ಸಂಡೂರು: ನಿರಂತರವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಮೂಗಿಗೆ ತುಪ್ಪ ಸವರುವ ರೀತಿಯಲ್ಲಿ ರಾಜ್ಯ ಸರ್ಕಾರ ಸಹಕಾರಿ ಸಂಘಗಳ ಸಾಲ ಮನ್ನಾ ಮಾಡಿ ಕೈತೊಳೆದುಕೊಂಡಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡುವಂತೆ ದೇಶದ ಎಲ್ಲ ರಾಜ್ಯಗಳ ರೈತ ಸಂಘ ಬೃಹತ್ ಸಮಾವೇಶ ಮಾಡುವ ಮೂಲಕ ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಬಿ.ಎಂ. ಉಜ್ಜಿನಯ್ಯ ಹೇಳಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರು ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ರೈತರು ದೇಶದ ಬೆನ್ನೆಲುಬು. ರೈತರ ಬೆಳೆಗಳಿಗೆ ಮಾತ್ರ ಮೂರುಕಾಸಿನ ಬೆಲೆ ಇಲ್ಲದಂತಾಗಿದೆ. ರೈತರು ಖರೀದಿಸುವ ಗೊಬ್ಬರ, ಬೀಜಗಳ ಬೆಲೆ ಗಗನಕ್ಕೆ ಏರಿಸುತ್ತಾರೆ ಎಂದು ಆರೋಪಿಸಿದರು.
ರೈತರನ್ನು ರಕ್ಷಣೆ ಮಾಡುವಂಥ ಮತ್ತು 174ಕೂ ರೈತ ಸಂಘಟನೆಗಳು ಒಟ್ಟಾಗಿ ಬೃಹತ್ ಪ್ರತಿಭಟನೆಯನ್ನು ದೆಹಲಿ ಸಮನ್ವಯ ಸಭೆ ಪ್ರಯುಕ್ತ 22ರಂದು ಮಂಡ್ಯದಲ್ಲಿ ಬೃಹತ್ ಸಮಾವೇಶ ನಡೆಸುವುದಾಗಿ ಹೇಳಿದ್ದಾರೆ. ಬಳಿಕ ರೈತರು 22ರವರೆಗೆ ದಕ್ಷಿಣ ಭಾರತದಾದ್ಯಂತ ಪ್ರತಿಭಟನೆ ಮತ್ತು ಮುಷ್ಕರ ಕೈಗೊಳ್ಳಲಿದ್ದಾರೆ. ಅಂತಿಮವಾಗಿ ನ. 22ರಂದು ಪಂಡರಾಪುರಕ್ಕೆ ಜಾಥಾ ನಡೆಸಿ ಅಲ್ಲಿಂದ ದೆಹಲಿಯಲ್ಲಿ ನವೆಂಬರ್ ಅಂತ್ಯಕ್ಕೆ ಸೇರುತ್ತೇವೆ. ಪ್ರತಿಯೊಬ್ಬ ರೈತರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಸಾಲಮನ್ನಾ, ವೈಯಕ್ತಿಕ ಜಮೀನಿನ ಬೆಳೆ ವಿಮೆ, ರೈತರ ಬೆಲೆಗೆ ನಿರ್ದಿಷ್ಟ ಬೆಂಬಲ ಬೆಲೆ ನಿಗದಿ, ಸರ್ಕಾರದಿಂದ ಬೀಜ ಗೊಬ್ಬರ ಹಾಗೂ ಇತರ ಅಂಶಗಳಿಗೆ ಸೌಲಭ್ಯ ಒದಗಿಸಲು ಹೋರಾಟ ಮಾಡುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ರೈತ ಸಂಘದ ಮುಖಂಡ ಎಂ.ಎಲ್.ಕೆ. ನಾಯ್ಡು, ರಾಮಪ್ಪ, ಕುಮಾರಸ್ವಾಮಿ, ರವಿ, ಕುಮಾರಸ್ವಾಮಿ
ಅಚಾರ್, ವಿರೂಪಾಕ್ಷಪ್ಪ, ಬನ್ನಿಹಟ್ಟಿ, ಅಂಜಿನಪ್ಪ ಸುಶೀಲಾನಗರ ಸೇರಿದಂತೆ ರೈತರು ಉಪಸ್ಥಿತರಿದ್ದರು .
ರೈತರ ಬೆಳೆಗಳಿಗೆ ಮೂರುಕಾಸಿನ ಬೆಲೆ ಇಲ್ಲದಂತಾಗಿದೆ. 174ಕ್ಕೂ ರೈತ ಸಂಘಟನೆಗಳು ಒಟ್ಟಾಗಿ ಬೃಹತ್ ಪ್ರತಿಭಟನೆ ನಡೆಸಲಿವೆ.
ಬಿ.ಎಂ. ಉಜ್ಜಿನಯ್ಯ, ರೈತ
ಸಂಘದ ಅಧ್ಯಕ್ಷ