Advertisement

ಸಾಲಮನ್ನಾ ಹಣ ರಾಯಚೂರಿಗೆ ಹೆಚ್ಚು​​​​​​​

12:30 AM Jan 13, 2019 | Team Udayavani |

ರಾಯಚೂರು: ಬಹುನಿರೀಕ್ಷಿತ ಸಾಲಮನ್ನಾದ ಮೊದಲ ಕಂತಿನ ಹಣ ಬಿಡುಗಡೆ ಮಾಡುವುದಾಗಿ ಸರಕಾರ ಘೋಷಿಸಿದ್ದು, ರಾಯಚೂರು ಜಿಲ್ಲೆಗೆ ಹೆಚ್ಚು ಹಣ ನೀಡಲಾಗಿದೆ. ನಂತರದ ಸ್ಥಾನ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಪಾಲಾಗಿದೆ.

Advertisement

ರಾಯಚೂರು ಜಿಲ್ಲೆಗೆ 22.30 ಕೋಟಿ ರೂ. ಬಿಡುಗಡೆಯಾಗಿದ್ದರೆ, ಚಿತ್ರದುರ್ಗ ಜಿಲ್ಲೆಗೆ 11.40 ಕೋಟಿ, ತುಮಕೂರು ಜಿಲ್ಲೆಗೆ 11.04 ಕೋಟಿ ರೂ.ಬಿಡುಗಡೆಯಾಗಿದೆ. ಈ ಮಧ್ಯೆ, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 100 ಖಾತೆಗಳಿಗೆ ಕೇವಲ 46.92 ಲಕ್ಷ ರೂ. ಬಿಡುಗಡೆಯಾಗಿದೆ.

ಎಲ್ಲಾ ಜಿಲ್ಲಾಡಳಿತಗಳಿಗೆ ಮೊದಲ ಕಂತಿನ ವಿವರ ನೀಡಿದ್ದು, ಮೊದಲ ಕಂತಿನಲ್ಲಿ ಜಿಲ್ಲೆಗೆ 22.30 ಕೋಟಿ ರೂ. ಹಣ ಬರಲಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳ 5,026 ರೈತರ ಖಾತೆಗೆ ಹಣ ಸಂದಾಯವಾಗಲಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ರಾಜ್ಯದಲ್ಲೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೆಚ್ಚು ಸಾಲ ಪಡೆದ ಜಿಲ್ಲೆಗಳಲ್ಲಿ ರಾಯಚೂರು ಮೂರನೇ ಸ್ಥಾನದಲ್ಲಿತ್ತು. ಮೊದಲ ಸ್ಥಾನದಲ್ಲಿ ಕಲಬುರಗಿ ಇದ್ದರೆ,ಎರಡನೇ ಸ್ಥಾನದಲ್ಲಿ ಬೆಳಗಾವಿ ಇತ್ತು. ಆದರೆ, ಹಣ ಬಿಡುಗಡೆ ವಿಚಾರದಲ್ಲಿ ಜಿಲ್ಲೆಗೆ ಹೆಚ್ಚು ಬಂದಿದೆ. ಇನ್ನು ಕಲಬುರಗಿ ಜಿಲ್ಲೆಗೆ 21.12 ಕೋಟಿ ಬರಲಿದ್ದು, 4,969 ರೈತರಿಗೆ ಲಾಭ ಸಿಗಲಿದೆ. ಬೆಂಗಳೂರು ನಗರ ವ್ಯಾಪ್ತಿಯ 100 ರೈತರ ಖಾತೆಗಳನ್ನು ಆಯ್ಕೆ ಮಾಡಿದ್ದು, 46.92 ಲಕ್ಷ ಬಿಡುಗಡೆಯಾಗಲಿದ್ದು, ಕೊನೆ ಸ್ಥಾನದಲ್ಲಿದೆ.


258 ಕೋಟಿ ರೂ.ಬಿಡುಗಡೆ: ರಾಜ್ಯದ 30 ಜಿಲ್ಲೆಗಳ ರೈತರ ಸಾಲಮನ್ನಾಕ್ಕಾಗಿ ಸರ್ಕಾರ 258 ಕೋಟಿ ರೂ. ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಅದರಲ್ಲಿ 57,994 ರೈತರ ಖಾತೆಗಳಿಗೆ ಹಣ ಜಮಾ ಆಗಲಿದೆ. ಆದರೆ, ಜಿಲ್ಲೆಗೆ ಬಿಡುಗಡೆಯಾದ ಹಣವನ್ನು ಖಾತೆಗಳ ಸಂಖ್ಯೆಯಿಂದ ವಿಭಜಿಸಿದರೆ ಪ್ರತಿ ಖಾತೆಗೆ 44,377 ರೂ.ಬರಲಿದೆ. ಮುಖ್ಯಮಂತ್ರಿ ಈಚೆಗೆ ಸಿಂಧನೂರಿಗೆ ಬಂದಾಗ ಹೇಳಿದಂತೆ ಮೊದಲ ಕಂತಿನ ಹಣ ಇದಾಗಿರಬಹುದು ಎನ್ನಲಾಗುತ್ತಿದೆ. ಆದರೆ,ಆಯಾ ಜಿಲ್ಲೆಗಳ ಖಾತೆಗಳಿಗೆ ಅನುಗುಣವಾಗಿ ವಿಂಗಡಿಸಿದರೂ ಆಸುಪಾಸು 50 ಸಾವಿರ ರೂ.ಒಳಗೆ ಬರಲಿದೆ.

