ಧಾರವಾಡ: ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿರುವ ರೈತರ ಸಾಲಮನ್ನಾ, ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಹಾಗೂ ಗ್ರಾಮೀಣ ಕಿಸಾನ್ ಕಾಂಗ್ರೆಸ್ ಘಟಕದ ವತಿಯಿಂದ ನಗರದ ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಬಳಿಕ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು. ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಮಾತನಾಡಿ, ಮೋದಿ ನೇತೃತ್ವದ ಎನ್‌ಡಿಎ ಸರಕಾರ ಸಂಪೂರ್ಣ ರೈತ ವಿರೋಧಿಯಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ನಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡುವಂತೆ ರೈತರು ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದರೂ ಸ್ಪಂದಿಸುತ್ತಿಲ್ಲ.
ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು ಹಾಗೂ ಅರುಣ ಜೇಟಿ ಅವರು, ರೈತರ ಸಾಲ ಮನ್ನಾ ಮಾಡಲು ಸಾಧ್ಯವೇ ಇಲ್ಲ ಎಂಬ ಹೇಳಿಕೆ ನೀಡುವ ಮೂಲಕ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು. ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿದ್ದ ರೈತರ ಸಾಲವನ್ನು ಮನ್ನಾ ಮಾಡಿತ್ತು.
ರಾಜ್ಯದ ಜನತೆ ಹಾಗೂ ರೈತರ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರ ಸಹಕಾರಿ ಕ್ಷೇತ್ರದ 50 ಸಾವಿರ ರೂ.ವರೆಗೆ ಸಾಲ ಮನ್ನಾ ಮಾಡಿದ್ದಾರೆ. ಕೂಡಲೇ ಕೇಂದ್ರ ಸರಕಾರ ರೈತರ ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಸಾಲವನ್ನು ಮನ್ನಾ ಮಾಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಮುಖಂಡ ಶರಣಪ್ಪ ಮತ್ತಿಕಟ್ಟಿ, ಕಿಸಾನ್ ಕಾಂಗ್ರೆಸ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಕಿತ್ತೂರ, ಮಕಬೂಲ್ ಸಾವಂತನವರ, ಗ್ರಾಮೀಣ ಜಿಲ್ಲಾಧ್ಯಕ್ಷ ಶಿವಾನಂದ ಹೊಳಹಡಗಲಿ, ಕೆಪಿಸಿಸಿ ಸದಸ್ಯರಾದ ರಾಬರ್ಟ್ ದದ್ದಾಪುರಿ, ಮರಿಗೌಡ ಪಾಟೀಲ, ಶಿವಕುಮಾರ ಹನಸಿ, ಶಿವಾನಂದ ಹೊರಕೇರಿ, ವಿನಯ ಯಲಿವಾಳ, ಆನಂದ ಜಾಧವ ಸೇರಿದಂತೆ ಹಲವರು ಇದ್ದರು.