ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಖಾಸಗಿ ಲೇವಾದೇವಿದಾರರು ಹಾಗೂ ಗಿರವಿದಾರರಿಂದ ಬಡವರು ಹಾಗೂ ರೈತರು ಪಡೆದಿದ್ದ ಸಾಲದ ಒಂದಾವರ್ತಿ ಮನ್ನಾಗಾಗಿ ರೂಪಿಸಿದ್ದ “ಋಣಮುಕ್ತ ಪರಿಹಾರ ಕಾಯ್ದೆ’ ಒಂದು ರೀತಿಯಲ್ಲಿ ಅಡಕತ್ತರಿಯಲ್ಲಿ ಸಿಲುಕಿಕೊಂಡಂತಾಗಿದೆ. ಹಿಂದಿನ ಸರ್ಕಾರ ರೂಪಿಸಿದ್ದ ಕಾಯ್ದೆಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಸಿಕ್ಕಿದೆ. ಆದರೂ ಉಪ ವಿಭಾಗಾಧಿಕಾರಿಗಳು ಅರ್ಜಿ ಸ್ವೀಕರಿಸುತ್ತಿದ್ದಾರೆ.
ಸರ್ಕಾರವು ತಡೆಯಾಜ್ಞೆ ತೆರವುಗೊಳಿಸುವ ವಿಚಾರದಲ್ಲಿ ಮೌನವಾಗಿದೆ. ಏಕೆಂದರೆ, ಕಾಯ್ದೆ ರೂಪಿಸುವ ಮುನ್ನ ಕಾನೂನು ಹಾಗೂ ಸಹಕಾರ ಇಲಾಖೆಯ ಸಲಹೆ ಪಡೆದಿಲ್ಲವೆಂಬ ಸಮಜಾಯಿಷಿ ನೀಡಲಾಗುತ್ತಿದೆ. ಹೀಗಾಗಿ, ಖಾಸಗಿಯವರಲ್ಲಿ ಸಾಲ ಪಡೆದವರಿಗೆ ಮನ್ನಾ ಆಗುವುದೋ, ಇಲ್ಲವೋ ಎಂಬ ಚಿಂತೆಯಾದರೆ, ಸಾಲ ಕೊಟ್ಟವರಿಗೆ ತಮ್ಮ ಹಣ ಖೋತಾ ಆಗುವ ಆತಂಕ ಎದುರಾಗಿದೆ.
ಒಂದೆಡೆ ಕಾಯ್ದೆ ಪ್ರಕಾರ ಜುಲೈ 23ರಿಂದಲೇ ಉಪ ವಿಭಾಗಾಧಿಕಾರಿಗಳ ಕಚೇರಿಗಳಲ್ಲಿ ಅರ್ಜಿಗಳ ಸ್ವೀಕಾರ ನಡೆಯುತ್ತಿದ್ದು, 90 ದಿನಗಳಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮತ್ತೂಂದೆಡೆ, ನ್ಯಾಯಾಲಯದ ತಡೆಯಾಜ್ಞೆಯೂ ಇದೆ. ಮುಂದೇನಾಗಲಿದೆ ಎಂಬ ಗೊಂದಲ ಮುಂದುವರಿದಿದೆ. ಹಿಂದಿನ ಸಮ್ಮಿಶ್ರ ಸರ್ಕಾರ ಕಾಯ್ದೆ ರೂಪಿಸಿರುವು ದರಿಂದ ಈಗಿನ ಸರ್ಕಾರ ಆ ಬಗ್ಗೆ ಹೆಚ್ಚು ತಲೆ ಕೆಡಿಸಿ ಕೊಳ್ಳುತ್ತಿಲ್ಲ.
ಕಾಯ್ದೆ ರೂಪಿಸುವ ಮುನ್ನ ಕಾನೂನು ಬದ್ಧ ವಾಗಿ ವ್ಯವಹಾರ ನಡೆಸುವ ಖಾಸಗಿ ಲೇವಾದೇವಿದಾರರು ಹಾಗೂ ಗಿರವಿದಾರರ ಅಭಿಪ್ರಾಯ ಸಂಗ್ರಹಿಸಿಲ್ಲವೆಂಬ ದೂರೂ ಇರುವುದರಿಂದ ಸರ್ಕಾರ ಆ ವಿಚಾರದಲ್ಲಿ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಆದರೆ, ಋಣಮುಕ್ತ ಪರಿಹಾರ ಕಾಯ್ದೆಯಡಿ ತಾವು ಪಡೆದ ಸಾಲ ಮನ್ನಾ ಆಗಲಿದೆ ಎಂದು ಸಾಲ ಪಡೆದವರು ಅಸಲು ಅಥವಾ ಬಡ್ಡಿ ಕಟ್ಟುವುದನ್ನು ಬಿಟ್ಟು ಸರ್ಕಾರದ ಕಡೆ ನೋಡುತ್ತಿದ್ದಾರೆ.
