವರೆಗೆ ಅವರ ಮತಬ್ಯಾಂಕ್‌ನಿಂದ ಹೊರಬರುವುದಿಲ್ಲವೋ ಅಲ್ಲಿಯವರೆಗೂ ಬಡತನದಿಂದಲೂ ಹೊರಬರುವುದಿಲ್ಲ.
-ಎನ್‌.ಮಹೇಶ್‌, ಮಾಜಿ ಸಚಿವ

ಸುಳ್ಳು ಹೇಳಿ, ಹೇಗೆ ಸರ್ಕಾರ ರಚಿಸಬಹುದು ಎಂಬುದಕ್ಕೆ ಕಾಂಗ್ರೆಸ್‌ ನಿದರ್ಶನ. ಈ ಸರ್ಕಾರ ನಮ್ಮ ಭಾಷಣ ಕೇಳಲ್ಲ. ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ನಮ್ಮೆಲ್ಲರ ಬಂಧನ ಆದರಷ್ಟೇ ಬಗ್ಗುವುದು. ಅಷ್ಟು ಹಣ ಎಸ್‌ಸಿ, ಎಸ್‌ಟಿಗೆ ವಾಪಸ್‌ ಕೊಡುವವರೆಗೆ ಹೋರಾಟ ಬಿಡಬಾರದು.
-ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next