Advertisement
ದ.ಕ. ಜಿಲ್ಲೆಯ ಬಸ್ ವ್ಯವಸ್ಥೆ ಖಾಸಗಿ ಕೇಂದ್ರೀಕೃತವಾಗಿದೆ. ಹೀಗಾಗಿ ನಿಗದಿತ ಸಮಯಕ್ಕೆ ಮೌಲ್ಯ ಮಾಪನಕ್ಕೆ ಹಾಜರಾಗುವುದು ಕಷ್ಟ ವಾಗುತ್ತದೆ. ಕೋವಿಡ್-19ರ ತುರ್ತು ಪರಿಸ್ಥಿತಿಯಲ್ಲಿ ಉಪನ್ಯಾಸಕರು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಯ ಮತ್ತು ಆತಂಕದಿಂದ ತೊಡಗಿಕೊಂಡಲ್ಲಿ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡುವ ಭರವಸೆ ನಮಗೆ ಇರುವುದಿಲ್ಲ. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಇತ್ಯಾದಿ ಪ್ರತಿ ಉತ್ತರ ಪತ್ರಿಕೆ ಮೌಲ್ಯಮಾಪನದ ಸಂದರ್ಭದಲ್ಲಿ ಸಮಸ್ಯೆ ಎದುರಾಗಬಹುದು. ಆನ್‌ಲೈನ್ ಅಂಕ ನಮೂದು ಮಾಡುವಾಗ ಗಣಕಯಂತ್ರ ಕೊಠಡಿಯಲ್ಲಿ ಸಾಮಾಜಿಕ ಅಂತರ ಕಷ್ಟ ಸಾಧ್ಯ. ಹೀಗಾಗಿ ತಾಲೂಕು ಅಥವಾ ಕಾಲೇಜುಗಳಲ್ಲಿ ಮೌಲ್ಯಮಾಪನ ಕೇಂದ್ರ ತೆರೆಯಬೇಕು ಎಂದು ಪ್ರಾಚಾರ್ಯರು ಆಗ್ರಹಿಸಿದ್ದಾರೆ.
ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಆಯಾ ಜಿಲ್ಲಾ ಕೇಂದ್ರಗಳಲ್ಲೇ ವಿಕೇಂದ್ರೀಕರಣಗೊಳಿಸುವಂತೆ ಕೋರಿ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಹಾಗೂ ರಾಜ್ಯ ಪ.ಪೂ. ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸಚಿವ ಸುರೇಶ್ ಕುಮಾರ್, ಮೇ 29ರಂದು ಸರಕಾರದ ನಿರ್ಧಾರ ಪ್ರಕಟಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.