ಬೆಳೆ ಸಾಲ ಮನ್ನಾ ಆಗಲಿದೆ ಎಂದು ಪಾವತಿಸದೆ ಸುಮ್ಮನಾಗಿ ನಂತರ ಷರತ್ತುಗಳಿಗೆ ಅನ್ವಯ ಎಂದಿದ್ದರಿಂದ ಹೆಚ್ಚಿನ ಬಡ್ಡಿ ಸಮೇತ ಪಾವತಿಸುವ ಅನಿವಾರ್ಯತೆ ಎದುರಾಗಿತ್ತು. ಅದೇ ರೀತಿ ಇಲ್ಲಿಯೂ ಆಗಬಹುದಾ? ಎಂಬ ಭಯವೂ ಅವರನ್ನು ಕಾಡುತ್ತಿದೆ. ಸರ್ಕಾರದ ಅಧಿಸೂಚನೆ ಪ್ರಕಾರ ಅರ್ಜಿ ಸ್ವೀಕರಿಸುವುದಷ್ಟೇ ನಮ್ಮ ಕೆಲಸ. ಮುಂದಿನದು ಸರ್ಕಾರಕ್ಕೆ ಬಿಟ್ಟಿದ್ದು. ಇದೀಗ ಅರ್ಜಿ ಸ್ವೀಕಾರ ಮಾಡಿದರೂ ನ್ಯಾಯಾಲಯದ ತೀರ್ಪು ನಂತರವಷ್ಟೇ ವಿಲೇವಾರಿ ಪ್ರಕ್ರಿಯೆ ಪ್ರಾರಂಭವಾಗಬೇಕಾಗುತ್ತದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಏನಿದು ಕಾಯ್ದೆ?: ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಸಹಕಾರ ಸಂಘ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಪಡೆದ ಸಾಲ ಮನ್ನಾ ಮಾಡಲಾಗಿತ್ತು. ಖಾಸಗಿ ಲೇವಾದೇವಿದಾರರು ಹಾಗೂ ಗಿರವಿದಾರರಿಂದ ಪಡೆದ ಸಾಲವೂ ಮನ್ನಾ ಮಾಡುವ ಉದ್ದೇಶದಿಂದ ಋಣಮುಕ್ತ ಪರಿಹಾರ ಕಾಯ್ದೆ ರೂಪಿಸಿ ರಾಷ್ಟ್ರಪತಿಯವರ ಒಪ್ಪಿಗೆಗೆ ಕಳುಹಿಸಲಾಗಿತ್ತು. ರಾಷ್ಟ್ರಪತಿಯವರ ಅಂಕಿತ ದೊರೆತ ನಂತರ ಅಧಿಸೂಚನೆ ಸಹ ಹೊರಡಿಸಲಾಗಿತ್ತು. ಅದರಂತೆ ಜುಲೈ 23ರಿಂದ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. 90 ದಿನ ಕಾಲಾವಕಾಶವಿದ್ದು, ಒಂದು ವರ್ಷದಲ್ಲಿ ವಿಲೇವಾರಿ ಪ್ರಕ್ರಿಯೆ ಪೂರ್ಣಗೊಳ್ಳಬೇಕಾಗಿದೆ. ಇದೀಗ ಕಾಯ್ದೆ ಜಾರಿಗೆ ಮುಂದೇನು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ದೊರೆಯದಂತಾಗಿದೆ.
“ದಾಖಲೆ’ ತಲೆ ಬಿಸಿ: ಖಾಸಗಿ ಲೇವಾದೇವಿದಾರರು ಹಾಗೂ ಗಿರವಿದಾರರ ಬಳಿ ಕೈ ಸಾಲ ಪಡೆದವರೇ ಹೆಚ್ಚು. ಸಾಲ ಕೊಟ್ಟಿದ್ದಕ್ಕೂ, ತೆಗೆದುಕೊಂಡಿದ್ದಕ್ಕೂ ಯಾವುದೇ ದಾಖಲೆಯಿಲ್ಲ. ಮತ್ತೂಂದೆಡೆ, ನಿಯಮಾವಳಿ ಪ್ರಕಾರ ನೋಂದಣಿ ಮಾಡಿಕೊಂಡಿರುವ ಲೇವಾದೇವಿದಾರರು ಹಾಗೂ ಗಿರವಿದಾರರು ಜಮೀನು ಅಥವಾ ಚಿನ್ನಾಭರಣ ಅಡಮಾನ ಇಟ್ಟುಕೊಂಡು ಸಾಲ ನೀಡಿದ್ದಾರೆ. ಇದು ಕಾನೂನು ಬದ್ಧ ಆಗಿರುವುದರಿಂದ ಮನ್ನಾ ಮಾಡಲು ಬರುವುದಿಲ್ಲ. ಆದರೂ ಅರ್ಜಿ ಸಲ್ಲಿಸಲಾಗುತ್ತಿದೆ. ಇದು ಅಧಿಕಾರಿಗಳಿಗೂ ತಲೆನೋವಾಗಿ ಪರಿಣಮಿಸಿದೆ.
* ಎಸ್. ಲಕ್ಷ್ಮಿನಾರಾಯಣ