Advertisement

School College ಶಿಕ್ಷಕರು, ಸಿಬಂದಿ ನೇಮಕಕ್ಕೆ ನಿರ್ಣಯ

11:31 PM Dec 06, 2023 | Team Udayavani |

ಕೋಟ: ಕನ್ನಡ ಮಾಧ್ಯಮ ಶಾಲೆಗಳು ಉಳಿದರೆ ಕನ್ನಡ ಭಾಷೆ ಉಳಿದು, ಬೆಳೆಯಲು ಸಾಧ್ಯ. ಆದ್ದರಿಂದ ಅನುದಾನಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಲ್ಲಿ ಖಾಲಿ ಹುದ್ದೆಗಳಿಗೆ ಶಿಕ್ಷಕ, ಉಪನ್ಯಾಸಕ ಮತ್ತು ಅಗತ್ಯ ಸಿಬಂದಿಯನ್ನು ನೇಮಿಸಿಕೊಳ್ಳಲು ಸರಕಾರ ಅನುಮತಿ ನೀಡಬೇಕು ಮತ್ತು ಅನುದಾನಿತ ಶಾಲಾ-ಕಾಲೇಜುಗಳ ಹುದ್ದೆಗಳನ್ನು ಅನುದಾನದ ವ್ಯಾಪ್ತಿಗೆ ತರಲು ಅಗತ್ಯ ತಿದ್ದುಪಡಿ ತರಬೇಕು ಎಂದು ಬುಧವಾರ ಕೋಟದಲ್ಲಿ ನಡೆದ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

Advertisement

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನಿರ್ಣಯವನ್ನು ಮಂಡಿಸಿ, ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಅನುಮೋದಿಸಿದರು. ನಿರ್ಣಯ ವನ್ನು ಜಿಲ್ಲಾ ಧಿಕಾರಿಗಳ ಮೂಲಕ ಸರಕಾರಕ್ಕೆ ಕಳುಹಿಸುವುದಾಗಿ ತೀರ್ಮಾನಿಸಲಾಯಿತು.ಸಾಹಿತ್ಯ ಚಿಂತಕ ಕಾಪು ರಾಘವೇಂದ್ರ ರಾವ್‌ ಸಮಾರೋಪ ಭಾಷಣ ಮಾಡಿ,ಕನ್ನಡ ಪ್ರೀತಿಯ ಮೂಲಕ ನಮ್ಮ ನಾಡು ನುಡಿಯನ್ನು ಕಟ್ಟಿ ಕೊಡುವ ಕೆಲಸವಾಗಬೇಕು ಎಂದರು.

ಸಮ್ಮೇಳನ ಶ್ಲಾಘನೀಯ
ಸಮ್ಮೇಳನಾಧ್ಯಕ್ಷ ಬಾಬು ಶಿವ ಪೂಜಾರಿ ಸಮ್ಮೇಳನದ ಬಗ್ಗೆ ಪ್ರತಿಸ್ಪಂದನೆ ನೀಡಿ, ಕಸಾಪದ ಚಟುವಟಿಕೆಗಳು, ತೆರೆದ ಮನಸ್ಸುಗಳು ಕನ್ನಡ ಉಳಿವಿಗೆ ಪ್ರಯ ತ್ನಿಸುತ್ತಿರುವುದು ಶ್ಲಾಘನೀಯ. ಕನ್ನಡದ ಮಾಧ್ಯಮ ಶಾಲೆಗಳು ಮುಚ್ಚುವಂತಹ ಪರಿಸ್ಥಿತಿ ಬಂದಿರುವುದು ವಿಷಾದನೀಯ. ಮುಂಬಯಿಯಲ್ಲಿನ ಕನ್ನಡ ಶಾಲೆಗಳು ಕೂಡ ಮುಚ್ಚಿದ್ದರೂ ಪರ್ಯಾಯವಾಗಿ ಕನ್ನಡ ಸಂಘಗಳ ಮೂಲಕ ಕನ್ನಡ ಪ್ರಗತಿಯಾಗುತ್ತಿರುವುದು ಸಂತಸದ ವಿಷಯ. ಈ ಸಮ್ಮೇಳನದ ಸಂಘಟನೆ ಅತ್ಯಂತ ಯಶಸ್ವಿಯಾಗಿದೆ ಎಂದರು.

ಗೀತಾನಂದ ಫೌಂಡೇಶನ್‌ ಪ್ರವರ್ತಕ ಆನಂದ ಸಿ. ಕುಂದರ್‌ ಸಾಧಕರನ್ನು ಸಮ್ಮಾನಿಸಿದರು.ಕಸಾಪ ಉಡುಪಿ ಜಿಲ್ಲಾ ಸ್ಥಾಪಕಾಧ್ಯಕ್ಷ ಎ.ಎಸ್‌.ಎನ್‌. ಹೆಬ್ಟಾರ್‌, ಕೋಟ ವಿದ್ಯಾ ಸಂಘದ ಅಧ್ಯಕ್ಷ ಸಿಎ ಪಿ. ಪ್ರಭಾಕರ ಮಯ್ಯ, ಕಾರ್ಯದರ್ಶಿ ಎಂ. ರಾಮದೇವ ಐತಾಳ, ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಮನೋಹರ ಪಿ., ತಾಲೂಕು ಕಸಾಪ ಅಧ್ಯಕ್ಷರಾದ ಬ್ರಹ್ಮಾವರದ ರಾಮಚಂದ್ರ ಐತಾಳ, ಉಡುಪಿಯ ರವಿರಾಜ ಎಚ್‌.ಪಿ., ಕುಂದಾಪುರ ಡಾ| ಉಮೇಶ ಪುತ್ರನ್‌, ಕಾರ್ಕಳದದ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಕಾಪುವಿನ ಪುಂಡಲೀಕ ಮರಾಠೆ, ಹೆಬ್ರಿಯ ಶ್ರೀನಿವಾಸ ಭಂಡಾರಿ ಮತ್ತು ಬೈಂದೂರಿನ ಡಾ| ರಘು ನಾಯಕ್‌, ಸಂಘಟನ ಕಾರ್ಯದರ್ಶಿ ಪಿ.ವಿ. ಆನಂದ ಸಾಲಿಗ್ರಾಮ, ಪೂರ್ಣಿಮಾ ಜನಾರ್ದನ, ನರೇಂದ್ರ ಕುಮಾರ್‌ ಕೋಟ, ಕೋಟ ವಿವೇಕ ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವಡ ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿ, ಸತೀಶ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next