Advertisement

ದಶಕದ ರೈಲ್ವೆ ಯೋಜನೆಗೆ ಈಗಷ್ಟೇ ವೇಗ

03:52 PM Oct 09, 2022 | Team Udayavani |

ಕೊಪ್ಪಳ: ಕೊಪ್ಪಳ ಜಿಲ್ಲೆಯಾಗಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಆದರೆ ಜಿಲ್ಲೆಗೆ ದಶಕಗಳ ಹಿಂದೆ ಘೋಷಣೆಯಾದ ರೈಲ್ವೆ ಯೋಜನೆಗಳು ಕುಂಟುತ್ತ, ತೆವಳುತ್ತ ಸಾಗಿ ಈಗಷ್ಟೇ ವೇಗ ಪಡೆದುಕೊಂಡಿವೆ. ಭೂ ಸ್ವಾಧೀನ ಪ್ರಕ್ರಿಯೆ ವಿಳಂಬ ನೀತಿಯೇ ಇಷ್ಟೆಲ್ಲ ನಿಧಾನಗತಿಗೆ ಕಾರಣ ಎನ್ನುವ ಆಪಾದನೆ ಸಾಮಾನ್ಯವಾಗಿದೆ. ಇನ್ನು ಯಾವ್ಯಾವ ಯೋಜನೆ ಪೂರ್ಣಗೊಳ್ಳುವವೋ ಎಂದು ಜಿಲ್ಲೆಯ ಜನತೆ ಕಾದು ನೋಡುತ್ತಿದ್ದಾರೆ.

Advertisement

ಕೊಪ್ಪಳ 1997ರಲ್ಲಿ ಹೊಸ ಜಿಲ್ಲೆಯಾಗಿ ಘೋಷಣೆಯಾಯಿತು. ಆ ಸಂದರ್ಭದಲ್ಲಿಯೇ ಕೊಪ್ಪಳ ತಾಲೂಕಿನ ಮುನಿರಾಬಾದ್‌ನಿಂದ ರಾಯಚೂರು ಜಿಲ್ಲೆಯ ಮಹೆಬೂಬ್‌ ನಗರದವರೆಗೂ ಹೊಸ ರೈಲ್ವೆ ಯೋಜನೆ ಘೋಷಣೆಯಾಗಿತ್ತು. ಆಗ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಯೋಜನೆಗೆ ಚಾಲನೆ ಕೊಟ್ಟಿದ್ದರು. ಆಗಿನಿಂದಲೂ ಯೋಜನೆ ಆಮೆಗತಿಯಲ್ಲಿಯೇ ಸಾಗಿತ್ತು. ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಎಲ್ಲ ಜನಪ್ರತಿನಿಧಿಗಳು ಸ್ವಲ್ಪ ಮಟ್ಟಿಗೆ ಕಾಮಗಾರಿ ವೇಗಕ್ಕೆ ಪ್ರಯತ್ನ ಮಾಡಿದರೂ ಬಳಿಕ ಯೋಜನೆಗೆ ಶಕ್ತಿಯೇ ಬಂದಿರಲಿಲ್ಲ.

ಮುನಿರಾಬಾದ್‌ ಮೆಹಬೂಬ್‌ ನಗರ ಮಾರ್ಪಡಿಸಿ ಗಿಣಗೇರಾ-ಮಹೆಬೂಬ ನಗರ ಎಂದು ಹೆಸರು ಪಡೆದಿದೆ. ಒಟ್ಟು 165 ಕಿ.ಮೀ ಉದ್ದದ ರೈಲ್ವೆ ಯೋಜನೆ ಇದಾಗಿದ್ದು, ಇದಕ್ಕೆ 1350 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಮಾಜಿ ಸಚಿವ ಬಸವರಾಜ ರಾಯರಡ್ಡಿ ಆಗ ಸಂಸದರಿದ್ದ ವೇಳೆ ಈ ಯೋಜನೆಗೆ ಚಾಲನೆ ಸಿಕ್ಕಿತ್ತು. ಬರೋಬ್ಬರಿ ಈ ಯೋಜನೆ 25 ವರ್ಷ ಪೂರೈಸುತ್ತ ಬಂದರೂ ಈಗಷ್ಟೇ ಕೊಪ್ಪಳ ಜಿಲ್ಲೆಯ ಗಡಿವರೆಗೂ ರೈಲ್ವೆ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ. ಒಟ್ಟು 66 ಕಿ.ಮೀ. ರೈಲ್ವೆ ಕಾಮಗಾರಿ ಪೂರ್ಣಗೊಂಡಿದ್ದು, ಈಗಷ್ಟೇ ಕಾರಟಗಿವರೆಗೂ ರೈಲು ಓಡಿಸಲಾಗಿದೆ.

