Advertisement

ನಗರದಲ್ಲಿ ಗುಂಡಿಬಿದ್ದ ರಸ್ತೆಗಳಿಗೆ ತೇಪೆ ಕಾರ್ಯಕ್ಕೆನಿರ್ಧಾರ

11:38 AM Sep 24, 2018 | |

ಮಹಾನಗರ: ನಗರದ ವಿವಿಧ ವಾರ್ಡ್‌ಗಳಲ್ಲಿ ಮಳೆಯಿಂದಾಗಿ ಹದಗೆಟ್ಟು ಹೋಗಿರುವ ರಸ್ತೆಗಳ ಗುಂಡಿ ಮುಚ್ಚಿ ಡಾಮರು ತೇಪೆ ಕಾಮಗಾರಿ ಪ್ರಾರಂಭಿಸುವುದಕ್ಕೆ ಮಹಾನಗರ ಪಾಲಿಕೆ ವ್ಯಾಪ್ತಿಯು ಅಂದಾಜು ಪಟ್ಟಿ ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಈ ಸಂಬಂಧ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ.

Advertisement

ಡಾಮರು ಕಿತ್ತು ಹೋಗಿರುವ ರಸ್ತೆಗಳನ್ನು ಎ, ಬಿ, ಸಿ ಎಂದು ಮೂರು ಹಂತದಲ್ಲಿ ವರ್ಗೀಕರಣ ಮಾಡಿ ಆದ್ಯತೆಯ ನೆಲೆಯಲ್ಲಿ ಡಾಮರು ತೇಪೆ ಕಾಮಗಾರಿ ಕೈಗೆತ್ತಿಗೊಳ್ಳಲು ಉದ್ದೇಶಿಸಲಾಗಿದೆ. ಪಾಲಿಕೆ ವ್ಯಾಪ್ತಿಯ ನಗರ ಹಾಗೂ ಸುರತ್ಕಲ್‌ ವಿಭಾಗಗಳಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಗುರುತಿಸಲಾಗಿದೆ. ನಗರದ ವಿಭಾಗದಲ್ಲಿ ‘ಎ’ ವಿಭಾಗದಲ್ಲಿ ವಿವಿಧ ವಾರ್ಡ್‌ಗಳಲ್ಲಿ 43 ರಸ್ತೆಗಳನ್ನು, ‘ಬಿ’ ವಿಭಾಗದಲ್ಲಿ 31 ರಸ್ತೆಗಳನ್ನು ಹಾಗೂ ‘ಸಿ’ ವಿಭಾಗದಲ್ಲಿ 6 ರಸ್ತೆಗಳನ್ನು ಈಗಾಗಲೇ ಆಯ್ದುಕೊಳ್ಳಲಾಗಿದೆ. ಡಾಮರು ತೇಪೆ ಕಾಮಗಾರಿಗಳಿಗೆ ಒಟ್ಟು 2.7 ಕೋ.ರೂ. ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ. ಸುರತ್ಕಲ್‌ ವಿಭಾಗದಲ್ಲಿ ವಿವಿಧ ವಾರ್ಡ್‌ ಗಳಲ್ಲಿ ರಸ್ತೆಗಳ ದುರಸ್ತಿಗೆ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪಾಲಿಕೆ ನಿರ್ಧರಿಸಿದೆ. 

ತುರ್ತು ತೇಪೆ ಕಾರ್ಯ
ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಮಂಗಳಾದೇವಿ, ಕುದ್ರೋಳಿ, ಕಾರ್‌ ಸ್ಟ್ರೀಟ್‌ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತುರ್ತು ನೆಲೆಯಲ್ಲಿ ಡಾಮರು ತೇಪೆ ಕಾಮಗಾರಿ ಕೈಗೆತ್ತಿಗೊಳ್ಳಲು ನಿರ್ಧರಿಸಲಾಗಿದ್ದು, ಈ ವಾರದಲ್ಲಿಯೇ ರಸ್ತೆಗಳನ್ನು ದುರಸ್ತಿಗೊಳಿಸುವ ಕಾರ್ಯ ಆರಂಭಗೊಳ್ಳಲಿದೆ ಎಂದು ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ ‘ಸುದಿನ’ಕ್ಕೆ ತಿಳಿಸಿದ್ದಾರೆ.

