Advertisement

ಜನವರಿಯಲ್ಲಿ ರಾಷ್ಟ್ರವ್ಯಾಪ್ತಿ ಮುಷ್ಕರಕ್ಕೆ ನಿರ್ಧಾರ

10:00 PM Dec 08, 2019 | Team Udayavani |

ಮೈಸೂರು: ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ರಾಷ್ಟ್ರ ಮಟ್ಟದಲ್ಲಿ 10 ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಒಟ್ಟಾಗಿ 2020ರ ಜ. 8 ರಂದು ರಾಷ್ಟ್ರವ್ಯಾಪಿ ಮುಷ್ಕರ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕಾರ್ಮಿಕರ ನಾಯಕ ಎಚ್‌.ವಿ. ಅನಂತಸುಬ್ಬರಾವ್‌ ಹೇಳಿದರು. ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ವತಿಯಿಂದ ಭಾನುವಾರ ಗೋವರ್ಧನ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು.

Advertisement

ಕಳೆದ 6 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಮೋದಿ ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ ದೇಶವನ್ನು ಮಾರಲಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಕಾರ್ಮಿಕ ಸಂಘಟನೆಗಳು ಜ. 8 ರಂದು ಬೃಹತ್‌ ಪ್ರತಿಭಟನೆ ನಡೆಸಬೇಕು. ಕಾರ್ಮಿಕ ಸಂಘಟನೆಗಳನ್ನು ಒಟ್ಟುಗೂಡಿಸಲು ಗುರುದಾಸ್‌ ಗುಪ್ತ ಶ್ರಮಿಸಿದ್ದು, ಅವರ ನೆನಪಿನಲ್ಲೆ ನಮ್ಮ ಹೋರಾಟ ನಡೆಸಬೇಕು. ಈ ಸರ್ಕಾರ ಹೀಗೆ ಮುಂದುವರೆದರೆ ಕಾರ್ಮಿಕರನ್ನು ಮುಗಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಿಯಾಗಿ ಸ್ಪಂದಿಸದ ಸರ್ಕಾರ: ಕಾರ್ಮಿಕ ಸಂಘಟನೆಗಳು ವರ್ಷಕ್ಕೊಮ್ಮೆ ಹೋರಾಟ ನಡೆಸಿ ಸುಮ್ಮನಾಗುತ್ತಾರೆ ಎಂದುಕೊಂಡಿದ್ದಾರೆ. ಆದರೆ ನಮ್ಮ ಹೋರಾಟ ನಿರಂತರವಾಗಿರುತ್ತದೆ. 1980 ರಿಂದಲೂ ಕಾರ್ಮಿಕ ಸಂಘಟನೆಗಳು ಇದೇ ರೀತಿ ಹೋರಾಟ ನಡೆಸಿಕೊಂಡು ಬಂದಿವೆ. ಈಗಿನ ಸರ್ಕಾರಕ್ಕೆ ಕಾರ್ಮಿಕರ 44 ಬೇಡಿಕೆಗಳನ್ನು ಸಲ್ಲಿಸಿದ್ದರೂ ಯಾವುದಕ್ಕೂ ಸ್ಪಂದಿಸಿಲ್ಲ. ಕಾರ್ಮಿಕರನ್ನು ಪ್ರತಿನಿಧಿಸುವ ಯಾವೊಬ್ಬ ನಾಯಕರು ಸಂಸತ್ತಿನಲ್ಲಿಲ್ಲದಿರುವುದು ದುರಂತ ಎಂದರು.

ಮನುಸ್ಮತಿ ಜಾರಿಗೆ ಹೊರಟ ಮೋದಿ: ಅಂಬೇಡ್ಕರ್‌ ಭಾವಚಿತ್ರಕ್ಕೆ ಕಷ್ಟಪಟ್ಟು ಪುಷ್ಪಾರ್ಚನೆ ಮಾಡುವ ನರೇಂದ್ರ ಮೋದಿ ಮನುಸ್ಮತಿ ಜಾರಿಗೆ ತರಲು ಹೊರಟಿದ್ದಾರೆ. ಅಯೋಧ್ಯೆಯಲ್ಲಿ ಕಟ್ಟುವುದು ರಾಮ ಮಂದಿರವಲ್ಲ, ಗಾಂಧಿಯನ್ನು ಕೊಂದ ಗೋಡ್ಸೆ ಮಂದಿರವನ್ನು. ಎಂಪಿಗಳು ಗೋಡ್ಸೆಯನ್ನು ದೇಶಭಕ್ತನೆನ್ನುವ ಮಟ್ಟಕ್ಕೆ ಬಂದಿದ್ದಾರೆ. ಅವರೆಲ್ಲರೂ ಬ್ರಿಟಿಷ್‌ ಪರವಾಗಿದ್ದುಕೊಂಡು ಸ್ವಾತಂತ್ರ್ಯ ಬಯಸದ ಗೋಡ್ಸೆ ವಂಶಸ್ಥರು ಎಂದು ಜರಿದರು.

