ಹೊಸದಿಲ್ಲಿ : ಕಳೆದ ಫೆ.26ರಂದು ಭಾರತೀಯ ವಾಯು ಪಡೆಯ 2000 ಮಿಗ್ ಫೈಟರ್ ಜೆಟ್‌ಗಳು ಪಾಕಿಸ್ಥಾನದ ಫಕ್‌ತೂನ್‌ಖ್ವಾ ಪ್ರಾಂತ್ಯದ ಬಾಲಾಕೋಟ್‌ನಲ್ಲಿ ನಡೆಸಿದ ವಾಯು ದಾಳಿಯಲ್ಲಿ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರಗಳು ಸಂಪೂರ್ಣ ನಾಮಾವಶೇಷವಾಗಿರುವುದು ಇದೀಗ ಸೆಟಲೈಟ್ ಚಿತ್ರಗಳಿಂದ ಬಹಿರಂಗವಾಗಿದೆ.
ಭಾರತೀಯ ವಾಯು ಪಡೆಯ ದಾಳಿಯಲ್ಲಿ ಜೈಶ್ ಉಗ್ರ ಶಿಬಿರಗಳು ಸಂಪೂರ್ಣವಾಗಿ ಧ್ವಂಸವಾಗಿರುವುದನ್ನು ಸೆಟಲೈಟ್ ಚಿತ್ರಗಳು ಸ್ಪಷ್ಟವಾಗಿ ತೋರಿಸುತ್ತವೆ ಎಂದು ಈ ಚಿತ್ರಗಳನ್ನು ಪಡೆದಿರುವ ಝೀ ನ್ಯೂಸ್ ವೆಬ್ ಸೈಟ್ ಹೇಳಿದೆ.
ಬಾಲಾಕೋಟ್‌ನಲ್ಲಿ ಭಾರತೀಯ ವಾಯು ಪಡೆಯ ದಾಳಿಗೆ ಮೊದಲು ಇದ್ದ ಜೈಶ್ ಉಗ್ರ ಶಿಬಿರ ತಾಣದ ಚಿತ್ರಗಳು ಮತ್ತು ದಾಳಿಯ ಬಳಿಕದ ಸೆಟಲೈಟ್ ಚಿತ್ರಗಳನ್ನು ಪರಿಶೀಲಿಸಿದಾಗ, ಉಗ್ರ ಶಿಬಿರಗಳು ಸಂಪೂರ್ಣವಾಗಿ ಧ್ವಂಸವಾಗಿರುವುದು ಸ್ಪಷ್ಟವಿದೆ. ಇದರ ಆಧಾರದಲ್ಲಿ ಭಾರತೀಯ ವಾಯು ಪಡೆಯ ಬಾಂಬ್ ದಾಳಿ ಅತ್ಯಂತ ನಿಖರವಾಗಿ ಮತ್ತು ಯಶಸ್ವಿಯಾಗಿ ನಡೆದಿರುವುದು ಕೂಡ ಸ್ಪಷ್ಟವಿದೆ ಎಂದು ಝೀ ವರದಿ ತಿಳಿಸಿದೆ.
ಐಎಎಫ್ ದಾಳಿಗೆ ಮೂರು ದಿನಗಳ ಮೊದಲಿನ, ಅಂದರೆ ಫೆ.23ರ ಬಾಲಾಕೋಟ್ ಜೈಶ್ ಉಗ್ರ ಶಿಬಿರಗಳ ಚಿತ್ರಗಳು ಮತ್ತು ಫೆ.26ರ ವಾಯು ದಾಳಿಯ ಬಳಿಕದ ಸೆಟಲೈಟ್ ಚಿತ್ರಗಳು, ತಾಣದ ನಿಖರ ಚಿತ್ರಣವನ್ನು ನೀಡುತ್ತವೆ ಎಂದು ವರದಿ ಹೇಳಿದೆ.
ಐಎಎಫ್ ವಾಯು ದಾಳಿಯ ಬಳಿಕ ಉಗ್ರ ಶಿಬಿರ ತಾಣದಲ್ಲಿ ಬೃಹತ್ ಕುಳಿಗಳು ಉಂಟಾಗಿರುವುದನ್ನು ಸೆಟಲೈಟ್ ಚಿತ್ರದಲ್ಲಿ ಕಾಣಬಹುದಾಗಿದೆ. ಐಎಎಫ್ ಫೈಟರ್ ಜೆಟ್‌ಗಳು ಇಲ್ಲಿ 1,000 ಕಿಲೋ ಬಾಂಬುಗಳನ್ನು ಉದುರಿಸಿದ್ದವು.
ಸೆಟಲೈಟ್ ಚಿತ್ರಗಳ ಆಧಾರದದಲ್ಲಿ ದಾಳಿಯ ಬಳಿಕ ಈ ಶಿಬಿರ ತಾಣದಲ್ಲಿ ಯಾವೊಬ್ಬನೂ ಜೀವಂತವಾಗಿ ಉಳಿದಿರುವ ಸಾಧ್ಯತೆಗಳು ಇಲ್ಲದಿರುವುದು ಕೂಡ ಸ್ಪಷ್ಟವಿದೆ ಎಂದು ವರದಿ ಹೇಳಿದೆ.
ನಿರ್ಜನ ದಟ್ಟಾರಣ್ಯದಲ್ಲಿನ ಈ ಉಗ್ರ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿದ ಭಾರತೀಯ ಮಿರಾಜ್ 2000 ಜೆಟ್‌ಗಳು ಸುರಕ್ಷಿತವಾಗಿ ಹಿಂದಿರುಗಿ ಬಂದಿವೆ.