ಫುಟ್‌ಪಾತ್‌ ಪರಿಶೀಲನೆ
ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಡಾಮರು ತೇಪೆ ಹಾಗೂ ಫುಟ್‌ಪಾತ್‌ಗಳ ನಿರ್ಮಾಣದ ಬಗ್ಗೆ ಶನಿವಾರ ಮೇಯರ್‌ ನೇತೃತ್ವದಲ್ಲಿ ಹಲವು ಕಡೆ ಖುದ್ದು ಪರಿಶೀಲನೆ ನಡೆಸಲಾಗಿದೆ. ಉಪ ಮೇಯರ್‌ ಮಹಮ್ಮದ್‌, ಮುಖ್ಯ ಸಚೇತಕ ಶಶಿಧರ ಹೆಗ್ಡೆ  ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ನವೀನ್‌ ಡಿ’ಸೋಜಾ, ಪ್ರವೀಣ್‌ಚಂದ್ರ ಆಳ್ವ, ಕಾರ್ಪೊರೇಟರ್‌ ಗಳಾದ ಅಶೋಕ್‌ ಡಿ.ಕೆ., ರಾಧಾಕೃಷ್ಣ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಸುದಿನ ಫುಟ್‌ಪಾತ್‌ ಅಭಿಯಾನಕ್ಕೆ ಸ್ಪಂದನೆ
ನಗರದಲ್ಲಿ ಸಾಕಷ್ಟು ಕಡೆಗಳಲ್ಲಿ ಫುಟ್‌ಪಾತ್‌ ಇಲ್ಲದಿರುವುದು, ಇರುವ ಫುಟ್‌ಪಾತ್‌ಗಳ ಸ್ಲ್ಯಾಬ್ ಕಿತ್ತು ಹೋಗಿರುವುದು, ಕೆಲವು ಕಡೆಗಳಲ್ಲಿ ಪಾದಚಾರಿಗಳಿಗೆ ಅಪಾಯದ ಸ್ಥಿತಿ ಎದುರಾಗಿರುವ ಬಗ್ಗೆ ಉದಯವಾಣಿ ‘ಸುದಿನ’ವು ಫುಟ್‌ಪಾತ್‌ ದುರಸ್ತಿಗೆ ಒತ್ತಾಯಿಸಿ ಅಭಿಯಾನ ನಡೆಸಿತ್ತು. ಸಾರ್ವಜನಿಕರಿಂದಲೂ ಈ ಬಗ್ಗೆ ಹೆಚ್ಚಿನ ದೂರುಗಳು ಬಂದಿದ್ದವು. ಇದೀಗ ಪತ್ರಿಕೆ ವರದಿಗೆ ಸ್ಪಂದಿಸಿರುವ ಮಹಾನಗರ ಪಾಲಿಕೆಯು ನಗರದ ಹಲವು ಕಡೆಗಳಲ್ಲಿ ಫುಟ್‌ಪಾತ್‌ಗಳ ಸ್ಥಿತಿ-ಗತಿ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

Advertisement

ದುರಸ್ತಿಗೆ ಕ್ರಮ
ನಗರದಲ್ಲಿ ಕೆಲವು ಕಡೆ ಫುಟ್‌ಪಾತ್‌ ಸಮಸ್ಯೆ ಕುರಿತು ‘ಸುದಿನ’ ವರದಿ ಮಾಡಿದ್ದು, ಅದನ್ನು ಗಮನಿಸಿ ನಮ್ಮ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ತಂಡವು ಶನಿವಾರ ನಗರದ ವಿವಿಧೆಡೆ ಆ ಬಗ್ಗೆ ಖುದ್ದು ಪರಿಶೀಲಿಸಿದೆ. ಅಗತ್ಯವಿರುವ ಕಡೆಗಳಲ್ಲಿ ದುರಸ್ತಿಗೆ ಕ್ರಮ ವಹಿಸಲಾಗುತ್ತಿದೆ.
– ಭಾಸ್ಕರ್‌ ಕೆ., ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next