ಕಾರಟಗಿಯಿಂದ ಸಿಂಧನೂರುವರೆಗೂ ರೈಲ್ವೆ ಕಾಮಗಾರಿ ಪ್ರಗತಿಯಲ್ಲಿದೆ. ಫೆಬ್ರವರಿ ಅಂತ್ಯಕ್ಕೆ ಸಿಂಧನೂರುವರೆಗೂ ರೈಲು ಓಡಿಸುವ ಸಿದ್ಧತೆಯೂ ನಡೆದಿದೆ. ಸಿಂಧನೂರಿನಿಂದ ರೈಲ್ವೆ ಯೋಜನೆಗೆ ಭೂ ಸ್ವಾ ಧೀನ ಪ್ರಕ್ರಿಯೆ ನಡೆದಿದೆ. ಕಾಮಗಾರಿ ಪ್ರಗತಿ ಹಂತದಲ್ಲಿದೆ. ಈ ಯೋಜನೆ ಪೂರ್ಣಗೊಂಡರೆ ಕೊಪ್ಪಳ ಭಾಗದ ಜನರು ಹೈದ್ರಾಬಾದ್‌ಗೆ ರಾಯಚೂರು ಜಿಲ್ಲೆಯ ಮಾರ್ಗವಾಗಿ ತೆರಳಲು ಸಾಧ್ಯವಾಗಲಿದೆ. ಸದ್ಯ ಜಿಲ್ಲೆಯ ಜನರು ಗುಂತಕಲ್‌ ಮಾರ್ಗವಾಗಿ ತಿರುಪತಿ ಸೇರಿದಂತೆ ಹೈದ್ರಾಬಾದ್‌ಗೆ ತೆರಳುತ್ತಿದ್ದಾರೆ. ಇನ್ನು ಯಾವಾಗ ಯೋಜನೆ ಪೂರ್ಣಗೊಳ್ಳುವುದೋ ಎಂದು ಕಾದು ಕುಳಿತ್ತಿದ್ದಾರೆ. ಇದು ಬಹು ವರ್ಷಗಳ ಕಾಲ ಆಮೆಗತಿಯಲ್ಲಿ ನಡೆದ ರೈಲ್ವೆ ಯೋಜನೆಯಾಗಿದೆ. ಸಂಸದ ಸಂಗಣ್ಣ ಕರಡಿ ಅವಧಿ ಯಲ್ಲಿ ಯೋಜನೆಗೆ ಶಕ್ತಿ ಬಂದು ಕೊಪ್ಪಳದ ಗಡಿವರೆಗೂ ರೈಲ್ವೆ ಕಾಮಗಾರಿ ಪೂರ್ಣಗೊಂಡಿದೆ.

ಗದಗ-ವಾಡಿಗೆ ಸಿಗಲಿ ಇನ್ನಷ್ಟು ಶಕ್ತಿ: ಇನ್ನು ಗದಗ-ವಾಡಿ ರೈಲ್ವೆ ಯೋಜನೆ 2013-14ರಲ್ಲಿ ಘೋಷಣೆಯಾಗಿದೆ. ಒಟ್ಟು 257.26 ಕಿ.ಮೀ ಉದ್ದ ರೈಲ್ವೆ ಯೋಜನೆ ಇದಾಗಿದ್ದು, 2841 ಕೋಟಿ ರೂ. ಯೋಜನೆಗೆ ಮೀಸಲಿಟ್ಟಿದೆ. ಇದೊಂದು ಕೇಂದ್ರ-ರಾಜ್ಯ ಸರ್ಕಾರದ ಸಮ ಪಾಲುದಾರಿಕೆ ಒಳಗೊಂಡಿದೆ. ಕಳೆದ 9 ವರ್ಷದಲ್ಲಿ ಈ ಯೋಜನೆ ಪ್ರಗತಿ ಕೇವಲ 25 ಕಿ.ಮೀ ಸಾಗಿದೆ. ತಳಕಲ್‌-ಸಂಗನಾಳವರೆಗೂ ರೈಲ್ವೆ ಕಾಮಗಾರಿ ಪೂರ್ಣಗೊಂಡಿದ್ದು, ಈ ಯೋಜನೆಗೆ 1090 ಎಕರೆ ಪ್ರದೇಶ ಬೇಕಿದ್ದು, ಸ್ವಾಧೀನ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ 90 ಕಿ.ಮೀ ಉದ್ದವಿದೆ. 25 ಕಿ.ಮೀ ಉದ್ದದಷ್ಟು ಪೂರ್ಣಗೊಂಡ ರೈಲ್ವೆ ಕಾಮಗಾರಿಯಲ್ಲಿ ರೈಲು ಓಡಿಸುವ ಪ್ರಾಯೋಗಿಕ ಪರೀಕ್ಷೆಯೂ ಪೂರ್ಣಗೊಂಡಿದೆ. ಈ ಯೋಜನೆ ಕಾಮಗಾರಿಗೆ ವೇಗ ದೊರೆಯಬೇಕಿದೆ. ಸರ್ಕಾರ ರೈಲ್ವೆ ಯೋಜನೆಗಳನ್ನೇನೋ ಘೋಷಣೆ ಮಾಡುತ್ತದೆ. ಆದರೆ ಭೂ ಸ್ವಾ ಧೀನ ಪ್ರಕ್ರಿಯೆಯಲ್ಲಿಯೇ ಅತ್ಯಂತ ನಿಧಾನಗತಿ ಎಂದೆನಿಸಿ ಕಾಮಗಾರಿ ಮಾಡುವಲ್ಲಿಯೂ ವಿಳಂಬ ಮಾಡುತ್ತದೆ. ಇದರಿಂದ ದಶಕಗಳ ಕಾಲ ಯೋಜನೆ ಕುಂಟುತ್ತ ಸಾಗುತ್ತವೆ.

