Advertisement

ಡಿ. 23 –ಜ. 16: ಉಳ್ಳಾಲ ಉರೂಸ್‌

12:43 AM Nov 05, 2021 | Team Udayavani |

ಮಂಗಳೂರು: ಸಂತ ಖುತುಬುಝ್ಜಮಾನ್‌ ಹಝ್ರತ್‌ ಅಸ್ಸಯ್ಯದ್‌ ಮುಹಮ್ಮದ್‌ ಶರೀಫುಲ್ ಮದನಿ (ಖ.ಸಿ) ತಂಙಳ್‌ ಅವರ 429ನೇ ವಾರ್ಷಿಕ ಮತ್ತು 21ನೇ ಪಂಚವಾರ್ಷಿಕ ಉರೂಸ್‌ ನೇರ್ಚೆ ಡಿ. 23ರಿಂದ ಜ. 16ರ ವರೆಗೆ ಉಳ್ಳಾಲ ದರ್ಗಾ ವಠಾರದಲ್ಲಿ ನಡೆಯಲಿದೆ ಎಂದು ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್‌ ರಶೀದ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಸಯ್ಯಿದ್‌ ಇಂಬಿಚ್ಚಿ ಕೋಯ ತಂಙಳ್‌ ನೇತೃತ್ವ ವಹಿಸುವರು. ಸಂಜೆ ಏಳು ಗಂಟೆಗೆ ಉರೂಸ್‌ ಕಾರ್ಯಕ್ರಮವನ್ನು ಸಯ್ಯಿದುಲ್‌ ಉಲಮಾ ಜಿಪ್ರಿಮುತ್ತುಕೋಯ ತಂಙಳ್‌ ಉದ್ಘಾಟಿಸಲಿದ್ದಾರೆ. ಸಮಾರೋಪ ಕಾರ್ಯಕ್ರಮವನ್ನು ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್‌ ಮುಸ್ಲಿಯಾರ್‌ ನೆರವೇರಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಚಿವರು, ಸಂಸದರು, ಶಾಸಕರು, ಧಾರ್ಮಿಕ ಗಣ್ಯರು ಭಾಗವಹಿಸಲಿದ್ದಾರೆ. ಸೌಹಾರ್ದ ಸಮ್ಮೇಳನದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಪ್ರಸಿದ್ಧ ಧರ್ಮಗುರುಗಳು, ವಿದ್ವಾಂಸರು ಭಾಗವಹಿಸಲಿದ್ದಾರೆ ಎಂದರು.

ಡಿ. 26ರಂದು ಬೆಳಗ್ಗೆ ಬೃಹತ್‌ ರಕ್ತದಾನ ಶಿಬಿರ,  ಸಂಜೆ ಮಜ್ಲಿಸುನ್ನೂರ್‌ ಕಾರ್ಯಕ್ರಮ, ಜ. 2ರಂದು 2.30ಕ್ಕೆ ಸನದು ದಾನ ಮಹಾಸಮ್ಮೇಳನ,  ಜ. 6ರಂದು ಮದನಿ ಮೌಲೂದ್‌ ಪಾರಾಯಣ, ಜ. 9ರಂದು ಬೃಹತ್‌ ಆರೋಗ್ಯ ಶಿಬಿರ ಜರಗಲಿದೆ. ಡಿ. 23ರಿಂದ ಜ. 13ರ ವರೆಗೆ ರಾತ್ರಿ ವಿಶ್ವ ವಿಖ್ಯಾತ ಪಂಡಿತರು, ಧಾರ್ಮಿಕ ಮುಖಂಡರಿಂದ ಪ್ರವಚನ ನಡೆಯಲಿದೆ.

ಜ. 14ರಂದು ಅಸರ್‌ ನಮಾಜಿನ ಬಳಿಕ ಅಂಗವಿಕಲರಿಗೆ ಸೈಕಲ್‌ ವಿತರಣೆ,  ಮಗ್ರಿಬ್‌ ನಮಾಜಿನ ಬಳಿಕ ಸರ್ವಧರ್ಮ ಮುಖಂಡರ ಸಮ್ಮೇಳನ ನಡೆಯಲಿದ್ದು, ಧಾರ್ಮಿಕ- ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ. ಜ. 15ರಂದು ಸಂದಲ್‌ ಮೆರವಣಿಗೆ ಹಾಗೂ ಜ. 16ರಂದು ಅನ್ನದಾನ ಕಾರ್ಯಕ್ರಮ ನಡೆಯಲಿದೆ.

Advertisement

ಜಮಾತಿನ 55 ಮಂದಿ ಸಮಿತಿ ಸದಸ್ಯರೊಂದಿಗೆ 8 ಕರಿಯದಿಂದ ಆಯ್ಕೆಯಾಗಿ ಬಂದ ಉರೂಸ್‌ ಸಮಿತಿ ಸೇರಿ ಒಟ್ಟು 200 ಮಂದಿಯ ಉರೂಸ್‌ ಸಮಿತಿ ರಚಿಸಲಾಗಿದ್ದು, ಈ ಪೈಕಿ 20 ಮಂದಿಯ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸಿಕೊಂಡು ಉರೂಸ್‌ನ ಸಿದ್ಧತೆಗೆ ಶ್ರಮಿಸುತ್ತಿದ್ದಾರೆ ಎಂದರು.

ಉಪಾಧ್ಯಕ್ಷ ಯು.ಕೆ. ಮೋನು ಇಸ್ಮಾಯಿಲ್‌, ಲೆಕ್ಕ ಪರಿಶೋಧಕ ಯು.ಟಿ. ಇಲ್ಯಾಸ್‌, ಜತೆಕಾರ್ಯದರ್ಶಿ ನೌಶದ್‌ ಆಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next