Advertisement

ಸಾಲ ಮನ್ನಾ ಸಮಿತಿ ಹೆಗಲಿಗೆ; ಕನಿಷ್ಠ ಕಾರ್ಯಸೂಚಿಗೆ ಐವರ ಸಮಿತಿ

06:00 AM Jun 15, 2018 | Team Udayavani |

ಬೆಂಗಳೂರು: ಬಹುನಿರೀಕ್ಷಿತ ಸಾಲ ಮನ್ನಾ ಯೋಜನೆ ಜಾರಿ ಮತ್ತೂಮ್ಮೆ ಮುಂದಕ್ಕೆ ಹೋಗಿದೆ. ಇದರ ಕುರಿತು ನಿರ್ಧಾರ ಕೈಗೊಳ್ಳುವ ಹೊಣೆಯನ್ನು ಕಾಂಗ್ರೆಸ್‌- ಜೆಡಿಎಸ್‌ ನಾಯಕರ ಕನಿಷ್ಠ ಕಾರ್ಯಸೂಚಿ ಸಿದ್ಧಪಡಿಸುವ ಐದು ಜನರ ಸಮಿತಿಗೆ ವಹಿಸಲಾಗಿದೆ.

Advertisement

ಅಧಿಕಾರಕ್ಕೇರಿದ 24 ಗಂಟೆಗಳಲ್ಲಿ ಸಾಲ ಮನ್ನಾ ಜಾರಿಗೊಳಿಸಲಾಗುವುದು ಎಂದು ಜೆಡಿಎಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ ಕುಮಾರಸ್ವಾಮಿ ಅಧಿಕಾರಕ್ಕೇರಿದ ಬಳಿಕ ಮೇ 30ರಂದು, 15 ದಿನಗಳ ಕಾಲಾವಧಿ ಕೇಳಿದ್ದರು. ಇದೀಗ ಗುರುವಾರ ನಡೆದ ಸಮ್ಮಿಶ್ರ ಸರ್ಕಾರದ ಮೊದಲ ಸಮನ್ವಯ ಸಮಿತಿ ಸಭೆಯಲ್ಲಿ ಸಾಲ ಮನ್ನಾ ಕುರಿತು ಚರ್ಚೆ ನಡೆಯಿತಾದರೂ ಅಂತಿಮ ನಿರ್ಧಾರಕ್ಕೆ ಬರಲಾಗಲಿಲ್ಲ. ರೈತರ ಸಾಲ ಮನ್ನಾ ವಿಷಯದಲ್ಲಿ ಎರಡೂ ಪಕ್ಷಗಳು ಒಪ್ಪಿಗೆ ನೀಡಿದರೂ, ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಸೇರಿಸಿ ನಂತರ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲು ನಿರ್ಧರಿಸಲಾಯಿತು.

ಸಮನ್ವಯ ಸಮಿತಿ ಸಭೆ ನಂತರ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಮ್ಮಿಶ್ರ ಸರ್ಕಾರದಲ್ಲಿ ರೈತರ ಸಾಲಮನ್ನಾ ಮಾಡಲು ನಿರ್ದಿಷ್ಟ ಗಡುವು ಇಲ್ಲ. ರೈತರ ಸಾಲ ಮನ್ನಾ ಮಾಡುವುದು ಆರ್ಥಿಕ ವಿಷಯಕ್ಕೆ ಸಂಬಂಧಿಸಿರುವುದರಿಂದ ಹದಿನೈದು ದಿನದಲ್ಲಿ ಮಾಡುತ್ತೇವೆ ಎಂದು ಹೇಳಲು ಆಗುವುದಿಲ್ಲ. ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಈ ಸಮನ್ವಯ ಸಮಿತಿ ಸಭೆಯಲ್ಲಿ, ಚುನಾವಣೆ ಸಂದರ್ಭದಲ್ಲಿ ಎರಡೂ ಪಕ್ಷಗಳು ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲದಿರುವುದರಿಂದ ಸಾಮಾನ್ಯ ಕನಿಷ್ಠ ಕಾರ್ಯಸೂಚಿಯಡಿ ಕೆಲಸ ಮಾಡಬೇಕು ಎಂದು ತೀರ್ಮಾನಿಸಲಾಗಿದ್ದು ಹತ್ತು ದಿನಗಳಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಸೂಚಿ ಸಿದ್ಧಪಡಿಸಲು ನಿರ್ಧರಿಸಲಾಗಿದೆ.