Advertisement

ಈ ಎರಡು ರೈಲ್ವೆ ಯೋಜನೆಗಳು ಜಿಲ್ಲೆಯ ಪ್ರಮುಖ ಯೋಜನೆಗಳಾಗಿವೆ. ಗಿಣಗೇರಿ-ರಾಯಚೂರು ರೈಲ್ವೆ ಯೋಜನೆ ಹೈದ್ರಾಬಾದ್‌ ಸಂಪರ್ಕಕ್ಕೆ ಅನುಕೂಲವಾಗಲಿದ್ದರೆ, ಗದಗ-ವಾಡಿ ರೈಲ್ವೆ ಯೋಜನೆ ಮುಂಬೈ ಕರ್ನಾಟಕ ಹಾಗೂ ಹೈದ್ರಾಬಾದ್‌ ಕರ್ನಾಟಕದ ಇತರೆ ಜಿಲ್ಲೆಗಳ ಸಂಪರ್ಕಕಕ್ಕೆ ಅನುಕೂಲವಾಗಲಿದೆ. ಗದಗ ವಾಡಿ ರೈಲ್ವೆ ಯೋಜನೆ ಜಾರಿಗೆ ಮಾಜಿ ಸಚಿವ ಬಸವರಾಜ ರಾಯರಡ್ಡಿ ಶ್ರಮವೂ ಹೆಚ್ಚಿದೆ. ನಂತರದಲ್ಲಿ ಸಂಸದ ಸಂಗಣ್ಣ ಕರಡಿ ನಿರಂತರ ಪ್ರಯತ್ನದ ಫಲವಾಗಿ ಈ ಯೋಜನೆಗೆ ಹೆಚ್ಚಿನ ಶಕ್ತಿ ಬಂದಿದೆ.

ಭೂ ಸ್ವಾಧಿಧೀನದಿಂದಲೇ ನಿಧಾನಗತಿ: ಈ ಎರಡೂ ಯೋಜನೆಗಳಿಗೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬ ಮಾಡಿದ್ದೇ ಇಷ್ಟೆಲ್ಲ ನಿಧಾನಗತಿಗೆ ಕಾರಣ ಎನ್ನುವ ಮಾತುಗಳು ಕೇಳಿ ಬಂದಿವೆ. ಸ್ವಾಧೀನ ಪ್ರಕ್ರಿಯೆ ಇಲ್ಲದೇ ಯಾವ ಯೋಜನೆ ಪ್ರಗತಿ ಕಾಣಲು ಸಾಧ್ಯವಾಗುವುದಿಲ್ಲ. ಅಲ್ಲದೇ, ಸರ್ಕಾರಗಳು ಸ್ವಾ ಧೀನಕ್ಕೆ ಪರಿಹಾರ ಹಣ ಕೊಡುವಲ್ಲಿ ವಿಳಂಬ ಮಾಡುವುದು ಒಂದು ಕಾರಣವಿದೆ. ಈ ಯೋಜನೆಗಳು ಪೂರ್ಣಗೊಂಡು ಜನತೆಗೆ ಅನುಕೂಲ ಕಲ್ಪಿಸುವುದು ಯಾವಾಗ ಎನ್ನುವ ಪ್ರಶ್ನೆ ಮೂಡಿದೆ.

