Advertisement

ನ್ಯಾಯಾಂಗ ಹೋರಾಟಕ್ಕೆ ನಿರ್ಧಾರ 

04:08 PM Oct 02, 2017 | Team Udayavani |

ಪುತ್ತೂರು: ಅಕ್ರಮ -ಸಕ್ರಮ, ಕುಮ್ಕಿ ಇನ್ನಿತರ ಜಮೀನಿನ ಕುರಿತ ನಿಖರ ದಾಖಲೆಗಳಿಲ್ಲದೆ ಸರಕಾರದ ಅಧಿಕಾರಿಗಳು ರೈತರ ಮೇಲೆ ಸವಾರಿ ಮಾಡುತ್ತಿದ್ದಾರೆ. ರೈತ ಎಂದರೆ ಅಪರಾಧಿ ಎಂಬ ಭಾವನೆಯಲ್ಲಿ ನೋಡಲಾಗುತ್ತಿದೆ ಎಂದು ಕುಮ್ಕಿ ಹೋರಾಟ ಸಮಿತಿ ಸಂಚಾಲಕ ಎಂ.ಜಿ. ಸತ್ಯನಾರಾಯಣ ಆರೋಪಿಸಿದರು.

Advertisement

ಕುಮ್ಕಿ ಹಾಗೂ ಇನ್ನಿತರ ಜಾಗಗಳಲ್ಲಿ ವಾಸ್ತವ್ಯ ಹೊಂದಿರುವ ರೈತರಿಗೆ ಕಂದಾಯ ಇಲಾಖೆಯಿಂದ ನೋಟಿಸ್‌ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ರವಿವಾರ ಕಿಸಾನ್‌ ಸಂಘದ ಕಚೇರಿಯಲ್ಲಿ ಆಯೋಜಿಸಲಾದ ರೈತರ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.

ಸರಕಾರದ ಬಳಿ ನಿಖರ ದಾಖಲೆಗಳಿಲ್ಲದೆ ಯಾರು ಸರಿ, ಯಾರು ತಪ್ಪಿತಸ್ಥರು ಎಂದು ತಾವೇ ನಿರ್ಧಾರ ಮಾಡಿ ರೈತರ ಮೇಲೆ ಸವಾರಿ ಮಾಡಲಾಗುತ್ತಿದೆ. ಸರಕಾರ ನಮ್ಮ ದಾಖಲೆಗಳನ್ನು ನಮಗೆ ಅಪೂರ್ಣವಾಗಿ ನೀಡಿ ಅದನ್ನು ನೀವೇ ಸಂಪೂರ್ಣ ಮಾಡಿಕೊಳ್ಳಿ ಎಂದು ಸಮಜಾಯಿಷಿ ನೀಡುತ್ತದೆ. ಕರ್ನಾಟಕ ಸರಕಾರದ ಬಳಿ ಇರುವ ಯಾವುದೇ ಭೂ ದಾಖಲೆಗಳು ತಾಳೆಯಾಗುವುದಿಲ್ಲ ಎಂದುಅಭಿಪ್ರಾಯಿಸಿದರು. 

