Advertisement

ಮಲೇಷ್ಯಾ ಪ್ರವಾಸಕ್ಕೆ ಹೋಗದಿರಲು ತೀರ್ಮಾನ?

10:54 PM Oct 30, 2019 | Lakshmi GovindaRaju |

ಬೆಂಗಳೂರು: ಒಂದೊಮ್ಮೆ ಮಾಜಿ ಸಿಎಂ ಎಚ್‌.ಡಿ. ಕುಮಾರ ಸ್ವಾಮಿ ಯವರು ಮಲೇಷ್ಯಾ ಪ್ರವಾಸಕ್ಕೆ ಕರೆದರೆ ಹೋಗದಿರಲು ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯರು ತೀರ್ಮಾನಿಸಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ತಮ್ಮ ಶಿಫಾರಸು ಹಾಗೂ ಮನವಿಗಳಿಗೆ ಸ್ಪಂದಿಸಲಿಲ್ಲ ಎಂದು ಬೇಸರಗೊಂಡಿರುವ ಮೇಲ್ಮನೆ ಸದಸ್ಯರು ವಿಧಾನಸೌಧದಲ್ಲಿ ಬುಧವಾರ ಸಭೆ ನಡೆಸಿ ಈ ನಿರ್ಣಯ ಕೈಗೊಂಡರು ಎಂದು ಹೇಳಲಾಗಿದೆ.

Advertisement

ಪ್ರವಾಹ ಸಂದರ್ಭದಲ್ಲಿ ವಿದೇಶ ಪ್ರವಾಸ ಹೋದರೆ ಜನರಿಂದ ಆಕ್ರೋಶ ವ್ಯಕ್ತವಾಗುತ್ತದೆ. ಹೀಗಾಗಿ, ಬೇಡ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಹೇಳಲಾಗಿದೆ. ಹಿರಿಯ ನಾಯಕ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 17 ಪರಿಷತ್‌ ಸದಸ್ಯರ ಪೈಕಿ 8 ಮಂದಿ ಹಾಜರಿದ್ದರು.

ದೇವೇಗೌಡರ ಕುಟುಂಬದ ಆಪ್ತ ತಿಪ್ಪೇಸ್ವಾಮಿ ಸಭೆಯಲ್ಲಿ ಪಾಲ್ಗೊಂಡಿದ್ದು ಅಚ್ಚರಿ ಮೂಡಿಸಿದೆ. ಆದರೆ, ಎಲ್ಲ ಸದಸ್ಯರು ತಮ್ಮ ಭಾವನೆ, ಅಸಮಾಧಾನವನ್ನು ಸಭೆಯಲ್ಲಿ ಹೇಳಿಕೊಂಡಿದ್ದು, ಅದನ್ನು ಎಚ್‌.ಡಿ.ದೇವೇಗೌಡರಿಗೆ ತಲುಪಿಸುವ ಹೊಣೆಗಾರಿಕೆ ಯನ್ನು ತಿಪ್ಪೇಸ್ವಾಮಿಯವರಿಗೆ ನೀಡಲಾಗಿದೆ. ಟಿ.ಎ.ಶರವಣ, ಅಪ್ಪಾಜಿಗೌಡ, ತೂಪಲ್ಲಿ ಚೌಡರೆಡ್ಡಿ, ಮರಿತಿಬ್ಬೇಗೌಡ, ಶೀಕಂಠೇ ಗೌಡ, ಸಿ.ಆರ್‌.ಮನೋಹರ್‌ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪಕ್ಷದ ನಾಯಕರು, ಶಾಸಕರಂತೆಯೇ ಪರಿಷತ್‌ ಸದಸ್ಯರನ್ನೂ ಗೌರವದಿಂದ ನಡೆಸಿಕೊಳ್ಳಬೇಕು. ಪಕ್ಷ ಸಂಘಟನೆ ಸೇರಿ ಪ್ರಮುಖ ತೀರ್ಮಾನಗಳ ವಿಚಾರದಲ್ಲಿ ಚರ್ಚಿಸಬೇಕು. ಸಲಹೆ-ಸೂಚನೆ ಪಡೆಯಬೇಕು ಎಂದು ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.

ಬಂಡಾಯವಲ್ಲ: ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಟಿ.ಎ.ಶರವಣ, ನಮ್ಮದು ಬಂಡಾಯ ಸಭೆಯಲ್ಲ. ದೇವೇಗೌಡರಿಗೆ ಹೇಳಿಯೇ ಸಭೆ ಮಾಡಿದ್ದೇವೆ. ಪರಿಷತ್‌ನಲ್ಲಿ ನಮ್ಮ ನಾಯಕ ಬಸವರಾಜ ಹೊರಟ್ಟಿ ಅವರು ಅಧಿಕೃತವಾಗಿ ಕರೆದಿದ್ದ ಸಭೆ. ನಮ್ಮ, ನಮ್ಮ ಬೇಸರ ಹೇಳಿಕೊಂಡಿದ್ದೇವೆ. ಹೊರಟ್ಟಿಯವರು ಅವರ ನೋವು ಹೇಳಿಕೊಂಡಿದ್ದಾರೆ. ಎಲ್ಲವನ್ನೂ ತಿಪ್ಪೇಸ್ವಾಮಿಯವರು ದೇವೇಗೌಡರಿಗೆ ತಲುಪಿಸಲಿದ್ದಾರೆ ಎಂದರು.

Advertisement

ಚಂಡಿಕಾ ಯಾಗ: ಇದೇ ಸಂದರ್ಭದಲ್ಲಿ ಜೆಡಿಎಸ್‌ ಕಚೇರಿ ಯಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆವರೆಗೆ ಚಂಡಿಕಾ ಯಾಗ ನಡೆಸಿರುವುದು ಕುತೂಹಲ ಮೂಡಿಸಿದೆ. ದೇವೇಗೌಡರ ಕುಟುಂಬ ಸದಸ್ಯರು ಪಾಲ್ಗೊಂಡಿದ್ದ ಈ ಪೂಜೆಗೆ ಪಕ್ಷದ ಇತರ ನಾಯಕರಿಗೆ ಪ್ರವೇಶ ಇರಲಿಲ್ಲ ಎಂದು ಹೇಳಲಾಗಿದೆ. ಅಮಾವಾಸ್ಯೆ ನಂತರ ಅಥವಾ ಮುಂಚೆ ಎಚ್‌.ಡಿ.ರೇವಣ್ಣ ಅವರು ಕಚೇರಿ ಅಥವಾ ಮನೆಯಲ್ಲಿ ಪೂಜೆ ಮಾಡುವುದು ಸಹಜ. ಶತ್ರು ಸಂಹಾರ ಹಾಗೂ ಅಭಿವೃದ್ಧಿಗಾಗಿ ಯಾಗ ನಡೆಸಲಾಗಿದೆ ಎಂದು ಪಕ್ಷದ ನಾಯಕರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next