ಸಮನ್ವಯ ಅಗತ್ಯ
ಸರ್ಕಾರ ಐದು ವರ್ಷ ಸುಸೂತ್ರವಾಗಿ ನಡೆಯಬೇಕು.ಯಾವುದೇ ಗೊಂದಲಕ್ಕೂ ಎರಡು ಪಕ್ಷಗಳು ಅವಕಾಶ ನೀಡಬಾರದು. ಹಿರಿಯ ಅಧಿಕಾರಿಗಳು ಸೇರಿದಂತೆ ಪ್ರಮುಖ ವರ್ಗಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ-ಉಪ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರು ಚರ್ಚಿಸಿ ತೀರ್ಮಾನ ಕೈಗೊಂಡರೆ ಸೂಕ್ತ. ವರ್ಗಾವಣೆಯಲ್ಲಿ ಹಸ್ತಕ್ಷೇಪ, ಮಧ್ಯಪ್ರವೇಶಕ್ಕೆ ಅವಕಾಶ ಬೇಡ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿದು ಬಂದಿದೆ.

Advertisement

ಜಲಸಂಪನ್ಮೂಲ ಇಲಾಖೆಯ ಎಂಜಿನಿಯರುಗಳ ವರ್ಗಾವಣೆ ವಿಚಾರವೂ  ಪ್ರಸ್ತಾಪಗೊಂಡು ಅದು ಮೊದಲೇ ಸಿದ್ಧಗೊಂಡಿದ್ದ ಪಟ್ಟಿ ಎಂಬ ಸಮಜಾಯಿಷಿ ನೀಡಲಾಯಿತು ಎಂದು ಹೇಳಲಾಗಿದೆ.

ಸಂಪುಟ ವಿಸ್ತರಣೆ ಸೇರಿದಂತೆ ಸಭೆಯಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಿತು. ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್‌ ಅಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಮೊದಲ ಸಭೆಯ ನಿರ್ಧಾರಗಳು
1. ಹೊಸ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲು ಐದು ಜನರ ಸಮಿತಿ ರಚನೆ. ಸಮಿತಿಯಲ್ಲಿ ಕಾಂಗ್ರೆಸ್‌ನ 3 ಹಾಗೂ ಜೆಡಿಎಸ್‌ನಿಂದ 2 ಸದಸ್ಯರು ಇರಲಿದ್ದಾರೆ
1. ಹಿಂದಿನ ಸರ್ಕಾರದಲ್ಲಿ ಜಾರಿಗೊಳಿರುವ ಎಲ್ಲ ಜನಪ್ರಿಯ ಯೋಜನೆಗಳನ್ನು ಮುಂದುವರೆಸುವುದು
2. ಸಿದ್ದರಾಮಯ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವುದಕ್ಕೂ ಒಪ್ಪಿಗೆ
3. ಅತೃಪ್ತ ಶಾಸಕರ ಬಂಡಾಯ ಶಮನಗೊಳಿಸುವ ಹಿನ್ನೆಲೆಯಲ್ಲಿ 30 ಪ್ರಮುಖ ನಿಗಮ ಮಂಡಳಿಗಳಿಗೆ 1 ವಾರದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕ. ಮೊದಲ ಹಂತದಲ್ಲಿ  ಶಾಸಕರಿಗೆ ಅವಕಾಶ
4. ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡುವ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಕುಳಿತು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು

ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಎರಡೂ ಪಕ್ಷಗಳ ಪ್ರಣಾಳಿಕೆಗಳನ್ನು ಜಾರಿಗೊಳಿಸುವುದು ಕಷ್ಟ. ಹೀಗಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಕಾಂಗ್ರೆಸ್‌ ಸರ್ಕಾರದ ಜನಪ್ರೀಯ ಯೋಜನೆಗಳು ಮುಂದುವರೆಯುತ್ತವೆ. ಒಂದು ವಾರದೊಳಗಾಗಿ 30 ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮಾಡಲು ತೀರ್ಮಾನಿಸಲಾಗಿದೆ. ಉಚಿತ ಬಸ್‌ ಪಾಸ್‌ ಯೋಜನೆ ಜಾರಿಯಾಗಲಿದೆ.
– ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ

ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲು ಐವರು ತಜ್ಞರ ಸಮಿತಿ ರಚನೆ ಮಾಡಲಾಗುತ್ತಿದೆ. ಸಮಿತಿ ಹತ್ತು ದಿನದಲ್ಲಿ ವರದಿ ನೀಡಲಿದ್ದು, ಅದರ ಆಧಾರದಲ್ಲಿ  ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ವಾರದೊಳಗೆ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮಾಡಲು ನಿರ್ಧರಿಸಲಾಗಿದೆ.
– ಡ್ಯಾನಿಷ್‌ ಅಲಿ, ಸಮನ್ವಯ ಸಮಿತಿ ಸಂಚಾಲಕ

Advertisement

Udayavani is now on Telegram. Click here to join our channel and stay updated with the latest news.

Next