ಸರಕಾರದಿಂದ ವಂಚನೆ
2013ರ ಚುನಾವಣಾ ಪ್ರಣಾಳಿಕೆಯಲ್ಲಿ ರೈತರಿಗೆ ಕುಮ್ಕಿ ಹಕ್ಕು ನೀಡುವುದಾಗಿ ಕಾಂಗ್ರೆಸ್‌ ತಿಳಿಸಿತ್ತು. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಅದೇ ವರ್ಷ ಆ. 13ರಂದು ಕುಮ್ಕಿ ಹಕ್ಕನ್ನು ರೈತರಿಗೆ ಮಂಜೂರು ಮಾಡುವ ಕುರಿತು ಕ್ರಮ ಕೈಗೊಳ್ಳುವುದಾಗಿ ಮುಖ್ಯ ಮಂತ್ರಿಯವರ ಅಧೀನ ಕಾರ್ಯದರ್ಶಿ ಲಿಖೀತವಾಗಿ ನೀಡಿ ದ್ದರು. ಇಷ್ಟಾದರೂ ಇನ್ನೂ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದರು. 120 ವರ್ಷಗಳಿಂದ ರೈತರು ತಮ್ಮ ಪರಂಪರೆಯಲ್ಲಿ ಅನುಭವಿಸಿ ಕೊಂಡು ಬಂದಿರುವ ಕುಮ್ಕಿ ಜಮೀನನ್ನು ಸರಕಾರಿ ಭೂಮಿ ಎಂದು ನಿಗದಿ ಪಡಿಸಿ ಏಳು ದಿನಗಳ ಒಳಗೆ ಬಿಟ್ಟು ಕೊಡಬೇಕು ಎಂದು ಹೇಳುವುದು ಅನ್ಯಾಯ. ಅದರಲ್ಲೂ ಕೇವಲ ಗ್ರಾಮ ಕರಣಿಕರು ತಯಾರು ಮಾಡಿದ ಪಟ್ಟಿಯನ್ನು ಮುಂದಿಟ್ಟುಕೊಂಡು ಈ ಕೆಲಸ ಮಾಡಿದ್ದಾರೆ ಎಂದು ಆಪಾದಿಸಿದರು.

ಕುಮ್ಕಿ ಹಾಗೂ ಸಂಬಂಧಿತ ಜಾಗಗಳಲ್ಲಿ ವಾಸವಿದ್ದು, ನೊಂದ ಫಲಾನುಭವಿ ರೈತರು ಎಲ್ಲರೂ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡುವುದು ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ರಾಯ ಬಿ.ಎಸ್‌., ಸಂಚಾಲಕ ರಾಮಚಂದ್ರ ನೆಕ್ಕಿ ಉಪಸ್ಥಿತರಿದ್ದರು.

Advertisement

ಹೈಕೋರ್ಟಲಿ ಹೋರಾಟ
ರೈತರ ಪರವಾಗಿ ನಾವು ಉಚ್ಚ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದೇವೆ. 2017ರ ಮೇ 25ರಂದು ಉಚ್ಚ ನ್ಯಾಯಾಲಯವು ಯಥಾಸ್ಥಿತಿ ಆದೇಶ ನೀಡಿದೆ. ಕುಮ್ಕಿ ಹಕ್ಕು ನೀಡುವ ಕುರಿತು ಸರಕಾರ ತನ್ನ ನಿಲುವು ತಿಳಿಸಲು ಸೂಚಿಸಿದೆ. ಸರಕಾರಿ ವಕೀಲರು ಇನ್ನೂ ಅಫಿಡವಿಟ್‌ ಸಲ್ಲಿಸದೇ ಇರುವ ಕಾರಣ ವಿಚಾರಣೆ ಮುಂದಕ್ಕೆ ಹೋಗುತ್ತಿದೆ. ಈ ನಡುವೆ, ಯಥಾಸ್ಥಿತಿ ಆದೇಶ ಇರುವಂತೆಯೇ ಕಂದಾಯ ಇಲಾಖೆಯಿಂದ ನೋಟಿಸ್‌ ಬಂದಿರುವುದು ನ್ಯಾಯಾಂಗ ನಿಂದನೆಯಾಗಿದೆ. ಕೋರ್ಟ್‌ ನೀಡಿರುವ ಯಥಾಸ್ಥಿತಿ ಆದೇಶವು ಕಂದಾಯ ಇಲಾಖೆಗೂ ಅನ್ವಯವಾಗುತ್ತದೆ. ಕೋರ್ಟ್‌ ಆದೇಶವನ್ನು ಎಲ್ಲ ಪಕ್ಷಗಾರರಿಗೂ ನಾವು ತಲುಪಿಸಿದ್ದೇವೆ. ಇದು ಗೊತ್ತಿದ್ದೂ ನೋಟಿಸ್‌ ನೀಡುವ ಕೆಲಸ ನಡೆದಿದೆ ಎಂದು ಸತ್ಯನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next