ಎನ್‌ಕೌಂಟರ್‌ ಮಾಡಿದ ರೀತಿಯೂ ಸಂವಿಧಾನ ಬದ್ಧವಾಗಿಲ್ಲ: ಕರ್ನಾಟಕದಲ್ಲಿ ಬಹುಷಃ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗದೆ ಹೋಗಿದ್ದರೆ ಗೌರಿ ಲಂಕೇಶ್‌ ಹಂತಕರು ಇನ್ನಷ್ಟು ಜನರನ್ನು ಕೊಲ್ಲುತ್ತಿದ್ದರು. ಈಗಿನ ಯಡಿಯೂರಪ್ಪ ಕೂಡ ಈ ಬಗ್ಗೆ ಸುಮ್ಮನಿದ್ದಾರೆ. ಒಬ್ಬ ಮಗಳ ತಂದೆಯಾಗಿ, ಮೊಮ್ಮಗಳ ತಾತನಾಗಿ ಪಶುವೈದ್ಯ ಕೊಲೆಯನ್ನು ಖಂಡಿಸುವೆ. ಆದರೆ ರೀತಿ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿದ ರೀತಿಯೂ ಸಂವಿಧಾನ ಬದ್ಧವಾಗಿಲ್ಲ. ಎರಡೆರೆಡು ರೇಪ್‌ ಮಾಡಿದ ಸ್ವಾಮೀಜಿಯನ್ನೂ ಎನ್‌ಕೌಂಟರ್‌ ಮಾಡಬೇಕಿತ್ತಲ್ಲವೆ? ಈ ದೇಶದಲ್ಲಿ ಬಡವರಿಗೆ, ಶ್ರೀಮಂತ, ಸ್ವಾಮೀಜಿಗಳಿಗೊಂದು ಕಾನೂನು ಇದೆಯಾ ಎಂದು ಪ್ರಶ್ನಿಸಿದರು.

Advertisement

ಕನಿಷ್ಠ ಪಿಂಚಣಿ ನಿಗದಿಗೊಳಿಸಿ: ಮುಖಂಡ ಪದ್ಮನಾಭರಾವ್‌ ಮಾತನಾಡಿ, ನಾವು ಕನಿಷ್ಠ ಕೂಲಿ 21 ಸಾವಿರ ನೀಡಬೇಕೆಂಬ ಬೇಡಿಕೆ ಇಟ್ಟಿದ್ದೇವೆ. 2018 ವರದಿ ಪ್ರಕಾರ ದೇಶದಲ್ಲಿ ಈಗ 8 ರಿಂದ 12 ಸಾವಿರ ಕೂಲಿ ಸಿಗುತ್ತಿದೆ. ನಮ್ಮ ರಾಜ್ಯದಲ್ಲಿ 12 ಸಾವಿರ ಸಿಗುತ್ತಿದೆ. ಆದರೆ ಕನಿಷ್ಠ ಪಿಂಚಣಿಯನ್ನು 10 ಸಾವಿರಕ್ಕೆ ನಿಗದಿ ಮಾಡಬೇಕೆಂಬ ಒತ್ತಾಯ ನಮ್ಮದಾಗಿದೆ. ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು. ತರಬೇತಿ, ಅಪ್ರಂಟಿಸ್‌ ಎಂಬ ಹುದ್ದೆಗಳನ್ನೂ ತೆಗೆದು ಹಾಕಬೇಕು.

ಯಾವುದೇ ಸರ್ಕಾರ ಬಂದರೂ ನೀತಿ ಒಂದೇ ಮಾಡಿ, ಬಣ್ಣ ಬದಲಿಸುತ್ತಾರೆ. ಈ ಸೂಕ್ಷ್ಮತೆಯನ್ನು ನಾವು ಅರಿಯಬೇಕು. ಮಾಲೀಕರು ಕಡಿಮೆ ಕೂಲಿ ನೀಡಿ ಹೆಚ್ಚಿನ ಕೆಲಸ ಮಾಡಿಸುತ್ತಾರೆ. ಯಾಕೆಂದರೆ ಅವರೆಲ್ಲರೂ ಕೇಂದ್ರ ಸರ್ಕಾರಕ್ಕೆ ವಂತಿಗೆ ನೀಡುತ್ತಾರೆ ಎಂದು ಕಿಡಿಕಾರಿದರು. ಕಾರ್ಮಿಕ ಮುಖಂಡ ಎಚ್‌.ಆರ್‌. ಶೇಷಾದ್ರಿ, ಸಿಎಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್‌. ಉಮೇಶ್‌, ಎಐಯುಟಿಯುಸಿ ಉಪಾಧ್ಯಕ್ಷ ಕೆ.ವಿ. ಭಟ್‌, ಜಿಲ್ಲಾ ಬ್ಯಾಂಕ್‌ ನೌಕರರ ಸಂಘದ ಮುಖಂಡ ಎಚ್‌. ಬಾಲಕೃಷ್ಣ, ಜಿ.ಎನ್‌. ನಾಗರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next