ಮೈಸೂರು: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳಾದರೂ ಕುಮಾರಸ್ವಾಮಿ ಘೋಷಣೆ ಮಾಡಿದ್ದ ಸಾಲ ಮನ್ನಾಕ್ಕೆ ಇನ್ನೂ ಸ್ಪಷ್ಟತೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿಳಿಸಿದರು.
ನಗರದಲ್ಲಿ ಬಿಜೆಪಿ ನಗರ ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ನಗರ ಹಾಗೂ ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇನ್ನು ಸಾಲ ಮನ್ನಾ ಮಾಡುವುದಾಗಿ ಹೇಳಿದ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಷ್ಟ್ರೀಕೃತ ಬ್ಯಾಂಕ್‌ಗಳು, ಆರ್‌ಬಿಐ ಸಮ್ಮತಿ ಇಲ್ಲದೆ ಘೋಷಣೆ ಮಾಡಿದರು.
ಆದರೆ ಈವರೆಗೂ ಸಾಲಮನ್ನಾ ಮಾಡಿರುವ ಬಗ್ಗೆ ಯಾವ ಸ್ಪಷ್ಟತೆ ಇಲ್ಲ. ಸಿಎಂ ಅವರ ಈ ನಿರ್ಧಾರದಿಂದ ಸಹಕಾರ ಬ್ಯಾಂಕ್‌ಗಳು ದಿವಾಳಿಯಾಗುತ್ತಿದ್ದು, ಸಾಲಮನ್ನಾ ಮಾಡಿದ್ದಾರೆಂದು ರೈತರಲ್ಲಿ ಭ್ರಮೆ ಮೂಡಿಸುವ ವಿಚಿತ್ರ ಸನ್ನಿವೇಶದಲ್ಲಿ ಸಿಲುಕುವಂತೆ ಮಾಡಿದೆ ಎಂದು ಟೀಕಿಸಿದರು.
ಪಾಲಿಕೆಯತ್ತ ಗಮನಹರಿಸಿ: ಮುಂದಿನ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರ ಹಿಡಿಯಬೇಕಿದೆ. ಪಾಲಿಕೆ ಅಧಿಕಾರ ಹಿಡಿಯುವುದು ಮುಖ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಪಕ್ಷದಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡ, ಹಿಂದುಳಿದ ವರ್ಗದವರನ್ನು ಗುರುತಿಸಿ ಅವರನ್ನು ಮುಂದೆ ತರಬೇಕಿದೆ.
ಇದಕ್ಕಾಗಿ ಪಕ್ಷ ಸಂಘಟನೆಯಲ್ಲಿ ಅವಕಾಶಕೊಟ್ಟರೆ ಅನುಕೂಲವಾಗುತ್ತದೆ. ಇದಕ್ಕಾಗಿ ಎಲ್ಲಾ ಮೋರ್ಚಾ ಪದಾಧಿಕಾರಿಗಳು ಹೆಚ್ಚು ಒತ್ತು ನೀಡಿ ಕೆಲಸ ಮಾಡಬೇಕು. ಮೈಸೂರಿನಲ್ಲಿ ಸಂಸದರು, ಇಬ್ಬರು ಶಾಸಕರಿರುವ ಕಾರಣ ಈ ಬಾರಿ ಅಧಿಕಾರ ಪಡೆದು, ಬಿಜೆಪಿ ಶಕ್ತಿ ಪ್ರದರ್ಶಿಸಬೇಕಿದೆ ಎಂದು ಹೇಳಿದರು.
ಕಾರ್ಯಕಾರಿಣಿ ಸಭೆಯಲ್ಲಿ ಮೈಸೂರು ನಗರದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಮೂರು ಕ್ಷೇತ್ರದ ಅಧ್ಯಕ್ಷರು ಪಾಲ್ಗೊಂಡಿದ್ದರು. ಸಭೆಯಲ್ಲಿ ಸಂಸದ ಪ್ರತಾಪಸಿಂಹ, ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಶಾಸಕರಾದ ರಾಮದಾಸ್, ನಾಗೇಂದ್ರ, ರಾಜ್ಯ ಕಾರ್ಯದರ್ಶಿ ರಾಜೇಂದ್ರ ಮತ್ತಿತರರು ಹಾಜರಿದ್ದರು.