ಮೂರು ಹೊಸ ಯೋಜನೆ ಘೋಷಣೆ: ಇವರೆಡೂ ಯೋಜನೆಯಲ್ಲದೇ ಜಿಲ್ಲೆಗೆ ಈಚೆಗಷ್ಟೇ ಮೂರು ಹೊಸ ಯೋಜನೆಗಳು ಬಂದಿವೆ. ಗಂಗಾವತಿ- ದರೋಜಿವರೆಗೂ 34 ಕಿ.ಮೀ ರೈಲ್ವೆ ಲೈನ್‌ಗೆ ಸರ್ವೇ ನಡೆಸಲು ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ. ಇನ್ನು ಗಂಗಾವತಿ-ಬಾಗಲಕೋಟೆವರೆಗೂ 157 ಕಿ.ಮೀ ಉದ್ದದ ರೈಲ್ವೆ ಯೋಜನೆ ಘೋಷಣೆಯಾಗಿದೆ. ಇದಕ್ಕೆ 78 ಲಕ್ಷ ರೂ. ಅನುದಾನ ಘೋಷಣೆಯಾಗಿ ಸರ್ವೇ ನಡೆಯಬೇಕಿದೆ. ಇದಲ್ಲದೇ ಆಲಮಟ್ಟಿ-ಚಿತ್ರದುರ್ಗ ರೈಲ್ವೆ ಯೋಜನೆಯೂ ಜಿಲ್ಲಾ ವ್ಯಾಪ್ತಿಗೆ ಸೇರ್ಪಡೆಯಾಗಿದ್ದು 264 ಕಿ.ಮೀ ಉದ್ದದ ರೈಲ್ವೆ ಯೋಜನೆಗೆ ಡಿಪಿಆರ್‌ ತಯಾರು ಮಾಡಲಾಗುತ್ತಿದೆ. ಈ ಮೂರು ಯೋಜನೆಗಳು ಸರ್ವೇ, ಟೆಂಡರ್‌ ಪ್ರಕ್ರಿಯೆ ಹಂತದಲ್ಲಿವೆ. ಒಟ್ಟಿನಲ್ಲಿ ಜಿಲ್ಲೆಗೆ ಘೋಷಣೆಯಾಗಿರುವ ರೈಲ್ವೆ ಯೋಜನೆಗಳು ಒಂದೆರಡು ವರ್ಷದಲ್ಲಿ ಪೂರ್ಣಗೊಳ್ಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಜನಪ್ರತಿನಿ ಧಿಗಳ ಇಚ್ಛಾಶಕ್ತಿಯೂ ಬೇಕು. ಈಗಷ್ಟೇ ಯೋಜನೆಗೆ ಶಕ್ತಿ ಬಂದಿದ್ದು, ಅನುದಾನ ಬಂದರೆ ಕಾಮಗಾರಿಯೂ ವೇಗ ಪಡೆದುಕೊಳ್ಳಲಿವೆ.

ಗಿಣಗೇರಿ-ಮಹೆಬೂಬ ನಗರ ರೈಲ್ವೆ ಯೋಜನೆ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭೂ ಸ್ವಾಧೀನ ಪೂರ್ಣಗೊಂಡಿದೆ. ಕಾಮಗಾರಿಯೂ ಮುಗಿದಿದೆ. ಕಾರಟಗಿವರೆಗೂ ರೈಲು ಓಡಿಸಲಾಗುತ್ತಿದೆ. ಮುಂದಿನ ಫೆಬ್ರವರಿಗೆ ಸಿಂಧನೂರಿಗೆ ರೈಲು ಓಡಿಸಲು ಸಿದ್ಧತೆ ನಡೆದಿದೆ. ಇನ್ನು ಗದಗ-ವಾಡಿ ರೈಲ್ವೆ ಯೋಜನೆಯಡಿ ಕುಷ್ಟಗಿವರೆಗೂ ಕಾಮಗಾರಿ ನಡೆದಿದ್ದು, ಅದನ್ನು ಫೆಬ್ರವರಿ ವೇಳೆಗೆ ಕುಷ್ಟಗಿಗೆ ರೈಲು ಓಡಿಸಲು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಹುಪಾಲು ಕಾಮಗಾರಿ ಪ್ರಗತಿ ಕಂಡಿವೆ. ಅನುದಾನವೂ ಬರುತ್ತಿದೆ. ಇದಲ್ಲದೇ ಗಂಗಾವತಿ-ದರೋಜಿ ಹೊಸ ರೈಲ್ವೆಗೆ ಸರ್ವೇ ಪ್ರಗತಿಯಲ್ಲಿದೆ. ಗಂಗಾವತಿ-ಬಾಗಲಕೋಟೆ, ಆಲಮಟ್ಟಿ-ಚಿತ್ರದುರ್ಗ ಡಿಪಿಆರ್‌ ತಯಾರಾಗುತ್ತಿದೆ. -ಸಂಗಣ್ಣ ಕರಡಿ, ಕೊಪ್ಪಳ ಸಂಸದ

„ದತ್ತು ಕಮ್ಮಾರ

 

Advertisement

Udayavani is now on Telegram. Click here to join our channel and stay updated with the latest news.

Next