ಇನ್ನೂ ನಡೆದಿದೆ ನೋಂದಣಿ: ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ 245 ಶಾಖೆಗಳಿದ್ದು, ಅದರಲ್ಲಿ 190 ಶಾಖೆಗಳಲ್ಲಿ ರೈತರ ಬೆಳೆ ಸಾಲ ನೀಡಲಾಗಿದೆ. ಹೀಗಾಗಿ, 190 ಶಾಖೆಗಳಲ್ಲಿ ಮಾತ್ರ ದಾಖಲೀಕರಣ ನಡೆಯುತ್ತಿದೆ. ಜಿಲ್ಲೆಯಲ್ಲಿ ಒಟ್ಟು 1,23,470 ರೈತರು ಬೆಳೆ ಸಾಲ ಪಡೆದಿದ್ದು, ಈವರೆಗೆ 88 ಸಾವಿರ ಖಾತೆಗಳ ರೈತರು ದಾಖಲೆ ಸಲ್ಲಿಸಿದ್ದಾರೆ. ಅಂದರೆ ಶೇ.73 ಆಗಿದೆ. ಜಿಲ್ಲಾಡಳಿತ ಪ್ರಕಟಣೆ ಪ್ರಕಾರ ಜ.31ರವರೆಗೆ ದಾಖಲೀಕರಣ ನಡೆಯುತ್ತಿದೆ. ಆದರೆ, ಸರ್ವರ್‌ ಸಮಸ್ಯೆ ಸೇರಿ ಕೆಲ ತಾಂತ್ರಿಕ ತೊಂದರೆಗಳಿಂದ ರೈತರು ನಿತ್ಯ ಬ್ಯಾಂಕ್‌ಗಳಿಗೆ ಅಲೆಯುವಂತಾಗಿದೆ.

Advertisement

ರಾಜ್ಯ ಸರಕಾರಸಾಲಮನ್ನಾದ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿದ್ದು, ಶುಕ್ರವಾರ ಪ್ರಾಯೋಗಿಕವಾಗಿ ರೈತರ ಖಾತೆಗಳಿಗೆ ಒಂದು ರೂ.ಜಮಾ ಮಾಡಿದೆ. ಈಗ ಜಿಲ್ಲೆಗೆ 22.30 ಕೋಟಿ ರೂ.ಬಂದಿದ್ದು ರಾಜ್ಯದಲ್ಲೇ ಹೆಚ್ಚು. ಅಲ್ಲದೇ, ಹೆಚ್ಚು ಫಲಾನುಭವಿಗಳು ಇಲ್ಲಿಂದಲೇ ಆಯ್ಕೆಯಾಗಿದ್ದಾರೆ. ಶನಿವಾರ, ಭಾನುವಾರ ರಜೆ ಇರುವ ಕಾರಣ ಸೋಮವಾರ ರೈತರ ಖಾತೆಗೆ ಹಣ ಜಮಾ ಆಗಬಹುದು.
– ರಂಗನಾಥ್‌ ಎಸ್‌. ನೂಲಿಕರ್‌,ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ, ರಾಯಚೂರು.

ರಾಜ್ಯ ಸರ್ಕಾರ ಸಾಲಮನ್ನಾ ಹಣವಾಗಿ 22.30 ಕೋಟಿ ರೂ.ಬಿಡುಗಡೆ ಮಾಡಿರುವುದಾಗಿ ಘೋಷಿಸಿದೆ. ಮೊದಲ ಕಂತಿನಲ್ಲಿ ಜಿಲ್ಲೆಗೆ ಹೆಚ್ಚು ಹಣ ಬಿಡುಗಡೆ ಆಗಿದೆ. 5,026 ರೈತರಿಗೆ ಲಾಭ ಸಿಗಲಿದೆ.
– ಶರತ್‌ ಬಿ., ಜಿಲ್ಲಾಧಿಕಾರಿ.

– ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next